Union Budget 2023; ಅಮೃತ ಕಾಲಕ್ಕೆ ಎಲ್ಲಾ ಸೌಕರ್ಯ ಒದಗಿಸುವ ಬಜೆಟ್, ಜೋಶಿ
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2023-24ನೇ ಸಾಲಿನ ಬಜೆಟ್ ಮಂಡಿಸಿದ್ದಾರೆ. ಬಜೆಟ್ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರತಿಕ್ರಿಯೆ ನೀಡಿದ್ದಾರೆ.
ನವದೆಹಲಿ, ಫೆಬ್ರವರಿ 01; ಬುಧವಾರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2023-24ನೇ ಸಾಲಿನ ಬಜೆಟ್ ಮಂಡನೆ ಮಾಡಿದರು. ಬಜೆಟ್ ಬಗ್ಗೆ ಹಲವಾರು ನಾಯಕರು ಪ್ರತಿಕ್ರಿಯೆ ನೀಡುತ್ತಿದ್ದಾರೆ.
ನಿರ್ಮಲಾ ಸೀತಾರಾಮನ್ ಬಜೆಟ್ ಭಾಷಣದ ಬಳಿಕ ಧಾರವಾಡ ಸಂಸದ, ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ, "ಭಾರತ ಅಮೃತ ಕಾಲಕ್ಕೆ ಬೇಕಾದ ಎಲ್ಲ ಸೌಕರ್ಯ ಒದಗಿಸುವ ಬಜೆಟ್ ಇದು" ಎಂದು ಹೇಳಿದ್ದಾರೆ.
ಸಚಿವರು ಅಮೃತ್ ಕಾಲ ಬಜೆಟ್ ಎಂಬ ಹ್ಯಾಷ್ ಟ್ಯಾಗ್‌ನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕರ್ನಾಟಕದ ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ಅನುದಾನ ನೀಡಿದ್ದಕ್ಕೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, 'ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂಪಾಯಿ ಅನುದಾನ ನೀಡಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರು, ಕೇಂದ್ರ ವಿತ್ತ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮ್ ಅವರು ಹಾಗೂ ಜಲ ಶಕ್ತಿ ಸಚಿವರಾದ ಗಜೇಂದ್ರ ಸಿಂಗ್ ಶೇಖಾವತ್ ಸವರಿಗೆ ಹೃದಯ ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇನೆ. ಈ ಅನುದಾನವೂ ಯೋಜನೆಯ ಅನುಷ್ಠಾನಕ್ಕೆ ಬಲ ನೀಡಲಿದ್ದು, ಮಧ್ಯ ಕರ್ನಾಟಕ ಭಾಗದ ಬರಪೀಡಿತ ಪ್ರದೇಶಗಳ ನೀರಿನ ಸಮಸ್ಯೆಯನ್ನು ಬಗೆಹರಿಸಲಿದೆ" ಎಂದು ಹೇಳಿದ್ದಾರೆ.
"ಕರ್ನಾಟಕದ ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಾಗಿ ಘೋಷಿಸಲಾಗಿದ್ದು, 5,300 ಕೋಟಿ ರೂ. ಹಣವನ್ನು ಮೀಸಲಿಡಲಾಗಿದೆ. ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಿದ್ದರಿಂದ 16,000 ಕೋಟಿ ರೂ. ಈ ಯೋಜನೆಗೆ ಲಭ್ಯವಾಗಲಿದೆ" ಎಂದು ತಿಳಿಸಿದ್ದಾರೆ.
"ಯೋಜನೆಯಿಂದ ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ ಮತ್ತು ತುಮಕೂರು ಜಿಲ್ಲೆಗಳ ಸುಮಾರು 2.25 ಲಕ್ಷ ಹೆಕ್ಟೇರ್‌ಗೆ ಸುಮಾರು 19 ಟಿಎಂಸಿ ಅಡಿ ನೀರಾವರಿ ಒದಗಿಸುತ್ತದೆ. ವಾಣಿ ವಿಲಾಸ ಜಲಾಶಯದ ಸಾಮರ್ಥ್ಯವನ್ನು ಹೆಚ್ಚಿಸುವುದರೊಂದಿಗೆ 10.8 ಟಿಎಂಸಿ ಅಡಿ ನೀರನ್ನು ಬಳಸಿ 350ಕ್ಕೂ ಹೆಚ್ಚು ಟ್ಯಾಂಕ್‌ಗಳನ್ನು ತುಂಬಿಸಲು ಯೋಜಿಸಲಾಗಿದೆ" ಎಂದು ಸಚಿವರು ಮಾಹಿತಿ ಹಂಚಿಕೊಂಡಿದ್ದಾರೆ.

