ಜುಲೈ 31ರ ತನಕ ಅಂತರಾಷ್ಟ್ರೀಯ ವಿಮಾನ ಸಂಚಾರವಿಲ್ಲ
ನವದೆಹಲಿ, ಜುಲೈ 03 : ಅಂತರಾಷ್ಟ್ರೀಯ ವಿಮಾನಗಳ ಸಂಚಾರವನ್ನು ಜುಲೈ 31ರ ತನಕ ವಿಸ್ತರಣೆ ಮಾಡಿ ಆದೇಶ ಹೊರಡಿಸಲಾಗಿದೆ. ಮಾರ್ಚ್‌ನಲ್ಲಿ ಲಾಕ್ ಡೌನ್ ಘೋಷಣೆಯಾದ ಬಳಿಕ ವಿಮಾನಗಳ ಸಂಚಾರ ರದ್ದಾಗಿದೆ.
ಶುಕ್ರವಾರ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಈ ಕುರಿತು ಆದೇಶ ಹೊರಡಿಸಿದೆ. ಜುಲೈ 15ರ ತನಕ ಮೊದಲು ವಿಮಾನಗಳ ಹಾರಾಟಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಈಗ ಅದನ್ನು ಜುಲೈ 31ರ ತನಕ ವಿಸ್ತರಣೆ ಮಾಡಲಾಗಿದೆ.
ಕೇಂದ್ರ ಗೃಹ ಸಚಿವಾಲಯ ಹೊರಡಿಸಿದ್ದ ಅನ್ ಲಾಕ್ 2 ಮಾರ್ಗಸೂಚಿ ಜುಲೈ 31ರ ತನಕ ಜಾರಿಯಲ್ಲಿ ಇರುತ್ತದೆ. ಅಲ್ಲಿಯ ತನಕ ಮೆಟ್ರೋ, ಸಾಮಾನ್ಯ ವೇಳಾಪಟ್ಟಿ ಪ್ರಯಾಣಿಕ ರೈಲುಗಳು ಸಂಚಾರ ನಡೆಸುವುದಿಲ್ಲ. ಈಗ ಅಂತರಾಷ್ಟ್ರೀಯ ವಿಮಾನಗಳು ಸಹ ಸಂಚಾರ ನಡೆಸುವುದಿಲ್ಲ.

ಕೆಲವು ದೇಶಿಯ ವಿಮಾನಗಳು ಹಾರಾಟವನ್ನು ನಡೆಸುತ್ತಿದೆ. ನಾಗರಿಕ ವಿಮಾನಯಾನ ನಿರ್ದೇಶನಾಲಯದಿಂದ ಅನುಮತಿ ಪಡೆದ ಸರಕು ಸಾಗಣೆ ಮಾಡುವ ವಿಮಾನಗಳು ಮಾತ್ರ ಬೇರೆ ದೇಶಗಳಿಗೆ ಹಾರಾಟ ನಡೆಸಬಹುದಾಗಿದೆ.
ವಂದೇ ಭಾರತ್ ಮಿಷನ್ ಅಡಿ ವಿದೇಶದಲ್ಲಿ ಸಿಲುಕಿರುವ ಭಾರತೀಯರನ್ನು ವಾಪಸ್ ಕರೆತರಲಾಗುತ್ತಿದೆ. ಈ ವಿಮಾನಗಳ ಹಾರಾಟಕ್ಕೆ ಅನುಮತಿ ಇದೆ.












Click it and Unblock the Notifications