Amul Milk Price Hike: ಪ್ರತಿ ಲೀಟರ್ ಹಾಲಿನ ದರ 2 ರೂ. ಹೆಚ್ಚಳ; ನಾಳೆಯಿಂದಲೇ ಹೊಸ ದರ ಅನ್ವಯ

ನವದೆಹಲಿ: ದಿನಬಳಕೆ ವಸ್ತುಗಳ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಸಾಮಾನ್ಯ ಜನರಿಗೆ ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ ಮತ್ತೊಂದು ಶಾಕ್ ಎದುರಾಗಿದೆ. ಪ್ರಸಿದ್ಧ ಅಮುಲ್ (Amul) ಬ್ರಾಂಡ್ ಅಡಿಯಲ್ಲಿ ಡೈರಿ ಉತ್ಪನ್ನಗಳನ್ನು ಮಾರಾಟ ಮಾಡುವ ಗುಜರಾತ್ ಕೋ-ಆಪರೇಟಿವ್ ಮಿಲ್ಕ್ ಮಾರ್ಕೆಟಿಂಗ್ ಫೆಡರೇಶನ್ (GCMMF), ದೇಶಾದ್ಯಂತ ತಾಜಾ ಹಾಲಿನ ದರವನ್ನು ಲೀಟರ್‌ಗೆ 2 ರೂಪಾಯಿಗಳಷ್ಟು ಹೆಚ್ಚಿಸಿದೆ. ಪರಿಷ್ಕೃತ ದರಗಳು ನಾಳೆಯಿಂದಲೇ, ಅಂದರೆ ಮೇ 14, 2026 ರಿಂದಲೇ ಜಾರಿಗೆ ಬರಲಿವೆ. ಈ ಹಾಲಿನ ದರ ಏರಿಕೆಯು ಜನಸಾಮಾನ್ಯರ ಜೇಬಿಗೆ ಕತ್ತರಿ ಬೀಳಲಿದೆ.

ಈ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಿರುವ ಜಿಸಿಎಂಎಂಎಫ್, "ಭಾರತದಾದ್ಯಂತ ಮಾರಾಟವಾಗುವ ಪ್ರಮುಖ ತಾಜಾ ಹಾಲಿನ ಪೌಚ್‌ಗಳ ಬೆಲೆಯನ್ನು ಲೀಟರ್‌ಗೆ 2 ರೂ. ಹೆಚ್ಚಿಸಲಾಗಿದೆ. ಒಟ್ಟಾರೆ ಹಾಲಿನ ಉತ್ಪಾದನೆ ಮತ್ತು ನಿರ್ವಹಣಾ ವೆಚ್ಚದಲ್ಲಿ ಗಣನೀಯ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಅನಿವಾರ್ಯವಾಗಿದೆ" ಎಂದು ತಿಳಿಸಿದೆ. "ಪ್ರಸಕ್ತ ವರ್ಷದಲ್ಲಿ ಜಾನುವಾರುಗಳ ಮೇವು, ಹಾಲಿನ ಪ್ಯಾಕೇಜಿಂಗ್ ಫಿಲ್ಮ್ ಹಾಗೂ ಇಂಧನ ವೆಚ್ಚದಲ್ಲಿ ಭಾರೀ ಹೆಚ್ಚಳವಾಗಿದೆ. ಹೀಗಿದ್ದರೂ ದರ ಏರಿಕೆಯ ಪ್ರಮಾಣವು ಕೇವಲ 2.5-3.5 ಪ್ರತಿಶತದಷ್ಟಿದ್ದು, ಇದು ಸರಾಸರಿ ಆಹಾರ ಹಣದುಬ್ಬರಕ್ಕಿಂತ ಕಡಿಮೆಯಾಗಿದೆ" ಎಂದು ಸಂಸ್ಥೆ ಸ್ಪಷ್ಟಪಡಿಸಿದೆ. ಇದಕ್ಕೂ ಮುನ್ನ, ಕಳೆದ ವರ್ಷ ಮೇ 1, 2025 ರಂದು ಹಾಲಿನ ದರವನ್ನು ಪರಿಷ್ಕರಿಸಲಾಗಿತ್ತು.

Amul Milk Price Hike

ಹೊಸ ದರಗಳ ವಿವರ

ಪರಿಷ್ಕೃತ ದರಗಳ ಅನ್ವಯ, 500 ಎಂಎಲ್ (ಅರ್ಧ ಲೀಟರ್) ಹಾಲಿನ ಪ್ಯಾಕೆಟ್‌ಗಳ ಬೆಲೆಗಳು ಈ ಕೆಳಗಿನಂತಿವೆ:

1. ಅಮುಲ್ ಸ್ಲಿಮ್ ಎನ್ (Slim N): 27 ರೂ.

2. ಅಮುಲ್ ತಾಜಾ (Taaza): 30 ರೂ.

3. ಅಮುಲ್ ಹಸುವಿನ ಹಾಲು : 31 ರೂ.

4. ಅಮುಲ್ ಗೋಲ್ಡ್ : 36 ರೂ.

