ಬಜೆಟ್; ಸೆಮಿ ಹೈ-ಸ್ಪೀಡು ರೈಲು, ಕೋಚ್ ಬದಲಾವಣೆ ಘೋಷಣೆ ನಿರೀಕ್ಷೆ
ನವದೆಹಲಿ, ಜನವರಿ 31; ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1ರ ಮಂಗಳವಾರ ಬೆಳಗ್ಗೆ 11 ಗಂಟೆಗೆ 2022-23ನೇ ಸಾಲಿನ ಬಜೆಟ್ ಮಂಡನೆ ಮಾಡಲಿದ್ದಾರೆ. ರೈಲ್ವೆ ಬಜೆಟ್ ಸಾಮಾನ್ಯ ಬಜೆಟ್‌ನಲ್ಲಿ ವಿಲೀನಗೊಂಡ ಬಳಿಕ ಮಂಡನೆಯಾಗುತ್ತಿರುವ 6ನೇ ಬಜೆಟ್ ಇದಾಗಿದೆ.
ತಮ್ಮ 4ನೇ ಬಜೆಟ್‌ನಲ್ಲಿ ನಿರ್ಮಲಾ ಸೀತಾರಾಮನ್ ರೈಲು ಪ್ರಯಾಣಿಕರಿಗೆ ಜೇಬಿಗೆ ದರ ಏರಿಕೆ ಮಾಡಿ ಕತ್ತರಿ ಹಾಕುವ ಸಾಧ್ಯತೆ ಕಡಿಮೆ ಇದೆ. ಬಜೆಟ್ ರೈಲು ದೂರದ ಪ್ರಯಾಣವನ್ನು ಆರಾಮದಾಯಕವಾಗಿಸುತ್ತ ಗಮನಹರಿಸಲಿದೆ. ಚುನಾವಣೆ ನಡೆಯುವ ರಾಜ್ಯಗಳಿಗೆ ಹೊಸ ಯೋಜನೆಗಳ ಘೋಷಣೆ ಆಗುವ ನಿರೀಕ್ಷೆ ಇದೆ.
ಭವಿಷ್ಯದ ಸಾರಿಗೆ ಉದ್ಯಮವನ್ನು ಗಮನದಲ್ಲಿಟ್ಟುಕೊಂಡು ಮೆಟ್ರೋ ಸಂಪರ್ಕ ಸೇವೆ ಹೆಚ್ಚಿಸುವತ್ತ ಹೆಚ್ಚುಗಮನ ಹರಿಸಲಾಗುತ್ತದೆ. ಎರಡನೇ ದರ್ಜೆಯ ನಗರಗಳು ಹಾಗೂ ಈಶಾನ್ಯ ರಾಜ್ಯಗಳಲ್ಲಿ ರೈಲು ಸಂಪರ್ಕ ಹೆಚ್ಚಿಸಲು ಬಜೆಟ್‌ನಲ್ಲಿ ವಿಶೇಷ ಗಮನ ನೀಡಲಾಗುತ್ತದೆ.
ರೈಲು ಪ್ರಯಾಣದರವನ್ನು ಏರಿಕೆ ಮಾಡದೇ ಸಾರಿಗೆ ಮತ್ತು ಇತರ ಮೂಲಗಳ ಮೂಲಕ ಆದಾಯ ಸಂಗ್ರಹಣೆಗೆ ರೈಲ್ವೆ ಇಲಾಖೆ ಗಮನಕೊಡಲಿದೆ. ಕೇಂದ್ರ ಸರ್ಕಾರ ಈ ವರ್ಷ ರೈಲು ಬಜೆಟ್ ವೆಚ್ಚವನ್ನು ಶೇ 15 ರಿಂದ 20ರಷ್ಟು ಹೆಚ್ಚಿಸುವ ನಿರೀಕ್ಷೆಯಿದೆ. ರೈಲ್ವೆ ಮೂಲ ಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಒತ್ತು ಬಜೆಟ್‌ನಲ್ಲಿ ಸಿಗಲಿದೆ.

