G20 Summit: ಭಾರತಕ್ಕೆ ಬರೋದಿಲ್ವಾ ಅಮೆರಿಕ ಅಧ್ಯಕ್ಷ ಜೋ ಬೈಡನ್?
ಜಿ20 ಶೃಂಗಸಭೆ ಮೂಲಕ ಭಾರತ ಜಾಗತಿಕವಾಗಿ ತನ್ನ ಶಕ್ತಿ ತೋರಿಸಲು ಸಜ್ಜಾಗಿದೆ. ಹೀಗಾಗಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಜಗತ್ತಿನ ಗಣ್ಯರೆಲ್ಲಾ ರಾಜಧಾನಿ ನವದೆಹಲಿಗೆ ಬರುತ್ತಿದ್ದು, ಪ್ರಮುಖವಾಗಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಎಂಟ್ರಿಗೆ ವೇದಿಕೆ ಸಿದ್ಧವಾಗಿತ್ತು. ಪ್ರಧಾನಿ ಮೋದಿ & ಬೈಡನ್ ನಡುವೆ ಮಹತ್ವದ ಮಾತುಕತೆ ನಡೆಯಲಿದೆ ಅಂತಾ ಹೇಳಲಾಗಿತ್ತು. ಆದರೆ ಈಗ ಅಮೆರಿಕ ಅಧ್ಯಕ್ಷರು ಭಾರತಕ್ಕೆ ಬರುವುದೇ ಡೌಟ್ ಆಗಿದೆ!
ಎಲ್ಲಾ ಅಂದುಕೊಂಡ ರೀತಿ ನಡೆದಿದ್ದರೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ನಾಡಿದ್ದು ಇಲ್ಲಿ ಅಂದರೆ ಭಾರತಕ್ಕೆ ಬರಬೇಕಿತ್ತು. ಆದರೆ 13,568 ಕಿಲೋ ಮೀಟರ್ ದೂರದಿಂದ ಶಾಕಿಂಗ್ ಸುದ್ದಿಯೊಂದು ಸಿಕ್ಕಿದೆ. ಅದೇನೆಂದರೆ ಭಾರತಕ್ಕೆ ಬರಲು ಬ್ಯಾಗ್ ಪ್ಯಾಕ್ ಮಾಡಿದ್ದ ಜೋ ಬೈಡನ್ ಕುಟುಂಬಕ್ಕೆ ಆಘಾತ ಸಿಕ್ಕಿದೆ. ಬೈಡನ್ ಧರ್ಮಪತ್ನಿ ಜಿಲ್ ಬೈಡನ್‌ಗೆ ಕೊರೊನಾ ಕಂಟಕ ಶುರುವಾಗಿದೆ. 71 ವರ್ಷದ ಜಿಲ್ ಬೈಡನ್‌ಗೆ ಕೊರೊನಾ ಕನ್ಫರ್ಮ್ ಆಗಿದ್ದು, ಈ ಕಾರಣಕ್ಕೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಕೂಡ ಭಾರತಕ್ಕೆ ಬರುವುದೇ ಅನುಮಾನ!

ಜೋ ಬೈಡನ್ ಬರ್ತಾರಾ? ಬರಲ್ವಾ?
ಹೌದು, ಭಾರತ ಮತ್ತು ಅಮೆರಿಕ ಸಂಬಂಧ ಮತ್ತಷ್ಟು ಗಟ್ಟಿಗೊಳಿಸಲು ಜಿ-20 ಶೃಂಗಸಭೆ ದೊಡ್ಡ ವೇದಿಕೆ ಒದಗಿಸಿತ್ತು. ಈಗಾಗಲೇ ರಷ್ಯಾ & ಚೀನಾ ಅಧ್ಯಕ್ಷರು ಜಿ-20 ಶೃಂಗಸಭೆಗೆ ಬರುವುದಿಲ್ಲ ಎಂದಿದ್ದಾರೆ. ಹೀಗಿದ್ದಾಗ ಅಮೆರಿಕ ಮತ್ತು ಭಾರತದ ಬಾಂಧವ್ಯ ಸಾರಲು ಈ ಜಿ-20 ಶೃಂಗಸಭೆ ವೇದಿಕೆ ಒದಗಿಸಿತ್ತು. ಈಗ ನೋಡಿದರೆ, ಮಹಾಮಾರಿ ಡೆಡ್ಲಿ ಕೊರೊನಾ ಬೈಡನ್ ಅವರ ಭೇಟಿಗೆ ಅಡ್ಡಿಯಾಗಿದೆ.
