Amazonನ 46 ಲಕ್ಷ ರೂ. ಪ್ಯಾಕೇಜ್‌ ಕೆಲಸ ಬಿಟ್ಟು ಭಾರತೀಯ ಸೇನೆ ಸೇರಿದ ಟೆಕ್ಕಿ: ಇದು ಶಾರದೇಂದು ದೇಶಪ್ರೇಮದ ಕಥೆ

ಲಕ್ನೋದ 27 ವರ್ಷದ ಯುವಕ ಶಾರದೇಂದು ತಿವಾರಿ ಅವರು ಜಾಗತಿಕ ದೈತ್ಯ ಇ-ಕಾಮರ್ಸ್ ಮತ್ತು ಟೆಕ್ ಸಂಸ್ಥೆಯಾದ ಅಮೆಜಾನ್ ಕಂಪನಿಯಲ್ಲಿ ಕ್ಲೌಡ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಅವರ ವಾರ್ಷಿಕ ವೇತನ ಬರೋಬ್ಬರಿ 46 ಲಕ್ಷ ರೂಪಾಯಿಗಳಾಗಿತ್ತು. ಆದರೆ, ಐಷಾರಾಮಿ ಕಾರ್ಪೊರೇಟ್ ಜೀವನ ಮತ್ತು ಆಕರ್ಷಕ ವೇತನ ಅವರ ದೇಶಭಕ್ತಿಯ ಮುಂದೆ ಸಣ್ಣದಾಗಿ ಕಂಡಿತು ಎಂದೆನಿಸುತ್ತದೆ.

ಇಷ್ಟು ದೊಡ್ಡ ಮೊತ್ತದ ಪ್ಯಾಕೇಜ್ ಅನ್ನ ಬಿಟ್ಟು, ಅವರು ಇದೀಗ ಭಾರತೀಯ ಸೇನೆ ಸೇರಲು ಸಜ್ಜಾಗಿದ್ದಾರೆ. ಇಂದು (ಸೆಪ್ಟೆಂಬರ್‌ 05) ಬಿಹಾರದ ಗಯಾದಲ್ಲಿರುವ ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿಯಲ್ಲಿ ನಡೆಯುವ ಪಾಸಿಂಗ್ ಔಟ್ ಪರೇಡ್ ಮೂಲಕ ಅವರು ಸೇನೆಗೆ ಅಧಿಕೃತವಾಗಿ ಸೇರ್ಪಡೆಗೊಳ್ಳುತ್ತಿದ್ದಾರೆ.

Amazon Techie Shardendu Tiwari Quits Rs 46 Lakh Job To Join Indian Army Commissioned At OTA Gaya

ಕೇವಲ ಅಮೆಜಾನ್ ಮಾತ್ರವಲ್ಲದೆ, ಜಾಗತಿಕ ಏರೋಸ್ಪೇಸ್ ದಿಗ್ಗಜ ಕಂಪನಿಯಾದ ಏರ್‌ಬಸ್ ನೀಡಿದ್ದ ಉನ್ನತ ಹುದ್ದೆಯ ಆಫರ್ ಅನ್ನ ಸಹ ತಿರಸ್ಕರಿಸಿ, ದೇಶಸೇವೆಗಾಗಿ ಆಲಿವ್ ಗ್ರೀನ್ ಸಮವಸ್ತ್ರವನ್ನ ಆರಿಸಿಕೊಂಡಿದ್ದಾರೆ.

ತಂದೆಯ ಹೆಜ್ಜೆಯನ್ನೇ ಅನುಸರಿಸಿದ ಮಗ

ಉತ್ತರ ಪ್ರದೇಶದ ಸುಲ್ತಾನ್‌ಪುರ ಜಿಲ್ಲೆಯ ಪೀಪರ್‌ಗಾಂವ್ ಮೂಲದವರಾದ ಶಾರದೇಂದು ಅವರ ಕುಟುಂಬ ಪ್ರಸ್ತುತ ಲಕ್ನೋದ ನೀಲಮಠದಲ್ಲಿ ನೆಲೆಸಿದೆ. ಅವರ ಕುಟುಂಬದಿಂದ ಸೇನೆ ಸೇರುತ್ತಿರುವುದರಲ್ಲಿ ಶಾರದೇಂದು ಮೊದಲಿನವರೆನಲ್ಲ. ಇವರ ತಂದೆ, ಗೌರವಾನ್ವಿತ ಕ್ಯಾಪ್ಟನ್ ರಾಜ್ ಕುಮಾರ್ ತಿವಾರಿ ಅವರು ಆರ್ಮಿ ಸರ್ವಿಸ್ ಕಾರ್ಪ್ಸ್‌ನಲ್ಲಿ ಬರೋಬ್ಬರಿ 36 ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.

ಬಾಲ್ಯದಿಂದಲೂ ತಂದೆಯ ಶಿಸ್ತು ಮತ್ತು ದೇಶಭಕ್ತಿಯನ್ನ ನೋಡಿಕೊಂಡು ಬೆಳೆದ ಶಾರದೇಂದು ಅವರಿಗೆ, ತಾನೂ ಸಹ ಸೇನೆಗೆ ಸೇರಬೇಕೆಂಬ ಒಲವು ಬೆಳೆದಿತ್ತು. ತಂದೆ ಸ್ಫೂರ್ತಿಯಿಂದಾಗಿ, ಇಂದು ಎರಡನೇ ತಲೆಮಾರಿನ ಸೈನಿಕನಾಗಿ ಅವರು ಹೆಮ್ಮೆಯಿಂದ ಸೇನಾಪಡೆಗೆ ಪಾದಾರ್ಪಣೆ ಮಾಡುತ್ತಿದ್ದಾರೆ.

ಹರಿಯಾಣದ ಚಂಡಿಮಂದಿರದ ಕೇಂದ್ರೀಯ ವಿದ್ಯಾಲಯದಲ್ಲಿ ತಮ್ಮ ಶಾಲಾ ಶಿಕ್ಷಣವನ್ನ ಪೂರ್ಣಗೊಳಿಸಿದ ಶಾರದೇಂದು, ಆರಂಭದಿಂದಲೂ ಓದಿನಲ್ಲಿ ಮುಂದಿದ್ದರು. ನಂತರ ಚಂಡೀಗಢದ ಪ್ರತಿಷ್ಠಿತ ಪಂಜಾಬ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮಾಹಿತಿ ತಂತ್ರಜ್ಞಾನ ವಿಭಾಗದಲ್ಲಿ ಎಂಜಿನಿಯರಿಂಗ್ ಪದವಿ ಹಾಗೂ ಕಂಪ್ಯೂಟರ್ ಸೈನ್ಸ್ ಮತ್ತು ಇನ್ಫಾರ್ಮೇಷನ್ ಸೆಕ್ಯುರಿಟಿಯಲ್ಲಿ ಎಂಟೆಕ್ (MTech) ಪದವಿಯನ್ನು ಪೂರ್ಣಗೊಳಿಸಿದ್ದಾರೆ.

ಉನ್ನತ ವ್ಯಾಸಂಗದ ನಂತರ ಕ್ಯಾಂಪಸ್ ