American Airlines: ವಿಮಾನದಲ್ಲಿ ಮತ್ತೊಂದು ಅಸಭ್ಯ ವರ್ತನೆ: ಪ್ರಯಾಣಿಕರೊಬ್ಬರ ಮೇಲೆ ಮೂತ್ರ ವಿಸರ್ಜಿಸಿದ ವ್ಯಕ್ತಿ
ನವದೆಹಲಿ ಏಪ್ರಿಲ್ 25: ವಿಮಾನದಲ್ಲಿ ಮದ್ಯಪಾನಿ ವ್ಯಕ್ತಿಯೊಬ್ಬ ಸಹಪ್ರಯಾಣಿಕರೊಬ್ಬರ ಮೇಲೆ ಮೂತ್ರವಿಸರ್ಜನೆ ಮಾಡಿದ ಮೊತ್ತೊಂದು ಘಟನೆ ನಡೆದಿದೆ. ನ್ಯೂಯಾರ್ಕ್-ನವದೆಹಲಿ ಅಮೆರಿಕನ್ ಏರ್‌ಲೈನ್ಸ್ ವಿಮಾನದಲ್ಲಿ ಭಾರತೀಯ ವ್ಯಕ್ತಿಯೊಬ್ಬರು ಮದ್ಯದ ಅಮಲಿನಲ್ಲಿ ಇನ್ನೊಬ್ಬ ಪ್ರಯಾಣಿಕರ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾರೆ. ಈ ಅಸಭ್ಯ ವರ್ತನೆ ಭಾನುವಾರ ನಡೆದಿದೆ.
ಈ ಪ್ರಕರಣದಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ವಿಮಾನಯಾನ ಸಂಸ್ಥೆಗಳು ವಿಮಾನದಲ್ಲಿದ್ದ ಸಹ-ಪ್ರಯಾಣಿಕರ ಹೇಳಿಕೆಗಳನ್ನು ದಾಖಲಿಸಿಕೊಂಡಿರುವುದು ತಿಳಿದು ಬಂದಿದೆ. ಜೊತೆಗೆ ಆರೋಪಿಯನ್ನು ಕಾನೂನು ಜಾರಿ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ ಎಂದು ದೇಶದ ವಾಯುಯಾನ ನಿಯಂತ್ರಕ ಡಿಜಿಸಿಎ ತಿಳಿಸಿದೆ.

ನಾಗರಿಕ ವಿಮಾನಯಾನ ಕಾಯಿದೆಯ ಅಡಿಯಲ್ಲಿ ಪ್ರಯಾಣಿಕರು ದೂರು ಸಲ್ಲಿಸಿದ್ದಾರೆ. ಘಟನೆಯ ಬಗ್ಗೆ ಸಹ ಪ್ರಯಾಣಿಕರಿಂದ ಯಾವುದೇ ಪುರಾವೆಗಳು ಅಥವಾ ದೂರುಗಳಿಲ್ಲ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ಈ ಘಟನೆಯು ಅಮೇರಿಕನ್ ಏರ್ಲೈನ್ಸ್ ಫ್ಲೈಟ್ ಎಎ 292 ವಿಮಾನದಲ್ಲಿ ಸಂಭವಿಸಿದೆ. ವಿಮಾನ ಭಾನುವಾರ ರಾತ್ರಿ 9 ಗಂಟೆಯ ಸುಮಾರಿಗೆ ಇಂದಿರಾ ಗಾಂಧಿ ಇಂಟರ್ನ್ಯಾಷನಲ್ (ಐಜಿಐ) ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿದೆ. ಬಳಿಕ ಸಿಐಎಸ್ಎಫ್ ಅಶಿಸ್ತಿನ ಪ್ರಯಾಣಿಕನನ್ನು ಬಂಧಿಸಿದೆ.
ವಿಮಾನ ಇಳಿಯುವ ಮೊದಲು ದೆಹಲಿ ವಿಮಾನ ನಿಲ್ದಾಣಕ್ಕೆ ವಿಷಯವನ್ನು ವರದಿ ಮಾಡಿದೆ. ಪ್ರಯಾಣಿಕನನ್ನು ದೆಹಲಿ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಸಂತ್ರಸ್ತೆ ಔಪಚಾರಿಕ ದೂರು ದಾಖಲಿಸಿದ್ದಾರೆ ಎಂದು ಮೂಲಗಳು ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿವೆ. ಇದು ಇತ್ತೀಚಿನ ದಿನಗಳಲ್ಲಿ ನಡೆದ ಮೂರನೇ ಘಟನೆಯಾಗಿದೆ.

