Amrit Bharat Express: ದಕ್ಷಿಣ ಭಾರತ ಕಾಶ್ಮೀರ ನಡುವೆ ಅಮೃತ್ ಭಾರತ್ ರೈಲು
ಚೆನ್ನೈ, ಮಾರ್ಚ್ 12: ದಕ್ಷಿಣ ಭಾರತದಿಂದ ಕಾಶ್ಮೀರ ಪ್ರವಾಸ ಕೈಗೊಳ್ಳುವುದು ಇನ್ನು ಸುಲಭವಾಗಲಿದೆ. ದಕ್ಷಿಣ ರೈಲ್ವೆ ಕಾಶ್ಮೀರ ಮತ್ತು ಕನ್ಯಾಕುಮಾರಿ ನಡುವೆ ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರ ಆರಂಭಿಸಲು ತಯಾರಿ ನಡೆಸಿದೆ. ಕಡಿಮೆ ದರದಲ್ಲಿ, ಆರಾಮದಾಯಕವಾಗಿ ಪ್ರವಾಸಿಗರು ಸಂಚಾರ ನಡೆಸಬಹುದಾಗಿದೆ. ಸುಮಾರು 4 ಸಾವಿರ ಕಿ. ಮೀ. ಸಂಚಾರ ನಡೆಸುವ ರೈಲು ಇದಾಗಲಿದೆ.
ತಮಿಳುನಾಡಿನ ರಾಮೇಶ್ವರಂ ಅಥವ ಕನ್ಯಾಕುಮಾರಿ ಇಂದ ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲು ಜಮ್ಮು ಮತ್ತು ಕಾಶ್ಮೀರದ ಶ್ರೀನಗರಕ್ಕೆ ಸಂಪರ್ಕವನ್ನು ಕಲ್ಪಿಸಲಿದೆ. ಸದ್ಯ ರಸ್ತೆ, ವಿಮಾನದ ಮೂಲಕ ಮಾತ್ರ ಈ ಎರಡು ಪ್ರದೇಶಗಳ ನಡುವೆ ಸಂಚಾರವನ್ನು ನಡೆಸಬಹುದಾಗಿದೆ.

ಅಮೃತ್ ಭಾರತ್ ಎಕ್ಸ್‌ಪ್ರೆಸ್ ಹೈಸ್ಪೀಡ್ ಮಾದರಿಯ ಫುಶ್-ಪುಲ್ ರೈಲಾಗಿದೆ. ಎರಡೂ ಬದಿಯಲ್ಲಿ ಇದು ಇಂಜಿನ್‌ಗಳನ್ನು ಒಳಗೊಂಡಿದೆ. ಗಂಟೆಗೆ 130 ಕಿ. ಮೀ. ವೇಗದಲ್ಲಿ ಸಾಗುವಂತೆ ಈ ರೈಲನ್ನು ವಿನ್ಯಾಸಗೊಳಿಸಲಾಗಿದೆ. ವಂದೇ ಭಾರತ್ ಮಾದರಿಯ ಹವಾನಿಯಂತ್ರಣ ರಹಿತ ರೈಲು ಅಮೃತ್ ಭಾರತ್ ಎಕ್ಸ್‌ಪ್ರೆಸ್.
ಕನ್ಯಾಕುಮಾರಿ-ಕಾಶ್ಮೀರಕ್ಕೆ ಸಂಪರ್ಕ: 111 ಕಿ. ಮೀ. ಉದ್ದದ ಕಾತ್ರಾ-ಬಾನಿಹಾಲ್, 272 ಕಿ. ಮೀ. ಉದ್ದದ ಉದಾಂಪುರ್-ಶ್ರೀನಗರ-ಬಾರಾಮುಲ್ಲಾ ರೈಲು ಸೇವೆ ಈ ತಿಂಗಳ ಅಂತ್ಯದಲ್ಲಿ ಸಂಚಾರ ನಡೆಸಲು ಸಿದ್ಧವಾಗಿದೆ. ಈ ಮಾದರಿಯಲ್ಲಿ ದಕ್ಷಿಣ ರೈಲ್ವೆ ಕಾಶ್ಮೀರಕ್ಕೆ ಸಂಪರ್ಕ ಕಲ್ಪಿಸಲು ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲು ಓಡಿಸಲಿದೆ.