ಅಮೆರಿಕ ಅಧ್ಯಕ್ಷ ಬೈಡನ್ ಜೊತೆ ಜಿಲ್ ಬೈಡನ್ ಕೂಡ ಜಿ20 ಶೃಂಗಸಭೆಯಲ್ಲಿ ಭಾಗವಹಿಸಲು ಭಾರತಕ್ಕೆ ಆಗಮಿಸಬೇಕಿತ್ತು. ಆದರೆ ಇದೀಗ ಸಿಗುತ್ತಿರುವ ಮಾಹಿತಿ ಪ್ರಕಾರ ಜಿಲ್ ಬೈಡನ್‌ಗೆ ಕೊರೊನಾ ಬಂದಿದ್ದರು ಅವರ ಪತಿ ಬೈಡನ್‌ಗೆ ಬಂದಿಲ್ಲ. ಇದೇ ಕಾರಣಕ್ಕೆ ಜೋ ಬೈಡನ್ ಭಾರತಕ್ಕೆ ಬಂದರೂ ಜಿಲ್ ಬೈಡನ್ ಬರಲ್ಲ ಎನ್ನಲಾಗಿದೆ. ಬೈಡನ್ ಅವರಿಗೆ ಈಗಾಗಲೇ ಒಂದು ಬಾರಿ ಕೊರೊನಾ ಪರೀಕ್ಷೆ ಮಾಡಲಾಗಿದೆ. ಪರೀಕ್ಷೆಯಲ್ಲಿ ಜೋ ಬೈಡನ್ ಅವರಿಗೆ ಕೊರೊನಾ ದೃಢವಾಗಿಲ್ಲ.
ಭಾರತಕ್ಕೆ ಬರುತ್ತಿರುವ ಬಲಶಾಲಿ ನಾಯಕರು!
ಇನ್ನು ಭಾರತದಲ್ಲಿ ನಡೆಯುವ ಜಿ20 ಶೃಂಗಸಭೆಯಲ್ಲಿ ಬಲಶಾಲಿ ರಾಷ್ಟ್ರಗಳ ಮುಖ್ಯಸ್ಥರು ಭಾಗವಹಿಸುತ್ತಾರೆ. ಈ ಪೈಕಿ ಅಮೆರಿಕ ಅಧ್ಯಕ್ಷ ಬೈಡನ್, ಫ್ರಾನ್ಸ್ ಅಧ್ಯಕ್ಷ ಇಮಾನ್ಯುಯಲ್ ಮ್ಯಾಕ್ರಾನ್, ಆಸ್ಟ್ರೇಲಿಯಾ ಪ್ರಧಾನಿ ಆಂಥೊಣಿ ಆಲ್ಬನೆಸ್, ಜರ್ಮನ್ ಚಾನ್ಸಲರ್ ಒಲಾಫ್ ಸ್ಕೋಲ್ಜ್, ಬ್ರಿಟನ್ ಪ್ರಧಾನಿ ರಿಷಿ ಸುನಕ್, ಜಪಾನ್‌ನ ಪ್ರಧಾನಿ ಫ್ಯುಮಿಯೊ ಕಿಷಿದಾ ಹಾಗೂ ಬ್ರಜಿಲ್ ಅಧ್ಯಕ್ಷ ಲ್ಯೂಜ್ ಇನಾಸಿಯೊ ಲುಲಾ ಡಿಸಿಲ್ವಾ ಸೇರಿ ಮತ್ತಿತರರು ಹಾಜರಾಗಿ ಚರ್ಚೆ ನಡೆಸಲಿದ್ದಾರೆ. ಆದರೆ ಬೈಡನ್ ಅವರ ಕುಟುಂಬಕ್ಕೆ ಈಗ ಕೊರೊನಾ ಶಾಕ್ ಸಿಕ್ಕಿದೆ.