ಕಳೆದ ವರ್ಷ ನವೆಂಬರ್ 26 ರಂದು ಏರ್ ಇಂಡಿಯಾ ನ್ಯೂಯಾರ್ಕ್-ದೆಹಲಿ ವಿಮಾನದ ಬಿಸಿನೆಸ್ ಕ್ಲಾಸ್‌ನಲ್ಲಿ ಕುಡುಕ ವ್ಯಕ್ತಿಯೊಬ್ಬ ಎಪ್ಪತ್ತರ ಹರೆಯದ ತನ್ನ ಸಹ-ಪ್ರಯಾಣಿಕ ಮಹಿಳೆಯ ಮೇಲೆ ಮೂತ್ರ ವಿಸರ್ಜಿಸಿದ್ದಾನೆ ಎಂದು ಆರೋಪಿಸಲಾಗಿತ್ತು. ಮತ್ತೊಂದು ಘಟನೆಯಲ್ಲಿ, ಪ್ರಯಾಣಿಕರೊಬ್ಬರು ಡಿಸೆಂಬರ್ 6, 2022 ರಂದು ಏರ್ ಇಂಡಿಯಾ ಪ್ಯಾರಿಸ್-ನವದೆಹಲಿ ವಿಮಾನದಲ್ಲಿ ಶೌಚಾಲಯಕ್ಕೆ ಹೋದಾಗ ಸಹ ಮಹಿಳಾ ಪ್ರಯಾಣಿಕರ ಖಾಲಿ ಸೀಟು ಮತ್ತು ಹೊದಿಕೆಯ ಮೇಲೆ ಮೂತ್ರವಿಸರ್ಜನೆ ಮಾಡಿದ್ದರು.
ವಿಮಾನದಲ್ಲಿ ಮದ್ಯಪಾನಿಗಳ ಅಸಭ್ಯ ವರ್ತನೆ
ವಿಮಾನದಲ್ಲಿ ಪ್ರಯಾಣಿಕರು ಅಶಿಸ್ತಿನಿಂದ ವರ್ತಿಸುತ್ತಿರುವ ಘಟನೆಗಳು ಪ್ರತಿ ದಿನ ಕಂಡು ಬರುತ್ತಿವೆ. ಇತ್ತೀಚೆಗೆ ಪಾನಪತ್ತ ಪ್ರಯಾಣಿಕರು ವಿಮಾನ ಸಿಬ್ಬಂದಿಗಳಿಗೆ ಹಾಗೂ ಸಹ ಪ್ರಯಾಣಿಕರಿಗೆ ತೊಂದರೆಗಳನ್ನು ನೀಡುವ ಮೂಲಕ ಸಮಸ್ಯೆಗಳನ್ನು ಹುಟ್ಟು ಹಾಕುತ್ತಿರುವುದು ವಿಮಾನದಲ್ಲಿ ಪ್ರಯಾಣಿಕರ ಸುರಕ್ಷತೆಯ ಪ್ರಶ್ನೆ ಉದ್ಬವಿಸಿದೆ.

ಕಳೆದ ಬಾರಿ ಏರ್ ಇಂಡಿಯಾ ದೆಹಲಿ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕನು ವಿಮಾನದಲ್ಲಿ ಅಶಿಸ್ತಿನಿಂದ ವರ್ತಿಸಿದ್ದಕ್ಕೆ ಎಫ್‌ಐಆರ್ ದಾಖಲಿಸಲಾಗಿತ್ತು. ದೆಹಲಿ-ಲಂಡನ್ AI 111 ವಿಮಾನದಲ್ಲಿ ಈ ಘಟನೆ ನಡೆದಿತ್ತು. ಈ ಕಾರಣದಿಂದ ಏರ್ ಇಂಡಿಯಾ ದೆಹಲಿ-ಲಂಡನ್ ವಿಮಾನವನ್ನು ದೆಹಲಿಗೆ ಹಿಂದಿರುಗಿಸಲಾದ ಘಟನೆ ನಡೆದಿತ್ತು. ಅಶಿಸ್ತಿನ ಪುರುಷ ಪ್ರಯಾಣಿಕರಿದ್ದ ಕಾರಣ ವಿಮಾನ ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (IGIA) ಮರಳಿತ್ತು.
ವಿಮಾನಯಾನ ಸಂಸ್ಥೆಯ ಅಧಿಕಾರಿಯ ಪ್ರಕಾರ, ಪ್ರಯಾಣಿಕನೊಬ್ಬ ವಿಮಾನ ಸಿಬ್ಬಂದಿಯೊಂದಿಗೆ ಜಗಳವಾಡಿದ್ದಾನೆ. ಹೀಗಾಗಿ ಏರ್ ಇಂಡಿಯಾ, ಪ್ರಯಾಣಿಕನನ್ನು ಲ್ಯಾಂಡಿಂಗ್ ನಂತರ ಭದ್ರತಾ ಸಿಬ್ಬಂದಿಗೆ ಹಸ್ತಾಂತರಿಸಿದೆ. ವರದಿಯ ನಂತರ, ವಿಮಾನಯಾನ ಸಂಸ್ಥೆಯು ಪ್ರಯಾಣಿಕರ ವಿರುದ್ಧ ಎಫ್‌ಐಆರ್ ಕೂಡ ದಾಖಲಿಸಿದೆ.












Click it and Unblock the Notifications