G20 Summit: ಭಾರತಕ್ಕೆ ಖಡಕ್ ಎಂಟ್ರಿ ಕೊಟ್ಟ ಅಮೆರಿಕ ಅಧ್ಯಕ್ಷ ಬೈಡನ್

ಅಮೆರಿಕ ಅಧ್ಯಕ್ಷ ಜೋ ಬೈಡನ್ ಭಾರತಕ್ಕೆ ಬಂದು ಇಳಿದಿದ್ದಾರೆ. ರಾಷ್ಟ್ರ ರಾಜಧಾನಿಗೆ ಬಂದು ಇಳಿದ ಜೋ ಬೈಡನ್ ಅವರನ್ನು ಅದ್ಧೂರಿಯಾಗಿ ಬರಮಾಡಿಕೊಂಡಿದೆ ಭಾರತ. ನವದೆಹಲಿಯಲ್ಲಿ ನಡೆಯಲಿರುವ ಜಿ20 ಶೃಂಗಸಭೆ ಹಿನ್ನೆಲೆ ಅಮೆರಿಕ ಅಧ್ಯಕ್ಷ ಬೈಡನ್ ಭಾರತಕ್ಕೆ ಬಂದಿದ್ದಾರೆ. ಸೆಪ್ಟೆಂಬರ್ 9 ಮತ್ತು 10ರಂದು ಅಂದರೆ ನಾಳೆ ಮತ್ತು ನಾಡಿದ್ದು ಭಾರತದ ನೇತೃತ್ವದಲ್ಲಿ ಜಿ20 ಶೃಂಗಸಭೆ ನವದೆಹಲಿಯಲ್ಲಿ ನಡೆಯಲಿದೆ.

ಅಮೆರಿಕ ಕಾಲಮಾನದ ಪ್ರಕಾರ ನಿನ್ನೆಯೇ ಅಂದರೆ ಸೆಪ್ಟೆಂಬರ್ 7ರಂದು ಅಮೆರಿಕದಿಂದ ಹೊರಟಿದ್ದರು ಬೈಡನ್. ವಿಶೇಷ ವಿಮಾನದಲ್ಲಿ ಹೊರಟಿದ್ದ ಅಮೆರಿಕ ಅಧ್ಯಕ್ಷ ಬೈಡನ್, ಇದೀಗ ತಮ್ಮ ಅಧಿಕಾರಿಗಳ ಜೊತೆಗೆ ನವದೆಹಲಿಗೆ ಬಂದು ಇಳಿದಿದ್ದಾರೆ. ಇನ್ನು ಬೈಡನ್ ಆಗಮನ ಹಿನ್ನೆಲೆ ಹಿಂದೆಂದೂ ನೋಡಿರದ ಭದ್ರತೆ ಕೈಗೊಳ್ಳಲಾಗಿದೆ. ಹೀಗಾಗಿ ನವದೆಹಲಿ ಇದೀಗ 7 ಸುತ್ತಿನ ಭದ್ರಕೋಟೆ ಆಗಿ ಬದಲಾಗಿದೆ. ಅಮೆರಿಕ ಅಧ್ಯಕ್ಷ ಬೈಡನ್ ಅವರನ್ನು ಭಾರಿ ಭದ್ರತೆ ನಡುವೆ ವಿಮಾನ ನಿಲ್ದಾಣದಿಂದ ಕರೆದುಕೊಂಡು ಹೋಗಲಾಗಿದೆ.

