ಡ್ರೋನ್ ಸೇಬು ಹಣ್ಣು ಬಾಕ್ಸ್ ಸಾಗಣೆ, ಪ್ರಯೋಗ ಯಶಸ್ವಿ
ನವದೆಹಲಿ, ಡಿಸೆಂಬರ್ 06; ಮಾರುಕಟ್ಟೆಗೆ ಹೋಗಿ ಸೇಬು ಹಣ್ಣು ತರುವುದು ಸುಲಭ. ಆದರೆ ಮಾರುಕಟ್ಟೆಗೆ ಸಾಗಿಸುವುದು ಸವಾಲು. ಇಂತಹ ಒಂದು ಸಮಸ್ಯೆಗೆ ಹಿಮಾಚಲ ಪ್ರದೇಶದಲ್ಲಿ ಪ್ರಾಯೋಗಿಕವಾಗಿ ಯೋಜನೆಯೊಂದನ್ನು ಜಾರಿಗೊಳಿಸಲಾಗಿದೆ.
ಹಿಮಾಚಲ ಪ್ರದೇಶದ ಕಿನ್ನೂರು ಜಿಲ್ಲೆಯಲ್ಲಿ ಸೇಬು ಬೆಳೆಯುವ ಬುಡಕಟ್ಟು ಪ್ರದೇಶದ ಜನರು ಡ್ರೋನ್ ಮೂಲಕ ಸೇಬು ಹಣ್ಣು ಸಾಗಣೆ ಮಾಡುವ ತಂತ್ರಜ್ಞಾನದ ಮೊರೆ ಹೋಗಿದ್ದಾರೆ. ಸರ್ಕಾರವೂ ಇದಕ್ಕೆ ಸಹಕಾರ ನೀಡಿದೆ.
ರೋಹನ್ ಖಂಡ ಪ್ರದೇಶದಲ್ಲಿ ಡ್ರೋನ್ ಮೂಲಕ ಸೇಬು ಹಣ್ಣಿನ 20 ಕೆಜಿ ಬಾಕ್ಸ್ ಸಾಗಣೆ ಮಾಡುವ ಪ್ರಯೋಗ ಯಶಸ್ವಿಯಾಗಿದೆ. ಸೇಬು ಹಣ್ಣನ್ನು ಹೊತ್ತ ಡ್ರೋನ್ ಮುಖ್ಯ ರಸ್ತೆಯಲ್ಲಿಯೇ 12 ಕಿ. ಮೀ. ದೂರವನ್ನು 6 ನಿಮಿಷಗಳಲ್ಲಿ ತಲುಪಿದೆ.
ಸ್ಕೈ ಏರ್ ಮತ್ತು ವಿಗ್ರೋ ಎಂಬ ಸಂಸ್ಥೆಗಳು ಮಾಡಿಕೊಂಡ ಒಪ್ಪಂದದ ಮೂಲಕ ಪ್ರಾಯೋಗಿಕವಾಗಿ ಈ ಸಾಗಣೆ ಮಾಡಲಾಗಿದೆ. ಡ್ರೋನ್ ಬ್ಯಾಟರಿ, ಸೇಬು ಹೊತ್ತು ಸಾಗುವ ದೂರ, ತಗಲುವ ಖರ್ಚು ಮುಂತಾದವುಗಳನ್ನು ಲೆಕ್ಕಾಚಾರ ಹಾಕಲಾಗಿದೆ.
ವಿಗ್ರೋ ಸಂಸ್ಥೆಯ ಉಸ್ತುವಾರಿ ದಿನೇಶ್ ನೇಗಿ ಮಾತನಾಡಿ, "ವಾಣಿಜ್ಯ ಉದ್ದೇಶಕ್ಕೆ ಸೇಬು ಬೆಳೆಯುವ ಪ್ರತಿ ಬೆಳೆಗಾರನ ಬಳಿಯಿಂದ 200 ಕೆಜಿ ಸೇಬು ಬಾಕ್ಸ್ ಸಾಗಣೆ ಮಾಡುವುದು ನಮ್ಮ ಗುರಿಯಾಗಿದೆ. ಮುಂದಿನ ಹಂತದಲ್ಲಿ ಈ ಯೋಜನೆ ಯಶಸ್ವಿಯಾಗಲಿದೆ" ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