ವಿದ್ಯುದೀಕರಣ ಕಾಮಗಾರಿಗೆ ಆದ್ಯತೆ
ಉತ್ತರ ಪ್ರದೇಶ ಸೇರಿದಂತೆ 5 ರಾಜ್ಯಗಳ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ರೈಲು ಪ್ರಯಾಣಿಕರಿಗಾಗಿ ಹೊಸ ಸೌಲಭ್ಯಗಳನ್ನು ಘೋಷಿಸಬಹುದು ಎಂದು ಅಂದಾಜಿಸಲಾಗಿದೆ. 2030ರ ಸಂಪೂರ್ಣ ವಿದ್ಯುದೀಕರಣದ ಗುರಿಯ ಅಂಗವಾಗಿ ಬ್ರಾಡ್-ಗೇಜ್ ರೈಲು ಮಾರ್ಗಗಳ ಸಂಪೂರ್ಣ ವಿದ್ಯುದೀಕರಣವನ್ನು 2023ರಲ್ಲಿ ಪೂರ್ಣಗೊಳಿಸಲು ಆದ್ಯತೆ ನೀಡಬಹುದು. ಈ ಬಾರಿ ದಾಖಲೆಯ 7,000 ಕಿ. ಮೀ. ರೈಲ್ವೆ ಹಳಿಯನ್ನು ವಿದ್ಯುದೀಕರಣಗೊಳಿಸುವುದಾಗಿ ಬಜೆಟ್‌ನಲ್ಲಿ ಘೋಷಣೆ ಮಾಡುವ ನಿರೀಕ್ಷೆ ಇದೆ.

ಹೈ-ಸ್ಪೀಡ್ ರೈಲು, ರೈಲು ಸಂಪರ್ಕಕ್ಕೆ ಆದ್ಯತೆ
ಕೆಳ ಮತ್ತು ಮಧ್ಯಮ ವರ್ಗದವರು ರೈಲ್ವೆ ಬಜೆಟ್ ಮೇಲೆ ಅಪಾರವಾದ ನಿರೀಕ್ಷೆ ಇಟ್ಟುಕೊಂಡಿರುತ್ತಾರೆ. ಬಜೆಟ್ ಭಾಷಣದಲ್ಲಿ ಹೈಸ್ಪೀಡ್ ರೈಲುಗಳನ್ನು ಘೋಷಣೆ ಮಾಡುವ ಸಾಧ್ಯತೆ ಇದೆ. ಚುನಾವಣೆ ನಡೆಯುವ ರಾಜ್ಯಗಳು ಮತ್ತು ಮೆಟ್ರೋ ನಗರಗಳಲ್ಲಿ ರೈಲು ಸಂಪರ್ಕವನ್ನು ಬಲಪಡಿಸಲು ಯೋಜನೆಗಳನ್ನು ಘೋಷಣೆ ಮಾಡಲಾಗುತ್ತದೆ. ಹೈ-ಸ್ಪೀಡ್ ರೈಲುಗಳ ಮೂಲಕ ನಗರಗಳ ನಡುವಿನ ಸಂಚಾರದ ಅವಧಿ ಕಡಿತಗೊಳಿಸುವ ಚಿಂತನೆ ಸಹ ಸರ್ಕಾರದ ಮುಂದಿದೆ. ಗಂಟೆಗೆ 180 ರಿಂದ 200 ಕಿ. ಮೀ. ವೇಗದಲ್ಲಿ ಸಂಚಾರ ನಡೆಸುವ ಸೆಮಿ ಹೈ-ಸ್ಪೀಡ್ ರೈಲುಗಳನ್ನು ಓಡಿಸುವ ಘೋಷಣೆ ನಿರೀಕ್ಷೆ ಮಾಡಲಾಗಿದೆ. ಈ ರೈಲುಗಳಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ಸಹ ಸೇರಿವೆ. ಪ್ರಯಾಣಿಕರ ರೈಲು ಹೊರತುಪಡಿಸಿ ಹೊಸ ಸರಕು ಸಾಗಣೆ ಕಾರಿಡಾರ್ ಸಹ ಘೋಷಣೆ ಮಾಡಬಹುದು.