american-president-joe-biden-arrived-in-india
Photo Credit: PTI

ಜಿ20 ಶೃಂಗಸಭೆಗೆ ಮೊದಲು ದ್ವಿಪಕ್ಷೀಯ ಸಭೆ

ಅಮೆರಿಕ ಅಧ್ಯಕ್ಷ ಜೋ ಬೈಡನ್ & ಪ್ರಧಾನಿ ಮೋದಿ ಮಧ್ಯೆ ಇನ್ನೇನು ಕೆಲವೇ ಹೊತ್ತಲ್ಲಿ ಮಹತ್ವದ ದ್ವಿಪಕ್ಷೀಯ ಮಾತುಕತೆ ನಡೆಯಲಿದೆ. ಭಾರತ ಹಾಗೂ ಅಮೆರಿಕ ದ್ವಿಪಕ್ಷೀಯ ಮಾತುಕತೆಗೆ ಬೇಕಾದ ಎಲ್ಲಾ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಅದರಲ್ಲೂ ಇಡೀ ಪ್ರಪಂಚ ಭಾರತ ಮತ್ತು ಅಮೆರಿಕ ನಡುವೆ ನಡೆಯುವ ಮಾತುಕತೆಗೆ ಕಾದು ಕುಳಿತಿದೆ. ರಷ್ಯಾಗೂ & ಚೀನಾಗೂ ಈ ಸಭೆ ಅತ್ಯಂತ ಪ್ರಮುಖವಾದದ್ದು. ಏಕೆಂದರೆ ಇಲ್ಲಿ ಕೈಗೊಳ್ಳುವ ನಿರ್ಧಾರ ಜಾಗತಿಕ ಮಟ್ಟದಲ್ಲೂ ಪ್ರಭಾವ ಬೀರಲಿದೆ.

ಸಾಮಾನ್ಯವಾಗಿ ಜಿ20 ಶೃಂಗಸಭೆ ವೇಳೆ ದ್ವಿಪಕ್ಷೀಯ ಚರ್ಚೆಗೆ ಅವಕಾಶ ಇರಲ್ಲ. ಆದ್ರೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಹಾಗೂ ಸೌದಿಯ ದೊರೆ ಮೊಹಮ್ಮದ್ ಬಿನ್ ಸಲ್ಮಾನ್ ಅವರಿಗೆ ಭಾರತ ವಿಶೇಷ ವಿನಾಯಿತಿ ನೀಡಿದೆ. ಎರಡೂ ದೇಶಗಳ ಜೊತೆ ದ್ವಿಪಕ್ಷೀಯ ಮಾತುಕತೆ ನಡೆಯಲಿದೆ. ಪ್ರಮುಖ ವಿಚಾರ ಏನೆಂದರೆ ಅಮೆರಿಕ ಜೊತೆಗಿನ ಸಭೆ. ಅಮೆರಿಕ ಅಧ್ಯಕ್ಷ ಜೋ ಬೈಡನ್ ಜೊತೆ ಪಿಎಂ ಮೋದಿ ಮುಖ್ಯವಾಗಿ 6 ವಿಚಾರಗಳ ಬಗ್ಗೆ ಚರ್ಚೆ ನಡೆಯಲಿದೆ. ಹೀಗಾಗಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಇನ್ನೇನು ಕೆಲವೇ ಹೊತ್ತಲ್ಲಿ ಸಭೆ ಆರಂಭವಾಗಲಿದೆ.

ಪರಮಾಣು ರಿಯಾಕ್ಟರ್ ಬಗ್ಗೆ ಚರ್ಚೆ

ಅಮೆರಿಕದ ತಂತ್ರಜ್ಞಾನ ಸಹಾಯದಿಂದ ಭಾರತದಲ್ಲಿ 6 ಪರಮಾಣು ರಿಯಾಕ್ಟರ್‌ ನಿರ್ಮಾಣಕ್ಕೆ ಚಿಂತನೆ ನಡೆದಿದೆ. ಹೀಗೆ ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (NPCIL) & ವೆಸ್ಟಿಂಗ್‌ಹೌಸ್ ಎಲೆಕ್ಟ್ರಿಕ್ ಕಂಪನಿ (WEC) ನಡುವೆ ಈ ಕುರಿತು ಈಗ ಮಾತುಕತೆ ನಡೆಯುತ್ತಿದೆ. ಆಧುನಿಕ ರಿಯಾಕ್ಟರ್ ತಂತ್ರಜ್ಞಾನ ಅಭಿವೃದ್ಧಿಪಡಿಸಲು ಚರ್ಚೆ ನಡೆದಿದ್ದು, ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಬೈಡನ್ ನಡುವೆ ಅಂತಿಮ ಚರ್ಚೆಯು ನಡೆಯುವ ಸಾಧ್ಯತೆ ಇದೆ.

ಯುದ್ಧ ವಿಮಾನಕ್ಕೆ ಇಂಜಿನ್ ಸಿಗುತ್ತಾ?