ಪ್ರಧಾನಿ ಮೋದಿ & ಬೈಡನ್ ಮಾತುಕತೆ
ಈ ಬಾರಿಯ ಜಿ20 ಶೃಂಗಸಭೆ ನೇತೃತ್ವ ಭಾರತ ವಹಿಸಿದೆ. ಜಿ20 ಶೃಂಗಸಭೆ ಸೆಪ್ಟೆಂಬರ್ 9, 10 ರಂದು ನವದೆಹಲಿಯಲ್ಲಿ ನಡೆಯುತ್ತೆ. ಹೀಗಾಗಿ ಭಾರತ ಜಿ20 ನಾಯಕತ್ವ ವಹಿಸಿರುವುದಕ್ಕಾಗಿ ಅಮೆರಿಕ ಅಧ್ಯಕ್ಷ ಬೈಡನ್, ಪ್ರಧಾನಿ ಮೋದಿ ಅವರನ್ನು ಅಭಿನಂದಿಸಲಿದ್ದಾರೆ. ಅಲ್ಲದೆ ಜಿ20 ಶೃಂಗಸಭೆಗೂ 2 ದಿನ ಮೊದಲು ಅಂದ್ರೆ ಸೆಪ್ಟೆಂಬರ್ 7 ಕ್ಕೆ ಬೈಡನ್ ನವದೆಹಲಿಗೆ ಬರಲಿದ್ದಾರೆ. ಸೆಪ್ಟೆಂಬರ್ 8 ರಂದು ಪಿಎಂ ಮೋದಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಇದು ಭಾರತ & ಅಮೆರಿಕದ ನಡುವೆ ಬಾಂಧವ್ಯ ಮತ್ತಷ್ಟು ಗಟ್ಟಿಗೊಳಿಸಲಿದೆ.
ಜಿ20 ಒಕ್ಕೂಟದ ಶಕ್ತಿ ಇದು
ಹಾಗೇ ಜಿ20 ಶೃಂಗಸಭೆಯಲ್ಲಿ ಅರ್ಜೆಂಟಿನಾ, ಆಸ್ಟ್ರೇಲಿಯಾ, ಬ್ರಜಿಲ್, ಕೆನಾಡಾ, ಚೀನಾ, ಫ್ರಾನ್ಸ್, ಜರ್ಮನಿ, ಇಂಡೋನೇಷ್ಯಾ, ಇಟಲಿ, ಜಪಾನ್, ಕೊರಿಯಾ, ಮೆಕ್ಸಿಕೊ, ರಷ್ಯಾ, ಸೌದಿ ಅರೇಬಿಯಾ, ದಕ್ಷಿಣ ಆಫ್ರಿಕಾ, ಟರ್ಕಿ, ಬ್ರಿಟನ್, ಅಮೆರಿಕ & ಐರೋಪ್ಯ ಒಕ್ಕೂಟಗಳು ಭಾಗವಹಿಸಲಿವೆ. ಭಾರತ ಕೂಡ ಜಿ20 ಒಕ್ಕೂಟದ ಪ್ರಮುಖ ರಾಷ್ಟ್ರವಾಗಿದೆ. ಇದೇ ರಾಷ್ಟ್ರ ಈ ಬಾರಿಯ ಜಿ20 ಶೃಂಗಸಭೆ ನೇತೃತ್ವ ವಹಿಸಿರುವುದು ವಿಶೇಷ. ಆದರೆ ಚೀನಾ ಮತ್ತು ರಷ್ಯಾದ ಅಧ್ಯಕ್ಷರು ಜಿ20 ಶೃಂಗಸಭೆಗೆ ಬರುತ್ತಿಲ್ಲ.
ಬೈಡನ್ ಯುದ್ಧದ ಬಗ್ಗೆ ಮಾತನಾಡುತ್ತಾರಾ?
ಶೃಂಗಸಭೆಯಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಶುದ್ಧ ಇಂಧನ ಪರಿವರ್ತನೆ & ಹವಾಮಾನದ ಬದಲಾವಣೆ ಸಂಬಂಧಿಸಿದ ಜಾಗತಿಕ ಸಮಸ್ಯೆ ಬಗ್ಗೆ ಪಸ್ತಾಪಿಸಲಿದ್ದಾರೆ. ಇದರ ಜೊತೆ ರಷ್ಯಾ & ಉಕ್ರೇನ್ ವಿರುದ್ಧ ನಡೆಸುತ್ತಿರುವ ಯುದ್ಧದ ಪರಿಣಾಮ, ಯುದ್ಧದಿಂದ ಎದುರಾದ ಆರ್ಥಿಕ & ಸಾಮಾಜಿಕ ಪರಿಣಾಮ ತಗ್ಗಿಸುವ ನಿಟ್ಟಿನಲ್ಲಿ ಬೈಡನ್ ಜಿ20 ಶೃಂಗಸಭೆಯಲ್ಲಿ ಸಮಾಲೋಚನೆ ನಡೆಸುತ್ತಾರೆ ಅಂತಾ ಹೇಳಲಾಗಿದೆ. ಹೀಗೆ ರಷ್ಯಾ ವಿರುದ್ಧ ಮತ್ತೊಮ್ಮೆ ಇಡೀ ಜಗತ್ತಿನ ಗಮನ ಸೆಳೆಯಲು ಅಮೆರಿಕ ಪ್ರಯತ್ನಿಸುವ ಸಾಧ್ಯತೆ ಇದೆ.

