ಎಕ್ಸಿಟ್ ಪೋಲ್ ಫಲಿತಾಂಶ; ಅಸ್ಸಾಂನಲ್ಲಿ ಬಿಜೆಪಿಗೆ ಅಧಿಕಾರ
ನವದೆಹಲಿ, ಏಪ್ರಿಲ್ 29; ಅಸ್ಸಾಂ ರಾಜ್ಯದ ವಿಧಾನಸಭೆ ಚುನಾವಣೆಯ ಚುನಾವಣೋತ್ತರ ಫಲಿತಾಂಶ ಪ್ರಕಟವಾಗಿದೆ. ಒಟ್ಟು 126 ವಿಧಾನಸಭಾ ಕ್ಷೇತ್ರಗಳಿಗೆ ಮಾರ್ಚ್ 27, ಏಪ್ರಿಲ್ 1 ಮತ್ತು ಏಪ್ರಿಲ್ 6 ರಂದು ಮೂರು ಹಂತದಲ್ಲಿ ಮತದಾನ ನಡೆದಿತ್ತು.
ಗುರುವಾರ ರಾಷ್ಟ್ರೀಯ ವಾಹಿನಿಗಳು ನಡೆಸಿದ ಚುನಾವಣೋತ್ತರ ಸಮೀಕ್ಷೆಗಳು ಪ್ರಕಟವಾಗಿವೆ. 27,189 ಮಾದರಿಗಳ ಮೂಲಕ ಆಕ್ಸಿಸ್ ಮೈ ಇಂಡಿಯಾ ಅಸ್ಸಾಂ ವಿಧಾನಸಭೆ ಚುನಾವಣೆಯ ಚುನಾವಣೋತ್ತರ ಸಮೀಕ್ಷೆಯನ್ನು ನಡೆಸಿದೆ.
2021ರ ಚುನಾವಣೆಯಲ್ಲಿ ಬಿಜೆಪಿ ಶೇ 48ರಷ್ಟು ಮತಗಳಿಕೆಯನ್ನು ಪಡೆಯಲಿದ್ದು, ಅಸ್ಸಾಂ ರಾಜ್ಯದಲ್ಲಿ ಪುನಃ ಅಧಿಕಾರ ಪಡೆಯಲಿದೆ ಎಂದು ಆಕ್ಸಿಸ್ ಮೈ ಇಂಡಿಯಾ ಚುನಾವಣೋತ್ತರ ಸಮೀಕ್ಷೆ ಹೇಳಿದೆ.

ಅಸ್ಸಾಂ ವಿಧಾನಸಭೆಯಲ್ಲಿ ಬಹುಮತ ಪಡೆಯಲು ಪಕ್ಷಕ್ಕೆ 64 ಸೀಟುಗಳ ಅಗತ್ಯವಿದೆ. ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಮತ್ತು ಪ್ರತಿಪಕ್ಷ ಕಾಂಗ್ರೆಸ್ ನಡುವೆ ಚುನಾವಣೆಯಲ್ಲಿ ತೀವ್ರವಾದ ಪೈಪೋಟಿ ನಡೆಯಲಿದೆ.
ಬಿಜೆಪಿ 75-85 ಸೀಟುಗಳನ್ನು ಪಡೆಯುವ ಮೂಲಕ ಮತ್ತೆ ಅಧಿಕಾರ ಹಿಡಿಯಲಿದೆ ಎಂದು ಸಮೀಕ್ಷೆ ವರದಿ ಹೇಳಿದೆ. ವಿಧಾನಸಭೆ ಚುನಾವಣೆಯಲ್ಲಿ ಮಹಿಳೆಯರು ಹೆಚ್ಚಾಗಿ ಬಿಜೆಪಿಯನ್ನು ಬೆಂಬಲಿಸಿದ್ದಾರೆ. ಆದ್ದರಿಂದ, ಪಕ್ಷ ಬಹುಮತಕ್ಕಿಂತ ಹೆಚ್ಚಿನ ಸ್ಥಾನಗಳನ್ನು ಪಡೆಯಲಿದೆ ಎಂದು ಸಮೀಕ್ಷೆಯ ವರದಿ ತಿಳಿಸಿದೆ.
ಗುರುವಾರ ಕೇರಳ, ಪಶ್ಚಿಮ ಬಂಗಾಳ, ತಮಿಳುನಾಡು, ಅಸ್ಸಾಂ ಮತ್ತು ಪುದಚೇರಿ ರಾಜ್ಯಗಳ ಚುನಾವಣೋತ್ತರ ಸಮೀಕ್ಷೆಗಳು ಪ್ರಕಟವಾಗಲಿವೆ. ಮೇ 2 ರ ಭಾನುವಾರ ಐದೂ ರಾಜ್ಯಗಳಲ್ಲಿ ಮತ ಎಣಿಕೆ ನಡೆಯಲಿದೆ.












Click it and Unblock the Notifications