ಕಾಲೇಜಿನಲ್ಲಿದ್ದಾಗ ಎಲ್ಲಾ ವಿಷಯದಲ್ಲೂ ಫೇಲ್; ಇಂದು 800 ಕೋಟಿ ಮೌಲ್ಯದ ಕಂಪನಿ ಕಟ್ಟಿದ ಟ್ರ್ಯಾಕ್ಟರ್ ಚಾಲಕನ ಮಗ

ಚೆನ್ನೈ: ಜೀವನದಲ್ಲಿ ಒಮ್ಮೆ ಸೋತ ಮಾತ್ರಕ್ಕೆ ಎಲ್ಲವೂ ಮುಗಿದುಹೋಯಿತು ಎಂದು ಕೈಚೆಲ್ಲಿ ಕುಳಿತುಕೊಳ್ಳುವವರಿಗೆ ತಮಿಳುನಾಡಿನ ಈ ಯುವಕನ ಬದುಕಿನ ಕಥೆಯನ್ನ ಒಮ್ಮೆ ಓದಿ ನೋಡಿ. ಕಾಲೇಜಿನ ಮೊದಲ ಸೆಮಿಸ್ಟರ್ ಪರೀಕ್ಷೆಯಲ್ಲಿ ಎಲ್ಲಾ ವಿಷಯಗಳಲ್ಲೂ ಫೇಲ್‌ ಆಗಿದ್ದ, ಒಂದು ಹಂತದಲ್ಲಿ ಶಿಕ್ಷಣವನ್ನೇ ಅರ್ಧಕ್ಕೆ ಬಿಟ್ಟಿದ್ದ ಹಳ್ಳಿಗಾಡಿನ ಹುಡುಗನೊಬ್ಬ ಇಂದು ದೇಶದ ಖಾಸಗಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಕ್ರಾಂತಿ ಸೃಷ್ಟಿಸಿದ್ದಾನೆ.

ಹೌದು, ಕಷ್ಟಪಟ್ಟು ದುಡಿಯುತ್ತಿದ್ದ ಟ್ರ್ಯಾಕ್ಟರ್ ಚಾಲಕನ ಮಗನಾದ ಆನಂದ್ ಮೇಗಲಿಂಗಂ, ಇಂದು 800 ಕೋಟಿ ರೂಪಾಯಿ ಮೌಲ್ಯದ ಸ್ಪೇಸ್ ಝೋನ್ ಇಂಡಿಯಾ ಸಂಸ್ಥೆಯ ಮಾಲೀಕರಾಗಿ ಬೆಳೆದು ನಿಂತಿದ್ದಾರೆ.

Anand Megalingam

ತಮಿಳುನಾಡಿನ ಸಾಮಾನ್ಯ ಕೃಷಿ ಕುಟುಂಬದಲ್ಲಿ ಜನಿಸಿದ ಆನಂದ್ ಅವರ ಬಾಲ್ಯ ಎಲ್ಲರೂ ಅಂದುಕೊಂಡಷ್ಟು ಸುಲಭದ್ದಾಗಿರಲಿಲ್ಲ. ಶಾಲೆಗೆ ಹೋಗಲು ಪ್ರತಿದಿನ ಬರೋಬ್ಬರಿ 6 ಕಿಲೋಮೀಟರ್ ನಡೆದುಕೊಂಡೇ ಹೋಗಬೇಕಿತ್ತು. ಕುಟುಂಬದ ನಿರ್ವಹಣೆಗಾಗಿ ತಂದೆ ಟ್ರ್ಯಾಕ್ಟರ್ ಓಡಿಸುತ್ತಿದ್ದರು.

ಶಾಲಾ ಶಿಕ್ಷಣ ಮುಗಿದ ನಂತರ, ಉದ್ಯೋಗ ಸಿಗುತ್ತದೆ ಎಂಬ ಕಾರಣಕ್ಕೆ ಆನಂದ್ ಕಂಪ್ಯೂಟರ್ ಸೈನ್ಸ್ ಕೋರ್ಸ್‌ಗೆ ಸೇರಿದ್ದರು. ಆದರೆ ಈ ವಿಷಯದಲ್ಲಿ ಆಸಕ್ತಿ ಇಲ್ಲದ ಕಾರಣ ಮೊದಲ ಸೆಮಿಸ್ಟರ್‌ನಲ್ಲೇ ಎಲ್ಲಾ ಪೇಪರ್‌ಗಳಲ್ಲೂ ಫೇಲಾಗಿ ಕಾಲೇಜಿನಿಂದ ಹೊರಬಂದರು.

ಆದರೆ ಕ್ರೀಡೆಯಲ್ಲಿ ಅವರಿಗಿದ್ದ ಆಸಕ್ತಿಯು ಅವರಿಗೆ ಮತ್ತೊಂದು ಖಾಸಗಿ ಕಾಲೇಜಿನಲ್ಲಿ ಪ್ರವೇಶ ದೊರಕಿಸಿಕೊಟ್ಟಿತು. ಅಲ್ಲಿ ಅವರು ತಮ್ಮ ನೆಚ್ಚಿನ ಏರೋನಾಟಿಕಲ್ ಇಂಜಿನಿಯರಿಂಗ್ ವಿಭಾಗವನ್ನು ಆಯ್ಕೆ ಮಾಡಿಕೊಂಡರು. ಈ ಆಯ್ಕೆ ಅವರ ಇಡೀ ಜೀವನದ ದಿಕ್ಕನ್ನೇ ಬದಲಿಸಿತು. ಕಠಿಣ ಪರಿಶ್ರಮದಿಂದ ಓದಿದ ಆನಂದ್, ಅದೇ ಸಂಸ್ಥೆಯಿಂದ 9.8 ಸಿಜಿಪಿಎ ಗಳಿಸಿ ಚಿನ್ನದ ಪದಕದೊಂದಿಗೆ ತೇರ್ಗಡೆಯಾದರು.

ಬಾಹ್ಯಾಕಾಶ ಕ್ಷೇತ್ರದಲ್ಲಿ ತನ್ನದೇ ಆದ ಹೊಸದೊಂದು ಛಾಪು ಮೂಡಿಸಬೇಕೆಂಬ ಸಂಕಲ್ಪದೊಂದಿಗೆ ಆನಂದ್ ಅವರು ಡಿಸೆಂಬರ್ 2021ರಲ್ಲಿ ಸ್ಪೇಸ್ ಝೋನ್ ಇಂಡಿಯಾ ಸಂಸ್ಥೆಯನ್ನ ಶುರುಮಾಡಿದರು. ಸಂಸ್ಥೆ ಸ್ಥಾಪಿಸಿದ ತಕ್ಷಣ ಅವರು ಮಾಡಿದ ಮೊದಲ ಕೆಲಸವೆಂದರೆ, ತಮ್ಮ ಬೆನ್ನೆಲುಬಾಗಿ ನಿಂತಿದ್ದ ತಂದೆಯನ್ನೇ ಕಂಪನಿಯ ಸಹ-ಸಂಸ್ಥಾಪಕರನ್ನಾಗಿ ಮಾಡಿ ಶೇ. 50ರಷ್ಟು ಷೇರನ್ನು ಅವರಿಗೆ ನೀಡಿದ್ದು.

ಅನೇಕ ತಾಂತ್ರಿಕ ಅಡೆತಡೆಗಳು, ಹಣದ ಕೊರತೆ ಮತ್ತು ಹಿನ್ನಡೆಗಳ ನಡುವೆಯೂ ಆನಂದ್ ತಂಡ 'ರುಮಿ-1' ಮರುಬಳಕೆ ಮಾಡಬಹುದಾದ ಹೈಬ್ರಿಡ್ ರಾಕೆಟ್ ಅನ್ನು ಸಿದ್ಧಪಡಿಸಿದರು. 2024ರ ಆಗಸ್ಟ್ 24ರಂದು ತಮಿಳುನಾಡಿನ ತಿರುವಿಡಂದೈ ಕಡಲತೀರದಿಂದ ಮೊಬೈಲ್ ಲಾಂಚರ್ ಮೂಲಕ ಇದನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು. ಇದು 3 ಕ್ಯೂಬ್‌ಸ್ಯಾಟ್‌ಗಳು ಹಾಗೂ 50 ಪಿಕೋ ಉಪಗ್ರಹಗಳನ್ನ ಹೊತ್ತು ಆಕಾಶಕ್ಕೆ ಹಾರುವ ಮೂಲಕ ಭಾರತದ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿತು.

