"ಪರಿಕ್ಕರ್ ರಾಜೀನಾಮೆಗೆ ಬಿಜೆಪಿ ಅನಗತ್ಯ ಒತ್ತಡ ಹೇರುತ್ತಿದೆ"
ಪಣಜಿ, ಅಕ್ಟೋಬರ್ 25: ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರ ಅನಾರೋಗ್ಯದ ವಿಷಯ ಇಟ್ಟುಕೊಂಡು ಅವರ ಮೇಲೆ ರಾಜೀನಾಮೆಯ ಒತ್ತಡ ಹೇರಲಾಗುತ್ತಿದೆ ಎಂದು ಗೋವಾ ಆರೆಸ್ಸೆಸ್ ನ ಮಾಜಿ ಮುಖಂಡ ಸುಭಾಶ್ ವೆಲಿಂಗ್ಕರ್ ಆರೋಪಿಸಿದ್ದಾರೆ.
ಅವರನ್ನು ಹೇಗಾದರೂ ಮಾಡಿ ಅಧಿಕಾರದಿಂದ ಕೆಳಗಿಳಿಸಲೇಬೇಕು ಎಂಬ ಒತ್ತಡದಲ್ಲಿರುವ ಕೇಂದ್ರ ಸರ್ಕಾರ ಅವರ ಮೇಲೆ ಅನಗತ್ಯ ಒತ್ತಡ ಹೇರುತ್ತಿದೆ ಎಂದು ವೆಲಿಂಗ್ಕರ್ ಹೇಳಿದ್ದಾರೆ.
ಅವರು ಅನಾರೋಗ್ಯಕ್ಕೀಡಾಗಿರುವುದು ನಿಜ. ಆದರೆ ಆವರ ಮೇಲೆ ನಿರಂತರವಾಗಿ ಒತ್ತಡ ಹೇರುತ್ತಿರುವುದರಿಂದ ಅವರ ಆರೋಗ್ಯ ಮತ್ತಷ್ಟು ಹದಗೆಡುವಂತೆ ಬಿಜೆಪಿಯೇ ಮಾಡುತ್ತಿದೆ ಎಂದು ಅವರು ದೂರಿದರು.

'ಪರಿಕ್ಕರ್ ಅವರ ಆರೋಗ್ಯ ಸದ್ಯಕ್ಕೆ ಸುಸ್ಥಿತಿಯಲ್ಲಿದೆ. ಈ ಸಂದರ್ಭದಲ್ಲಿ ಬದಲಿ ಮುಖ್ಯಮಂತ್ರಿ ಆಯ್ಕೆಯ ಬಗ್ಗೆ ಬಿಜೆಪಿ ಯೋಚಿಸುವುದು ಸರಿಯಲ್ಲ. ಪರಿಕ್ಕರ್ ಅವರ ಸೇವೆ ಗೋವಾಕ್ಕೆ ಎಷ್ಟು ದಿನ ಸಿಗುತ್ತದೆಯೋ ಸಿಗಲಿ' ಎಂದು ಅವರು ಹೇಳಿದ್ದಾರೆ. ಪರಿಕ್ಕರ್ ಅವರ ಮೇಲೆ ಹೀಗೆಯೇ ಒತ್ತಡ ಹೇರುತ್ತಿದ್ದರೆ ಗೋವಾ ವಿಧಾನಸಭೆಯೇ ವಿಸರ್ಜನೆಯಾದರೆ ಅಚ್ಚರಿಯಿಲ್ಲ ಎಂದು ಸಹ ಅವರುಹೇಳಿದ್ದಾರೆ.
ಪ್ಯಾಂಕ್ರಿಯಾಟಿಕ್ ಸಮಸ್ಯೆಯಿಂದ ಬಳಲುತ್ತಿದ್ದ ಪರಿಕ್ಕರ್ ಕಳೆದ ಅಕ್ಟೋಬರ್ ನಿಂದ ವಿದೇಶದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.











Click it and Unblock the Notifications