ಹರ್ಯಾಣದಲ್ಲಿ ಬಿಜೆಪಿ, ಜೆಜೆಪಿ ಮೈತ್ರಿ ಸರ್ಕಾರ; ಖಟ್ಟರ್ ಸಿಎಂ
ನವದೆಹಲಿ, ಅಕ್ಟೋಬರ್ 25 : ಹರ್ಯಾಣದಲ್ಲಿ ಸರ್ಕಾರ ರಚನೆ ಕಸರತ್ತು ಅಂತ್ಯಗೊಂಡಿದೆ. ಬಿಜೆಪಿ ಮತ್ತು ಜೆಜೆಪಿ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಲಿದ್ದು, ಮನೋಹರ್ ಲಾಲ್ ಖಟ್ಟರ್ ಮತ್ತೆ ಮುಖ್ಯಮಂತ್ರಿಯಾಗಲಿದ್ದಾರೆ.
ಹರ್ಯಾಣ ವಿಧಾನಸಭೆ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಬಂದಿದೆ. 40 ಸ್ಥಾನಗಳನ್ನು ಪಡೆದು ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಬಿಜೆಪಿ ಜನನಾಯಕ ಜನತಾ ಪಕ್ಷ (ಜೆಜೆಪಿ) ಜೊತೆ ಸೇರಿ ಸರ್ಕಾರ ರಚಿಸಲಿದೆ.
ಶುಕ್ರವಾರ ನವದೆಹಲಿಯ ಹರ್ಯಾಣ ಭವನದಲ್ಲಿ ನಡೆದ ಸಭೆಯಲ್ಲಿ ಸರ್ಕಾರ ರಚನೆ ಕಸರತ್ತನ್ನು ಅಂತಿಮಗೊಳಿಸಲಾಗಿದೆ. ಬಿಜೆಪಿ-ಜೆಜೆಪಿ ಮೈತ್ರಿ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿ ಹುದ್ದೆ ಜೆಜೆಪಿ ಪಾಲಾಗಿದೆ. ಬಿಜೆಪಿಗೆ ಬೆಂಬಲ ನೀಡುವ ಜೆಜೆಪಿಗೆ 3 ಸಚಿವ ಸ್ಥಾನಗಳೂ ಸಿಗಲಿದೆ.

90 ಸದಸ್ಯ ಬಲದ ಹರ್ಯಾಣ ವಿಧಾನಸಭೆಯಲ್ಲಿ ಬಿಜೆಪಿ 40, ಕಾಂಗ್ರೆಸ್ 31, ಜೆಜೆಪಿ 10, ಐಎನ್‌ಎಲ್‌ಡಿ 1, ಹೆಚ್‌ಎಲ್‌ಪಿ 1 ಸ್ಥಾನದಲ್ಲಿ ಜಯಗಳಿಸಿದೆ. 7 ಪಕ್ಷೇತರ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಸರ್ಕಾರ ರಚನೆ ಮಾಡಲು ಬೇಕಾದ ಮ್ಯಾಜಿಕ್ ನಂಬರ್ 46.
ಮನೋಹರ್ ಲಾಲ್ ಖಟ್ಟರ್ ಶನಿವಾರ ರಾಜ್ಯಪಾಲರನ್ನು ಭೇಟಿ ಮಾಡಿ ಸರ್ಕಾರ ರಚನೆ ಮಾಡಲು ಹಕ್ಕು ಮಂಡನೆ ಮಾಡಲಿದ್ದಾರೆ. ರಾಜ್ಯಪಾಲರ ಒಪ್ಪಿಗೆ ನೀಡಿದ ಬಳಿಕ ಪ್ರಮಾಣ ವಚನದ ದಿನಾಂಕ ನಿಗದಿಯಾಗಲಿದೆ.
ಅಮಿತ್ ಶಾ ಜೊತೆಗಿನ ಸಭೆ ಬಳಿಕ ಮಾತನಾಡಿದ ಜೆಜೆಪಿ ನಾಯಕ ದುಷ್ಯಂತ್ ಚೌಟಾಲಾ, "ಹರ್ಯಾಣದಲ್ಲಿ ಸ್ಥಿರ ಸರ್ಕಾರ ನೀಡಲು ಬಿಜೆಪಿ-ಜೆಜೆಪಿ ಮೈತ್ರಿ ಮಾಡಿಕೊಂಡಿವೆ. ಅಮಿತ್ ಶಾ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ" ಎಂದರು.












Click it and Unblock the Notifications