ಕೋವ್ಯಾಕ್ಸಿನ್ 77.8% ಪರಿಣಾಮಕಾರಿ; ಅಂತಿಮ ಹಂತದ ವಿಶ್ಲೇಷಣೆ ಪೂರ್ಣ
ನವದೆಹಲಿ, ಜುಲೈ 03: ಹೈದರಾಬಾದ್ ಮೂಲದ ಲಸಿಕಾ ಅಭಿವೃದ್ಧಿ ಸಂಸ್ಥೆ ಭಾರತ್ ಬಯೋಟೆಕ್ ತನ್ನ ಕೋವ್ಯಾಕ್ಸಿನ್ ಕೊರೊನಾ ಲಸಿಕೆಯ ಮೂರನೇ ಹಂತದ ವಿಶ್ಲೇಷಣೆಯನ್ನು ಪೂರ್ಣಗೊಳಿಸಿರುವುದಾಗಿ ಶುಕ್ರವಾರ ಘೋಷಿಸಿದೆ. ಅದರ ಫಲಿತಾಂಶವನ್ನೂ ಪ್ರಕಟಿಸಿದೆ.
ಕೋವ್ಯಾಕ್ಸಿನ್ ಲಸಿಕೆಯು ಕೊರೊನಾ ಸೋಂಕಿನ ವಿರುದ್ಧ 77.8% ದಕ್ಷತೆ ತೋರಿರುವುದು ಸಾಬೀತಾಗಿದೆ ಎಂದು ಸಂಸ್ಥೆ ಹೇಳಿಕೊಂಡಿದೆ. ಸೋಂಕಿನಿಂದ ರೋಗಿಯನ್ನು ರಕ್ಷಿಸುವಲ್ಲಿ ಲಸಿಕೆ ಅತಿ ಪರಿಣಾಮಕಾರಿಯಾಗಿದೆ ಎಂಬುದನ್ನು ಸಂಸ್ಥೆ ದೃಢಪಡಿಸಿದೆ.

ಲಸಿಕೆಯ ವಿಶ್ಲೇಷಣಾ ವಿವರವನ್ನು ಹಂಚಿಕೊಂಡಿರುವ ಭಾರತ್ ಬಯೋಟೆಕ್, ಗಂಭೀರ ಕೊರೊನಾ ಸೋಂಕಿನ ವಿರುದ್ಧವೂ ಭಾರತ್ ಬಯೋಟೆಕ್ ಲಸಿಕೆ 93.4% ಪರಿಣಾಮಕಾರಿಯಾಗಿದೆ. ಜೊತೆಗೆ ಈಗಿರುವ ಅಪಾಯಕಾರಿ ಡೆಲ್ಟಾ ವಿರುದ್ಧ 65.2% ರಕ್ಷಣೆ ನೀಡುತ್ತದೆ ಎಂಬುದನ್ನು ಸ್ಪಷ್ಟಪಡಿಸಿದೆ.
ಲಕ್ಷಣರಹಿತ ಸೋಂಕಿನ ವಿರುದ್ಧ ರೋಗಿಗೆ ಲಸಿಕೆಯು 63.6% ರಕ್ಷಣೆ ನೀಡುತ್ತದೆ ಎಂಬುದು ಮೂರನೇ ಹಂತದ ದಕ್ಷತೆ ಪರೀಕ್ಷೆಯಲ್ಲಿ ತಿಳಿದುಬಂದಿರುವುದಾಗಿ ಪ್ರಕಟಿಸಿದೆ. ಲಸಿಕೆಯ ದಕ್ಷತೆ ಪ್ರಮಾಣ ಈ ಕೆಳಗಿನಂತಿದೆ...
ಲಕ್ಷಣರಹಿತ ಸೋಂಕಿನ ಪ್ರಕರಣ: 63% ಪರಿಣಾಮಕಾರಿ
ಸೌಮ್ಯ ಹಾಗೂ ಗಂಭೀರ ಸ್ವರೂಪದ ಸೋಂಕು: 78% ಪರಿಣಾಮಕಾರಿ
ಡೆಲ್ಟಾ ರೂಪಾಂತರ: 65% ಪರಿಣಾಮಕಾರಿ
ಅತಿ ಗಂಭೀರ ಸ್ವರೂಪದ ಸೋಂಕಿನ ಪ್ರಕರಣ: 93% ಪರಿಣಾಮಕಾರಿ
medRxiv ಯಲ್ಲಿ ಕೋವ್ಯಾಕ್ಸಿನ್ ಲಸಿಕೆಯ ಮೂರನೇ ಹಂತದ ವಿಶ್ಲೇಷಣೆಯನ್ನು ಪ್ರಕಟಿಸಲಾಗಿದೆ. ಲಸಿಕೆಯ ಪ್ರಯೋಗ ತಾಣಗಳಾಗಿ ಭಾರತದಾದ್ಯಂತ 25 ಆಸ್ಪತ್ರೆಗಳನ್ನು ಆರಿಸಿಕೊಳ್ಳಲಾಗಿತ್ತು. 18-98 ವಯಸ್ಸಿನ 25,800 ಮಂದಿಯನ್ನು ಈ ವಿಶ್ಲೇಷಣೆ ಒಳಗೊಂಡಿದೆ.
ಭಾರತದಲ್ಲಿ ಅನುಮೋದನೆ ಪಡೆದುಕೊಂಡಿರುವ ಲಸಿಕೆಗಳಲ್ಲಿ ಭಾರತ್ ಬಯೋಟೆಕ್‌ನ ಕೋವ್ಯಾಕ್ಸಿನ್ ಕೂಡ ಒಂದಾಗಿದೆ. ಜನವರಿ 16ರಿಂದ ದೇಶದಲ್ಲಿ ಲಸಿಕಾ ಅಭಿಯಾನ ನಡೆಯುತ್ತಿದ್ದು, ಕೋವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ ಲಸಿಕೆಯನ್ನು ನೀಡಲಾಗುತ್ತಿದೆ. ಈಚೆಗೆ ಸ್ಪುಟ್ನಿಕ್ ಲಸಿಕೆಗೂ ಅನುಮೋದನೆ ನೀಡಲಾಗಿದೆ.












Click it and Unblock the Notifications