ಅಮೆರಿಕ & ಭಾರತ ಮಧ್ಯೆ ಮತ್ತೊಂದು ಪ್ರಮುಖ ಒಪ್ಪಂದಕ್ಕೆ ಸಹಿ ಬೀಳಬಹುದು ಅಂತಾ ಈಗ ಹೇಳಲಾಗುತ್ತಿದೆ. ಭಾರತದಲ್ಲಿ GE F-414 ಜೆಟ್ ಇಂಜಿನ್‌ ತಯಾರಿಸಲು ಅಮೆರಿಕದ ಮೂಲಕ ತಂತ್ರಜ್ಞಾನ ಸಿಗುವ ನಿರೀಕ್ಷೆ ಇದೆ. ಈಗಾಗಲೇ ಅಮೆರಿಕ ಕಾಂಗ್ರೆಸ್ ಕೂಡ ಇದಕ್ಕೆ ಇರುವ ಅಡ್ಡಿ ದೂರ ಮಾಡಿದ್ದು, ಬೈಡನ್ ಪಿಎಂ ಮೋದಿ ಅವರ ಜೊತೆ ದ್ವಿಪಕ್ಷೀಯ ಸಭೆ ನಡೆಸುವಾಗ ಈ ಒಪ್ಪಂದಕ್ಕೆ ಗ್ರೀನ್ ಸಿಗ್ನಲ್ ಸಿಗುವ ಸಾಧ್ಯತೆ ಇದೆ. ಈ ಒಪ್ಪಂದ ಕೂಡ ಭಾರತ & ಅಮೆರಿಕದ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವ ನಿರೀಕ್ಷೆ ಇದೆ.

american-president-joe-biden-arrived-in-india
Photo Credit: PTI

MQ-9B ಡ್ರೋನ್ ಒಪ್ಪಂದಕ್ಕೆ ಸಹಿ?

ಜನರಲ್ ಅಟಾಮಿಕ್ಸ್ MQ-9B HALE UAV ಡ್ರೋನ್‌ ವಿಚಾರದಲ್ಲಿ ಅಮೆರಿಕ & ಭಾರತ ಚರ್ಚೆ ನಡೆಸುತ್ತಿವೆ. ಬೈಡನ್ ಭಾರತ ಭೇಟಿ ವೇಳೆ ಒಪ್ಪಂದಕ್ಕೆ ಅಂತಿಮ ಮುದ್ರೆ ಬೀಳುತ್ತದೆ ಎಂಬ ನಿರೀಕ್ಷೆ ಇದೆ. ಭಾರತಕ್ಕೆ MQ-9B HALE UAV ಡ್ರೋನ್ಸ್ ಮತ್ತಷ್ಟು ಬಲ ತುಂಬಲಿವೆ. ಹೀಗಾಗಿ ಪ್ರಧಾನಿ ಮೋದಿ & ಬೈಡನ್ ನಡುವೆ ಅಂತಿಮ ಹಂತದ ಚರ್ಚೆ ನಡೆಯಬಹುದು ಎನ್ನಲಾಗಿದೆ.

ವಿದ್ಯಾರ್ಥಿಗಳಿಗೆ ಸಿಗುತ್ತಾ ಬಂಪರ್?

ಅಮೆರಿಕದಲ್ಲಿ ವಿದ್ಯಾಭ್ಯಾಸ ನಡೆಸಲು ಭಾರತ ಮೂಲದ ವಿದ್ಯಾರ್ಥಿಗಳಿಗೆ ಸೂಕ್ತ ಅನುಕೂಲ ಕಲ್ಪಿಸಲು ಯತ್ನ ಸಾಗಿವೆ. ಭಾರತದ ವಿದ್ಯಾರ್ಥಿಗಳಿಗೆ ಅನುಗುಣವಾಗಿ ಶೈಕ್ಷಣಿಕ ಕಾರ್ಯಕ್ರಮ ಘೋಷಿಸಲು ಚರ್ಚೆ ನಡೆಯುತ್ತಿದೆ. ಹೀಗಾಗಿ ಭಾರತದ ವಿದ್ಯಾರ್ಥಿಗಳು ಅಮೆರಿಕದಲ್ಲಿ ಹೋಗಿ ವಿದ್ಯಾಭ್ಯಾಸ ಮಾಡಲು ಹಾಗೂ 3 ವರ್ಷಗಳ ತನಕ ಅಮೆರಿಕದಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಕಲ್ಪಿಸಲು ಸಾಧ್ಯವಾಗುವ ನಿರೀಕ್ಷೆ ಇದೆ. ಈ ಒಪ್ಪಂದಕ್ಕೆ ಇಂದು ಒಪ್ಪಿಗೆ ಸಿಕ್ಕರೆ ಭಾರತದ ವಿದ್ಯಾರ್ಥಿಗಳು ಅಮೆರಿಕದಲ್ಲಿ ಸುಲಭವಾಗಿ ಕೆಲಸ ಹುಡುಕಬಹುದು.