5. ಎಮ್ಮೆ ಹಾಲಿನ ಬೆಲೆಯನ್ನು ಲೀಟರ್‌ಗೆ 4 ರೂ.ಗಳಷ್ಟು ಹೆಚ್ಚಿಸಲಾಗಿದ್ದು, ಹೊಸ ಬೆಲೆ 80 ರೂ.ಗೆ ತಲುಪಿದೆ.

ರೈತರಿಗೆ ಲಾಭಾಂಶದಲ್ಲಿ ಪಾಲು

ಗ್ರಾಹಕರು ನೀಡುವ ಪ್ರತಿಯೊಂದು ರೂಪಾಯಿಯಲ್ಲಿ ಸುಮಾರು 80 ಪೈಸೆಯಷ್ಟು ಹಣವನ್ನು ಅಮುಲ್ ಸಂಸ್ಥೆಯು ನೇರವಾಗಿ ಹಾಲು ಉತ್ಪಾದಕ ರೈತರಿಗೆ ಪಾವತಿಸುತ್ತದೆ. ಪ್ರಸ್ತುತ, ಹಾಲು ಉತ್ಪಾದಕ ರೈತರಿಗೆ ನೀಡುವ ಸಂಗ್ರಹಣಾ ದರವನ್ನು ಪ್ರತಿ ಕೆಜಿ ಕೊಬ್ಬಿಗೆ (Fat) 30 ರೂ.ಗಳಷ್ಟು ಹೆಚ್ಚಿಸಲಾಗಿದೆ. ಇದು 2025ರ ಮೇ ತಿಂಗಳಿಗಿಂತ ಶೇ. 3.7 ರಷ್ಟು ಅಧಿಕವಾಗಿದೆ. ಈ ಬೆಲೆ ಪರಿಷ್ಕರಣೆಯು ಹಾಲು ಉತ್ಪಾದಕರಿಗೆ ಲಾಭದಾಯಕ ಬೆಲೆಯನ್ನು ಒದಗಿಸಲು ಮತ್ತು ಹೆಚ್ಚು ಹಾಲು ಉತ್ಪಾದಿಸಲು ಅವರನ್ನು ಪ್ರೋತ್ಸಾಹಿಸಲು ಸಹಾಯ ಮಾಡುತ್ತದೆ ಎಂದು ಸಂಸ್ಥೆ ಹೇಳಿದೆ.

ದಾಖಲೆಯ ವಹಿವಾಟು

ಡೈರಿ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ, 2025-26ನೇ ಆರ್ಥಿಕ ವರ್ಷದಲ್ಲಿ ಅಮುಲ್ ಬ್ರಾಂಡ್‌ನ ಒಟ್ಟು ವಹಿವಾಟು ಶೇ. 11 ರಷ್ಟು ಏರಿಕೆಯಾಗಿದ್ದು, ಬರೋಬ್ಬರಿ 1 ಲಕ್ಷ ಕೋಟಿ ರೂ.ಗಳ ಮೈಲಿಗಲ್ಲನ್ನು ದಾಟಿದೆ. ಅದೇ ರೀತಿ ಜಿಸಿಎಂಎಂಎಫ್ ವಹಿವಾಟು ಕೂಡ ಕಳೆದ ಆರ್ಥಿಕ ವರ್ಷದ 65,911 ಕೋಟಿ ರೂ.ಗಳಿಂದ 73,450 ಕೋಟಿ ರೂ.ಗಳಿಗೆ ಅಂದರೆ ಶೇ. 11.4 ಏರಿಕೆ ಕಂಡಿದೆ.

ಇದು ವಿಶ್ವದ ಅತಿದೊಡ್ಡ ರೈತ-ಮಾಲೀಕತ್ವದ ಡೈರಿ ಸಹಕಾರ ಸಂಸ್ಥೆಯಾಗಿದ್ದು, 3.6 ಮಿಲಿಯನ್ (36 ಲಕ್ಷ) ರೈತರನ್ನು ಹೊಂದಿದೆ. 50ಕ್ಕೂ ಹೆಚ್ಚು ದೇಶಗಳಲ್ಲಿ ಅಮುಲ್ ಉತ್ಪನ್ನಗಳು ಮಾರಾಟವಾಗುತ್ತಿವೆ. ಪ್ರತಿದಿನ 31 ಮಿಲಿಯನ್ ಲೀಟರ್ ಹಾಲು ಸಂಗ್ರಹಿಸುವ ಈ ಸಂಸ್ಥೆ, ವಾರ್ಷಿಕವಾಗಿ ಹಾಲು, ಬೆಣ್ಣೆ, ಚೀಸ್, ತುಪ್ಪ ಮತ್ತು ಐಸ್ ಕ್ರೀಮ್ ಸೇರಿದಂತೆ 24 ಬಿಲಿಯನ್‌ಗೂ ಅಧಿಕ ಅಮುಲ್ ಉತ್ಪನ್ನಗಳ ಪ್ಯಾಕ್‌ಗಳನ್ನು ವಿತರಿಸುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+