ಕಿನ್ನೂರು ಜಿಲ್ಲಾಧಿಕಾರಿಗಳು ಮಾತನಾಡಿ, "ಈ ಯೋಜನೆ ವೆಚ್ಚದ ಬಗ್ಗೆ ಪರಿಶೀಲನೆ ನಡೆಸುತ್ತಿದ್ದೇವೆ. ಅನುಮತಿ ನೀಡುವುದು ಮತ್ತು ಇತರ ಅಂಶಗಳ ಕುರಿತು ಕಂಪನಿಗಳ ಜೊತೆ ಮಾತುಕತೆ ನಡೆಯುತ್ತಿದೆ" ಎಂದು ಹೇಳಿದ್ದಾರೆ.
ರಸ್ತೆ ಸಂಪರ್ಕವೇ ಇಲ್ಲ; ಹಿಮಾಚಲ ಪ್ರದೇಶದ ಕೆಲವು ಪ್ರದೇಶಗಳಲ್ಲಿ ಸರಿಯಾದ ರಸ್ತೆ ಸಂಪರ್ಕವಿಲ್ಲ. ಇಲ್ಲಿ ಹೆಗಲ ಮೇಲೆ ಹೊತ್ತು ಸೇಬು ಸಾಗಣೆ ಮಾಡಬೇಕಿದೆ. ಒಬ್ಬರು ಮೂರು ಬಾಕ್ಸ್ ಸೇರಿ 90 ಕೆಜಿ ಹೊತ್ತು ಸಾಗಬಹುದಾಗಿದೆ.
ಮುಖ್ಯ ರಸ್ತೆಗೆ ಸೇಬು ತರಲು ಜನರು ಸುಮಾರು 3 ಟ್ರಿಪ್‌ಗಳು ಓಡಾಡಬೇಕು. ಆದರೆ ಕೆಲಸಗಾರರ ಸಮಸ್ಯೆಯಿಂದ ಸೇಬು ಸಾಗಣೆ ಮಾಡುವುದು ಸಹ ಸವಾಲಿನ ಕೆಲಸವಾಗಿದೆ. ಆದ್ದರಿಂದ ಡ್ರೋನ್ ಮೂಲಕ ಸಾಗಣೆ ಮಾಡುವ ಪ್ರಯೋಗ ಮಾಡಲಾಗಿದೆ.
ಈಗ ಡ್ರೋನ್ ಮೂಲಕ ಸಾಗಣೆ ಮಾಡುವ ಪ್ರಯೋಗ ಯಶಸ್ವಿಯಾದ ಬಳಿಕ ಹಣ್ಣು ಕಟಾವು ಮಾಡಿದ ಕೆಲವೇ ಗಂಟೆಗಳಲ್ಲಿ ಅದನ್ನು ಸಾಗಣೆ ಮಾಡುವ ಬಗ್ಗೆ ಭರವಸೆ ಮೂಡಿದೆ. ಆದರೆ 200 ಕೆಜಿ ಬಾಕ್ಸ್ ಸಾಗಣೆಗೆ ಎಷ್ಟು ವೆಚ್ಚವಾಗಲಿದೆ? ಎಂದು ಲೆಕ್ಕ ಹಾಕಲಾಗುತ್ತಿದೆ.

ರಾಜ್ಯದ ಕಿನ್ನೂರು ಜಿಲ್ಲೆಯೊಂದರಲ್ಲಿಯೇ 10,924 ಹೆಕ್ಟೇರ್ ಪ್ರದೇಶದಲ್ಲಿ ಸೇಬು ಬೆಳೆಯಲಾಗುತ್ತದೆ. ಆಗಸ್ಟ್‌ನಲ್ಲಿ ಕಟಾವು ಆರಂಭವಾದರೆ ಅಕ್ಟೋಬರ್, ನವೆಂಬರ್ ತನಕ ನಡೆಯುತ್ತದೆ. ಈ ಸಮಯದಲ್ಲಿ ಕುಗ್ರಾಮ, ಬೆಟ್ಟ ಪ್ರದೇಶದಿಂದ ಡ್ರೋನ್ ಮೂಲಕ ಸೇಬು ಬಾಕ್ಸ್ ಸಾಗಣೆ ಮಾಡಬೇಕಿದೆ.
2020ರಲ್ಲಿ 36.64 ಲಕ್ಷ ಬಾಕ್ಸ್ ಸೇಬು ಬೆಳೆಯಲಾಗಿತ್ತು. 2021ರಲ್ಲಿ 23.33 ಲಕ್ಷ ಬಾಕ್ಸ್ ಸೇಬು ಬೆಳೆಯಲಾಗಿತ್ತು. ಈ ವರ್ಷ ಇದು 40.83 ಲಕ್ಷ ಬಾಕ್ಸ್‌ಗೆ ಏರಿಕೆಯಾಗಿದೆ.
ಸದ್ಯ ಹಿಮಾಚಲ ಪ್ರದೇಶದ ಸರ್ಕಾರ 5 ಕೆಜಿ ತೂಕದ ಸೇಬು ಬಾಕ್ಸ್ ಒಂದು ಕಿ. ಮೀ. ಸಾಗಣೆಗೆ 45 ರೂ. ದರ ನಿಗದಿ ಮಾಡಿದೆ. 10 ಕೆಜಿ ಬಾಕ್ಸ್‌ಗೆ 55 ರೂ. ದರವನ್ನು ನಿಗದಿ ಮಾಡಿದೆ, ಇದು ಮುಂದೆ ಬದಲಾವಣೆ ಆಗುವ ಸಾಧ್ಯತೆ ಇದೆ. ಮುಂದಿನ ವರ್ಷದ ಕಟಾವು ಸಮಯಕ್ಕೆ ಇದನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವ ನಿರೀಕ್ಷೆ ಇದೆ.











Click it and Unblock the Notifications