ಅಮೆರಿಕ ವೀಸಾ ತಿರಸ್ಕಾರದಿಂದ ನಾಸಾ ತರಬೇತಿವರೆಗೆ

ಆನಂದ್ ಅವರ ಪಯಣದಲ್ಲಿ ಸವಾಲುಗಳು ಕೇವಲ ಭಾರತಕ್ಕೆ ಮಾತ್ರ ಸೀಮಿತವಾಗಿರಲಿಲ್ಲ ನೋಡಿ. ಸಂಶೋಧನೆಗಾಗಿ ವಿದೇಶಕ್ಕೆ ಹೋಗಲು ಬಯಸಿದಾಗ ಅವರ ಅಮೆರಿಕ ವೀಸಾ ಅರ್ಜಿಯನ್ನ ತಿರಸ್ಕರಿಸಲಾಗಿತ್ತು. ಆದರೆ ಅದರಿಂದ ಹೆದರದ ಆನಂದ್‌ ತಮ್ಮ ಸಾಧನೆಯ ಮೂಲಕವೇ ಅಮೆರಿಕದ ವಿದೇಶಾಂಗ ಇಲಾಖೆಯ ಅಂತಾರಾಷ್ಟ್ರೀಯ ನಾಯಕತ್ವ ಕಾರ್ಯಕ್ರಮಕ್ಕೆ ಜಾಗತಿಕವಾಗಿ ಆಯ್ಕೆಯಾದ 23 ಮಂದಿಯಲ್ಲಿ ಒಬ್ಬರಾದರು. ನಾಸಾ ಸೌಲಭ್ಯಗಳಲ್ಲಿ ತರಬೇತಿ ಪಡೆದು, ಜಾಗತಿಕ ಮಟ್ಟದ ಬಾಹ್ಯಾಕಾಶ ವಿಜ್ಞಾನಿಗಳೊಂದಿಗೆ ಚರ್ಚಿಸುವ ಅವಕಾಶ ಗಿಟ್ಟಿಸಿಕೊಂಡರು.

ಯುವ ಸಂಶೋಧಕರಿಗೆ ಸ್ಪೂರ್ತಿಯಾದ ಆನಂದ್ ಮೇಗಲಿಂಗಂ

ಪ್ರಸ್ತುತ ಸ್ಪೇಸ್ ಝೋನ್ ಇಂಡಿಯಾ ಸಂಸ್ಥೆಯು ಚೆನ್ನೈನಿಂದ ಏಕಕಾಲಕ್ಕೆ ಎರಡು ರಾಕೆಟ್‌ಗಳನ್ನ ಉಡಾವಣೆ ಮಾಡುವ ರುಮಿ ಟ್ವಿನ್ ಮಿಷನ್ ಮೇಲೆ ಕಾರ್ಯನಿರ್ವಹಿಸುತ್ತಿದೆ. "ಕೇವಲ ರಾಕೆಟ್ ಹಾರಿಸುವುದು ನಮ್ಮ ಗುರಿಯಲ್ಲ, ಭಾರತವನ್ನು ರಕ್ಷಣಾ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಜಾಗತಿಕವಾಗಿ ಮತ್ತಷ್ಟು ಬಲಿಷ್ಠಗೊಳಿಸುವುದು ನಮ್ಮ ಉದ್ದೇಶ" ಎನ್ನುತ್ತಾರೆ ಆನಂದ್.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+