ಕೇಂದ್ರ ಸರ್ಕಾರಕ್ಕೆ ಧನ್ಯವಾದಗಳು; ಇನ್ನು ಏಕಲವ್ಯ ಮಾದರಿ ವಸತಿ ಶಾಲೆಗಳ ಮೂಲಕ 3.5 ಲಕ್ಷ ವಿದ್ಯಾರ್ಥಿಗಳಿಗೆ ಉಪಯೋಗವಾಗುವಂತೆ 38,800 ಶಿಕ್ಷಕರನ್ನು ನೇಮಿಸಲು ಮುಂದಾಗಿರುವ ಬಗ್ಗೆಯೂ ಸಚಿವರು ಹರ್ಷ ವ್ಯಕ್ತಪಡಿಸಿದ್ದಾರೆ.
'ದೇಶದಲ್ಲಿ ಇರುವ ಬುಡಕಟ್ಟು ಜನಾಂಗದ ಮಕ್ಕಳ ವಿದ್ಯಾಭ್ಯಾಸವನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರಕಾರವು ಬಜೆಟ್ ಮಂಡನೆಯಲ್ಲಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದೆ" ಎಂದು ಹೇಳಿದ್ದಾರೆ.
'ಏಕಲವ್ಯ ಮಾದರಿ ವಸತಿ ಶಾಲೆಗಳ ಮೂಲಕ 3.5 ಲಕ್ಷ ವಿದ್ಯಾರ್ಥಿಗಳಿಗೆ ಉಪಯೋಗವಾಗಲಿದೆ. ದೇಶದ ಕಟ್ಟಕಡೆಯ ಜನರಿಗೂ ಕೂಡ ಶಿಕ್ಷಣ ಸೌಲಭ್ಯ ಒದಗಿಸಿ ಸಾಮಾನ್ಯ ಜನರ ಜೀವನವನ್ನು ಉತ್ತಮವಾಗಿಸಲು ಶ್ರಮಿಸುತ್ತಿರುವ ಪ್ರಧಾನಮಂತ್ರಿ ಮೋದಿಯವರ ನೇತೃತ್ವದ ಕೇಂದ್ರ ಸರಕಾರಕ್ಕೆ ಧನ್ಯವಾದಗಳು' ಎಂದಿದ್ದಾರೆ.
'ದೇಶದಲ್ಲಿ ಎಲ್ಲರಿಗೂ ವಸತಿ ಕಲ್ಪಿಸುವ ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ಯೋಜನೆಯಲ್ಲಿ ಒಂದಾದ ಪ್ರಧಾನಮಂತ್ರಿ ಆವಾಸ್ ಯೋಜನೆಗೆ ಕಳೆದ ಬಜೆಟ್‌ನಲ್ಲಿ ರೂ. 48,000 ಕೋಟಿ ಘೋಷಿಸಿದ್ದ ಕೇಂದ್ರ ಸರಕಾರ, ಈ ಬಾರಿಯ ಬಜೆಟ್‌ನಲ್ಲಿ ರೂ. 79,000 ಕೋಟಿ ಘೋಷಿಸುವ ಮೂಲಕ ಜನಸಾಮಾನ್ಯರ ಪರವಾಗಿ ಬಜೆಟ್ ಮಂಡನೆ ಮಾಡಿದೆ. ಈ ಯೋಜನೆಯಿಂದ ವಸತಿ ವಂಚಿತ ಕುಟುಂಬಗಳು ಮನೆ ನಿರ್ಮಿಸಿ ಉತ್ತಮ ಜೀವನ ನಡೆಸಬಹುದಾಗಿದೆ' ಎಂದು ಹೇಳಿದ್ದಾರೆ.
'ಸಣ್ಣ ಮತ್ತು ಮಧ್ಯಮ ಸ್ಥರದ ಉದ್ಯಮಗಳಿಗೆ ಉತ್ತೇಜನ ನೀಡುವ ಹಿನ್ನೆಲೆಯಲ್ಲಿ ಬಜೆಟ್‌ನಲ್ಲಿ ವಿಶೇಷ ಪ್ಯಾಕೇಜ್ ಘೋಷಿಸಿದ ಕೇಂದ್ರ ಸರಕಾರವು, ಸಂಭಾವ್ಯ ತೆರಿಗೆಯ ಮಿತಿಯನ್ನು ವಿಸ್ತರಿಸಿದೆ. ಈ ಮೂಲಕ ದೇಶದಲ್ಲಿರುವ ಸಣ್ಣ ಹಾಗೂ ಮಧ್ಯಮ ವರ್ಗದ ಉದ್ಯಮಗಳಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರಕಾರ ವಿಶೇಷವಾಗಿ ಕಾಳಜಿ ವಹಿಸಿದೆ' ಎಂದು ಸಚಿವರು ಬಣ್ಣಿಸಿದ್ದಾರೆ.












Click it and Unblock the Notifications