ಬುಲೆಟ್ ರೈಲು, ಕೋಚ್ ಬದಲಾವಣೆ
ಈ ವರ್ಷದ ಬಜೆಟ್‌ನಲ್ಲಿ ನವದೆಹಲಿ ಮತ್ತು ವಾರಣಾಸಿ ನಡುವೆ ಬುಲೆಟ್ ರೈಲು ಯೋಜನೆ ಘೋಷಣೆ ಮಾಡುವ ನಿರೀಕ್ಷೆ ಇದೆ. ಈಗಾಗಲೇ ಈ ಯೋಜನೆ ಕುರಿತು ಡಿಪಿಆರ್ ಸರ್ಕಾರಕ್ಕೆ ಸಲ್ಲಿಕೆಯಾಗಿದೆ. ದೇಶದ ಮೊದಲ ಬುಲೆಟ್ ರೈಲು ಯೋಜನೆ ಅಹಮದಾಬಾದ್-ಮುಂಬೈ ಕಾಮಗಾರಿ ಇನ್ನೂ ನಡೆಯುತ್ತಿದೆ.
ರೈಲುಗಳಲ್ಲಿನ ಎಲ್ಲಾ ಹಿಂದಿನ ಐಸಿಎಚ್ ಕೋಚ್‌ಗಳನ್ನು ಹೊಸ ಎಲ್‌ಎಚ್‌ಬಿ ಕೋಚ್‌ಗಳೊಂದಿಗೆ ಬದಲಾಯಿಸುವ ಘೋಷಣೆ ನಿರೀಕ್ಷೆ ಮಾಡಲಾಗಿದೆ. 6,500 ಅಲ್ಯೂಮಿನಿಯಂ ಕೋಚ್ ತಯಾರಿ, 1,240 ಇಂಜಿನ್‌ಗಳು ಮತ್ತು ಸುಮಾರು 35,000 ವ್ಯಾಗನ್ ತಯಾರಿಸುವ ಪ್ರಸ್ತಾಪವನ್ನು ಬಜೆಟ್‌ನಲ್ಲಿ ನಿರೀಕ್ಷೆ ಮಾಡಬಹುದು.
Recommended Video

ಹೊಸ ಡೆಕ್ಕನ್ ಕ್ವೀನ್ ರೈಲುಗಳ ಘೋಷಣೆ
ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಲು ಹೊಸ ಡೆಕ್ಕನ್ ಕ್ವೀನ್ ಕೋಚ್ ರೈಲುಗಳನ್ನು ಘೋಷಣೆ ಮಾಡುವ ನಿರೀಕ್ಷೆ ಇಎ. ಚೆನ್ನೈನ ಇಂಟೆಗ್ರಲ್ ಕೋಚ್ ಫ್ಯಾಕ್ಟರಿಯಲ್ಲಿ ಈ ಮಾದರಿ ಕೋಚ್ ತಯಾರಿಸಲಾಗುತ್ತಿದೆ. 5 ಎಸಿ ಚೇರ್ ಕಾರ್, 12 ನಾನ್ ಎಸಿ ಚೇರ್ ಕಾರ್ ಕೋಚ್‌ಗಳು ಮತ್ತು ಒಂದು ಪ್ಯಾಂಟ್ರಿ ಕಮ್ ಡೈನಿಂಗ್ ಕೋಚ್ ಮಾಡಲಾಗುತ್ತಿದೆ. ಡೆಕ್ಕನ್ ಕ್ವೀನ್ ರೈಲುಗಳು 20 ಬೋಗಿ ಹೊಂದಿದ್ದು, ಪ್ರತಿಯೊಂದೂ ಬೋಗಿಯೂ ಅತ್ಯುನ್ನತ ತಂತ್ರಜ್ಞಾನ ವ್ಯವಸ್ಥೆ ಹೊಂದಿರಲಿದೆ.
ಕಳೆದ ಬಜೆಟ್‌ನಲ್ಲಿ ಪೂರ್ವ ಕರಾವಳಿ, ಪೂರ್ವ-ಪಶ್ಚಿಮ ಮತ್ತು ಉತ್ತರ-ದಕ್ಷಿಣ ಮಾರ್ಗಗಳಿಗೆ ಹೊಸ ಡಿಎಫ್‌ಸಿ ಕಾರಿಡಾರ್ ನಿರ್ಮಿಸುವ ಯೋಜನೆಯನ್ನು ಘೋಷಸಲಾಗಿತ್ತು. ಈಶಾನ್ಯ ರಾಜ್ಯಗಳಲ್ಲಿ ರೈಲು ಸೇವೆ ಬಲಪಡಿಸಲು ಕೆಲವು ಘೋಷಣೆಗಳನ್ನು ನಿರೀಕ್ಷೆ ಮಾಡಲಾಗಿದೆ. ಕೆಲವೇ ದಿನಗಳ ಹಿಂದೆ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ವೈಮಾನಿಕ ಸಮೀಕ್ಷೆಯ ಮೂಲಕ ಮಣಿಪುರದ ಜಿರಿಬಾಮ್-ಇಂಫಾಲ್ ಹೊಸ ಮಾರ್ಗದ ಯೋಜನೆ ಪರಿಶೀಲಿಸಿದ್ದಾರೆ.












Click it and Unblock the Notifications