ಲೋಕ ಚುನಾವಣೆಗೆ ಶೇ 33ರಷ್ಟು ಸ್ಥಾನ ಮಹಿಳೆಯರಿಗೆ: ಸಿಎಂ ಪಟ್ನಾಯಕ್
ಬಿಜು ಜನತಾ ದಳ ಪಕ್ಷದಿಂದ ಒಡಿಶಾದಲ್ಲಿನ 21 ಲೋಕಸಭಾ ಕ್ಷೇತ್ರಗಳ ಪೈಕಿ ಶೇಕಡಾ 33ರಷ್ಟು ಸ್ಥಾನವನ್ನು ಮಹಿಳೆಯರಿಗೆ ನೀಡುವುದಾಗಿ ಎಂದು ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಭಾನುವಾರ ಘೋಷಿಸಿದ್ದಾರೆ. ಇಂದೇ ಚುನಾವಣೆ ಆಯೋಗವು ಲೋಕಸಭಾ ಚುನಾವಣೆಗೆ ದಿನಾಂಕ ಘೋಷಣೆ ಮಾಡುವ ನಿರೀಕ್ಷೆ ಇದೆ.
'ಮಿಷನ್ ಶಕ್ತಿ' ಸಮಾವೇಶದಲ್ಲಿ ನವೀನ್ ಪಟ್ನಾಯಕ್ ಈ ಮುಖ್ಯ ಘೋಷಣೆ ಮಾಡಿದ್ದಾರೆ. ಇದೇ ಸೂತ್ರವನ್ನು ರಾಜ್ಯದ 147 ವಿಧಾನಸಭಾ ಕ್ಷೇತ್ರಗಳಿಗೂ ಅನ್ವಯ ಮಾಡುತ್ತೀರಾ ಎಂಬ ಪ್ರಶ್ನೆಗೆ ಪಟ್ನಾಯಕ್ ಉತ್ತರ ನೀಡಿಲ್ಲ. ಬಿಜೆಪಿಯು ಒಡಿಶಾದಲ್ಲಿ 7ರಿಂದ 8 ಸ್ಥಾನಗಳನ್ನು ಗೆಲ್ಲುವ ಇರಾದೆ ಹೊಂದಿದೆ.
ಒಡಿಶಾದಿಂದ ಶೇಕಡಾ 33ರಷ್ಟು ಮಹಿಳೆಯರನ್ನು ಸಂಸತ್ ಗೆ ಕಳುಹಿಸಲಿದ್ದೇವೆ. ಇದು ಮಾಜಿ ಮುಖ್ಯಮಂತ್ರಿ ಬಿಜು ಪಟ್ನಾಯಕ್ ಕನಸಾಗಿತ್ತು. ಮಹಿಳಾ ಸಬಲೀಕರಣದ ಆಸೆ ಅವರದಾಗಿತ್ತು. ಬಿಜು ಬಾಬು ಇಡೀ ದೇಶಕ್ಕೆ ದಾರಿ ತೋರಿದರು. ಪಂಚಾಯಿತಿ ಚುನಾವಣೆಗಳಲ್ಲಿ ಹಾಗೂ ಸರಕಾರಿ ಉದ್ಯೋಗದಲ್ಲಿ 33% ಮೀಸಲಾತಿ ತಂದರು. ಆವರ ಕನಸನ್ನು ನನಸು ಮಾಡುವ ಕಾರಣಕ್ಕೆ ಈ ದಿನ ಘೋಷಣೆ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ.

ರಾಜ್ಯ ಶಾಸನಸಭೆ ಹಾಗೂ ಸಂಸತ್ ನಲ್ಲಿ 33% ಮೀಸಲಾತಿ ತರುವ ಬಗ್ಗೆ ಕಳೆದ ನವೆಂಬರ್ ನಲ್ಲಿ ಒಡಿಶಾ ವಿಧಾನಸಭೆಯಲ್ಲಿ ನಿರ್ಣಯ ಮಂಡಿಸಲಾಗಿತ್ತು. ಸದ್ಯಕ್ಕೆ ಒಡಿಶಾದಲ್ಲಿ ಹನ್ನೊಂದು ಶಾಸಕಿಯರಿದ್ದರೆ, ಅದರಲ್ಲಿ ಹತ್ತು ಮಹಿಳೆಯರು ಬಿಜೆಡಿಯಿಂದ ಆಯ್ಕೆಯಾಗಿದ್ದಾರೆ. ಒಬ್ಬರು ಬಿಜೆಪಿಗೆ ಆಯ್ಕೆಯಾಗಿದ್ದಾರೆ.












Click it and Unblock the Notifications