ರಷ್ಯಾ ಅಧ್ಯಕ್ಷ ಪುಟಿನ್ ಬರೋದಿಲ್ಲ
ಸೆಪ್ಟೆಂಬರ್ 9 & 10ರಂದು ರಾಜಧಾನಿ ನವದೆಹಲಿಯಲ್ಲಿ ನಡೆಯುವ ಜಿ20 ಶೃಂಗಸಭೆಯಲ್ಲಿ, ತಾವು ಭಾಗವಹಿಸಲು ಸಾಧ್ಯವಾಗ್ತಿಲ್ಲ ಎಂದು ಈಗಾಗಲೇ ರಷ್ಯಾದ ಅಧ್ಯಕ್ಷ ಪುಟಿನ್ ಹೇಳಿದ್ದಾರೆ. ಹೀಗಾಗಿ ರಷ್ಯಾ ಪ್ರತಿನಿಧಿಯಾಗಿ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ಬರುತ್ತಿದ್ದಾರೆ. ಪುಟಿನ್ ಈ ವಿಚಾರವನ್ನ ಪ್ರಧಾನಿ ಮೋದಿ ಅವರಿಗೆ ತಿಳಿಸಿದ್ದಾರೆ. ಪುಟಿನ್ ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ಕೋರ್ಟ್‌ನಿಂದ ವಾರಂಟ್ ಇರುವ ಕಾರಣ ಬಂಧನದ ಭೀತಿ ಇದ್ದು. ಹೀಗಾಗಿಯೇ ಪುಟಿನ್ ರಷ್ಯಾ ಬಿಟ್ಟು ಹೊರಗೆ ಬರುತ್ತಿಲ್ಲ ಎಂದು ಹೇಳಲಾಗುತ್ತಿದೆ. ಇದರ ಜೊತೆಗೆ ಚೀನಾ ಅಧ್ಯಕ್ಷರು ಕೂಡ ಬರುವುದಿಲ್ಲ. ಬದಲಾಗಿ ಚೀನಾ ಪ್ರಧಾನಿ ಬರುತ್ತಿದ್ದಾರೆ.
ಅಮೆರಿಕ ಅಧ್ಯಕ್ಷ ಬೈಡನ್ ಬೇಸರ
ಭಾರತದಲ್ಲಿ ನಡೆಯುತ್ತಿರುವ ಮಹತ್ವದ ಸಭೆಗೆ ಚೀನಾ ಅಧ್ಯಕ್ಷರು ಬರಲ್ಲ ಅನ್ನೋದು ಗ್ಯಾರಂಟಿ ಆಗಿದೆ. ಈ ಹಿನ್ನೆಲೆ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಬೇಸರ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಅಲ್ಲದೆ, ನನಗೆ ಇದರಿಂದ ಬೇಸರವಾಗಿದೆ. ಆದರೆ ನಾನು ಅವರನ್ನು ನೋಡಿಯೇ ಬರುತ್ತೇನೆ ಎಂದಿದ್ದಾರೆ ಬೈಡನ್. ಈ ನಡುವೆ ಅಮೆರಿಕ & ಚೀನಾ ಸಂಬಂಧ ಕೂಡ ಹಳಸಿ ಹೋಗುತ್ತಿದೆ. ಹೀಗಾಗಿ ಅಮೆರಿಕ ಅಧ್ಯಕ್ಷರು ಭಾರತದಲ್ಲಿ ಜಿ20 ಸಭೆಯ ಸಂದರ್ಭದಲ್ಲೇ ಚೀನಾ ಅಧ್ಯಕ್ಷರ ಜತೆ ಸಭೆಗೆ ಪ್ಲ್ಯಾನ್ ಮಾಡಿದ್ದರು ಎನ್ನಲಾಗಿತ್ತು. ಈಗ ಎಲ್ಲಾ ಬುಡಮೇಲಾಗಿದೆ.












Click it and Unblock the Notifications