Arvind Kejriwal: ಬಂಧನ ಪ್ರಶ್ನಿಸಿ 'ಸುಪ್ರೀಂ'ನಲ್ಲಿ ಸಲ್ಲಿಸಿದ್ದ ಅರ್ಜಿ ಹಿಂಪಡೆದ ಅರವಿಂದ ಕೇಜ್ರಿವಾಲ್
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಅಬಕಾರಿ ನೀತಿ ಸಂಬಂಧಿತ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ತನ್ನನ್ನು ಬಂಧಿಸುವುದನ್ನು ತಡೆಯಲು ಸಲ್ಲಿಸಿದ್ದ ಅರ್ಜಿಯನ್ನು ಹಿಂಪಡೆಯುತ್ತೇನೆ ಎಂದು ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದ್ದಾರೆ. ಈ ವಿಷಯದ ವಿಚಾರಣೆಗೆ ಸುಪ್ರೀಂ ಕೋರ್ಟ್ ಒಪ್ಪಿಗೆ ನೀಡಿದ ಕೆಲ ಸಮಯದ ನಂತರ ಈ ನಿರ್ಧಾರ ಮಾಡಲಾಗಿದೆ.
ಅರವಿಂದ ಕೇಜ್ರಿವಾಲ್ ಪರ ಹಾಜರಾಗಿದ್ದ ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ, ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೆ ಸಂಬಂಧಿಸಿದಂತೆ ವಿಚಾರಣಾ ನ್ಯಾಯಾಲಯವು ವಿಚಾರಣೆ ನಡೆಸಲು ನಿರ್ಧರಿಸಿದ್ದು, ಇದೀಗ ಸುಪ್ರೀಂ ಕೋರ್ಟ್‌ನಲ್ಲಿನ ವಿಚಾರಣೆಯೊಂದಿಗೆ ಘರ್ಷಣೆಗೆ ಕಾರಣವಾಗುತ್ತದೆ. ಏಕಕಾಲದಲ್ಲಿ ವಿಚಾರಣೆಗೆ ಹಾಜರಾಗಲು ಸಾಧ್ಯವಾಗದ ಕಾರಣದಿಂದಾಗಿ ತಮ್ಮ ಅರ್ಜಿಯನ್ನು ಹಿಂಪಡೆಯಲು ಅನುಮತಿ ನೀಡಬೇಕು ಎಂದು ನ್ಯಾಯಮೂರ್ತಿ ಸಂಜೀವ್ ಖನ್ನಾ ನೇತೃತ್ವದ ಪೀಠದ ಮುಂದೆ ಮನವಿ ಮಾಡಿದರು.

ಈಗ ಪ್ರೋಟೋಕಾಲ್ ಪ್ರಕಾರ ವಿಚಾರಣಾ ನ್ಯಾಯಾಲಯವನ್ನು ಸಂಪರ್ಕಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ತನಿಖಾ ಸಂಸ್ಥೆಯ ಪ್ರಕರಣಗಳ ಬಗ್ಗೆ ವ್ಯವಹರಿಸುವ ವಿಶೇಷ ನ್ಯಾಯಾಲಯದ ಮುಂದೆಯೂ ಕೇಜ್ರಿವಾಲ್ ಅವರನ್ನು ಹಾಜರುಪಡಿಸಲಾಗುವುದು.
ಕಳೆದ ವಾರ ಇದೇ ಪ್ರಕರಣದಲ್ಲಿ ಬಂಧನಕ್ಕೊಳಗಾದ ಭಾರತ್ ರಾಷ್ಟ್ರ ಸಮಿತಿ ನಾಯಕಿ ಕೆ ಕವಿತಾ ಅವರ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದ ಕೆಲವೇ ಗಂಟೆಗಳ ನಂತರ ಅರವಿಂದ್ ಕೇಜ್ರಿವಾಲ್ ಅವರ ನಿರ್ಧಾರ ಬಂದಿದೆ. ಕವಿತಾ ಅವರ ಪ್ರಕರಣವನ್ನು ಆಲಿಸಿದ ಅದೇ ಪೀಠವು ಅರವಿಂದ್ ಕೇಜ್ರಿವಾಲ್ ಅವರ ಮನವಿಯನ್ನು ಆಲಿಸಲು ನಿಯೋಜಿಸಲಾಗಿತ್ತು.
ಕೇಜ್ರಿವಾಲ್ ಅವರು ವಿಚಾರಣಾ ನ್ಯಾಯಾಲಯದ ಮುಂದೆ ರಿಮಾಂಡ್ ಪ್ರಕ್ರಿಯೆಗಳನ್ನು ಎದುರಿಸುತ್ತಾರೆ ಮತ್ತು ನಂತರ ಮತ್ತೊಂದು ಅರ್ಜಿಯೊಂದಿಗೆ ಸುಪ್ರೀಂ ಕೋರ್ಟ್‌ಗೆ ಹಿಂತಿರುಗುತ್ತಾರೆ ಎಂದು ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ ಹೇಳಿದ್ದಾರೆ.
ಇಡಿ ತನ್ನನ್ನು ಬಂಧಿಸಿದ ನಂತರ ಕೇಜ್ರಿವಾಲ್ ಗುರುವಾರ ತಡರಾತ್ರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರವಿಂದ್ ಕೇಜ್ರಿವಾಲ್ ಅವರಿಗೆ ಏಜೆನ್ಸಿಯ ಯಾವುದೇ ಬಲವಂತದ ಕ್ರಮದಿಂದ ರಕ್ಷಣೆ ನೀಡಲು ದೆಹಲಿ ಹೈಕೋರ್ಟ್ ನಿರಾಕರಿಸಿದ ಕೆಲವೇ ಗಂಟೆಗಳ ನಂತರ ಅವರನ್ನು ಬಂಧಿಸಲಾಯಿತು.












Click it and Unblock the Notifications