ಅಧಿಕಾರಿಗಳ ಮಾಹಿತಿ ಪ್ರಕಾರ ದಕ್ಷಿಣ ರೈಲ್ವೆ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಕಾಶ್ಮೀರಕ್ಕೆ ರೈಲು ಸಂಪರ್ಕ ಒದಗಿಸುವ ಕುರಿತು ಪ್ರಾಥಮಿಕ ಚರ್ಚೆಗಳು ನಡೆದಿವೆ. ಶ್ರೀನಗರ/ ಬಾರಾಮುಲ್ಲಾಗೆ ಕನ್ಯಾಕುಮಾರಿ/ ರಾಮೇಶ್ವರಂ ಮೂಲಕ ಸೇವೆ ಆರಂಭಿಸಬೇಕು ಎಂದು ಚರ್ಚೆಯಾಗಿದೆ.
ಭಾರತೀಯ ರೈಲ್ವೆ ನವದೆಹಲಿ-ಶ್ರೀನಗರ ನಡುವೆ ವಂದೇ ಭಾರತ್ ರೈಲು ಸೇವೆ ಆರಂಭಿಸಲು ಪ್ರಾಯೋಗಿಕ ಸಂಚಾರವನ್ನು ನಡೆಸಿದೆ. ಈ ರೈಲು ಸೇವೆ ಆರಂಭವಾದ ಬಳಿಕ ದಕ್ಷಿಣ ರೈಲ್ವೆ ಕನ್ಯಾಕುಮಾರಿ/ ರಾಮೇಶ್ವರಂ ಮೂಲಕ ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಶ್ರೀನಗರಕ್ಕೆ ಆರಂಭಿಸುವ ಪ್ರಸ್ತಾವನೆಯನ್ನು ಸಲ್ಲಿಕೆ ಮಾಡಲಿದೆ.
ಸದ್ಯ ಹೆಚ್ಚು ಪ್ರಯಾಣಿಕರ ದಟ್ಟಣೆ ಇರುವ ಮಾರ್ಗದಲ್ಲಿ ಭಾರತೀಯ ರೈಲ್ವೆ ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲುಗಳನ್ನು ಓಡಿಸುತ್ತಿದೆ. ಮಾಹಿತಿಗಳ ಪ್ರಕಾರ ದಕ್ಷಿಣ ರೈಲ್ವೆಗೆ ಎರಡು ಸೆಟ್ ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲುಗಳನ್ನು ನಿಯೋಜಿಸಲಾಗಿದೆ. ಈ ರೈಲುಗಳನ್ನು ಯಾವ ಮಾರ್ಗದಲ್ಲಿ ಓಡಿಸಲಾಗುತ್ತದೆ? ಎಂಬ ಮಾಹಿತಿ ಇನ್ನೂ ಸಿಕ್ಕಿಲ್ಲ.
2024ರಲ್ಲಿ ಭಾರತೀಯ ರೈಲ್ವೆ ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲುಗಳನ್ನು ಪರಿಚಯಿಸಿತು. 22 ಕೋಚ್‌ಗಳ ಈ ರೈಲು 12 ಸ್ಲೀಪರ್ ಕೋಚ್, 8 ಜನರಲ್ ಕೋಚ್, ಎರಡು ಲಗೇಜ್ ಕೋಚ್‌ಗಳನ್ನು ಇದು ಹೊಂದಿದೆ.
ಉತ್ತಮ ಗುಣಮಟ್ಟದ ಶೌಚಾಲಯಗಳು, ತುರ್ತು ಪರಿಸ್ಥಿತಿಯಲ್ಲಿ ಟಾಕ್ ಬ್ಯಾಕ್ ಸಿಸ್ಟಮ್, ವಂದೇ ಭಾರತ್ ರೈಲು ಮಾದರಿಯ ದೀಪದ ವ್ಯವಸ್ಥೆ, ಉತ್ತಮ ಮತ್ತು ಸುಖಕರ ಪ್ರಯಾಣದ ಅನುಭವ ನೀಡುವ ಸೀಟುಗಳನ್ನು ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಹೊಂದಿವೆ. ಆದರೆ ಇವು ಎಸಿ ವ್ಯವಸ್ಥೆಯನ್ನು ಹೊಂದಿಲ್ಲ.












Click it and Unblock the Notifications