ಉಕ್ರೇನ್ ಯುದ್ಧಕ್ಕೆ ಭಾರತದ ನೆರವು

ರಷ್ಯಾ & ಉಕ್ರೇನ್ ಮಧ್ಯೆ ಯುದ್ಧ ಬಗ್ಗೆ ಭಾರತ ವಿಭಿನ್ನ ನಿಲುವು ತೆಗೆದುಕೊಂಡಿದೆ. ಉಕ್ರೇನ್ ಪರ ನಿಲ್ಲದೆ, ರಷ್ಯಾಗೆ ಬೆಂಬಲ ನೀಡದೆ ಯುದ್ಧ ಬೇಡವೆ ಬೇಡ ಅನ್ನುತ್ತಿದೆ. ಹಾಗೇ ಕಷ್ಟದಲ್ಲಿ ಇರುವ ಉಕ್ರೇನ್‌ಗೆ ನೆರವು ನೀಡಲು ಅಮೆರಿಕ ಅಧ್ಯಕ್ಷರು ಭಾರತದ ಬಳಿ ಬೇಡಿಕೆ ಇಡಬಹುದು. ಭಾರತ ಈವರೆಗೆ 100 ಟನ್‌ ಮಾನವೀಯ ನೆರವನ್ನ ಕಳುಹಿಸಿದೆ. ಅಗತ್ಯ ಔಷಧ ವೈದ್ಯಕೀಯ ಉಪಕರಣ, ಆಹಾರ ಸೇರಿದಂತೆ ಉಕ್ರೇನ್ ಜನರಿಗೆ ಬೇಕಿರುವ ವಸ್ತು ತಲುಪಿಸಿದೆ. ಇದರ ಜತೆ ಈಗ ಅಮೆರಿಕ & ಭಾರತ ಒಟ್ಟಾಗಿ ಉಕ್ರೇನ್‌ಗೆ ಮಾನವೀಯ ನೆರವನ್ನು ಕಳಿಸುವ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ.

ಕನ್ನಡಿಗರಿಗೂ ಕಾದಿದೆ ಬಂಪರ್ ಸುದ್ದಿ

ಇದೆಲ್ಲಕ್ಕಿಂತಲೂ ಮುಖ್ಯವಾಗಿ ಬೆಂಗಳೂರಿನಲ್ಲಿ ನೂತನವಾಗಿ ಆರಂಭ ಆಗುತ್ತಿರುವ ಅಮೆರಿಕದ ರಾಯಭಾರ ಕಚೇರಿ ವಿಚಾರದ ಬಗ್ಗೆ ಬೈಡನ್ & ಪ್ರಧಾನಿ ಮೋದಿ ಚರ್ಚಿಸಲಿದ್ದಾರೆ ಅಂತಾ ಹೇಳಲಾಗಿದೆ. ಬೆಂಗಳೂರು & ಅಹಮದಾಬಾದ್‌ನಲ್ಲಿ ಅಮೆರಿಕದ ರಾಯಭಾರ ಕಚೇರಿಗಳನ್ನು ಆರಂಭಿಸಲು ಸಿದ್ಧತೆ ನಡೆಯುತ್ತಿದೆ. ಹಾಗೇ ಭಾರತ ಕೂಡ ಅಮೆರಿಕದ ಸಿಯಾಟಲ್ ಸೇರಿದಂತೆ ಒಟ್ಟು 2 ಕಡೆ ಹೊಸ ರಾಯಭಾರ ಕಚೇರಿ ಶುರು ಮಾಡಲು ಸಿದ್ಧತೆ ನಡೆಸಿದೆ. ಹೀಗೆ ಒಟ್ಟಾರೆ ಆರು ವಿಚಾರಗಳು ಪ್ರಮುಖವಾಗಿ ಭಾರತ ಮತ್ತು ಅಮೆರಿಕದ ದ್ವಿಪಕ್ಷೀಯ ಚರ್ಚೆಯ ವೇಳೆ ಪ್ರಸ್ತಾಪವಾಗುವ ನಿರೀಕ್ಷೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+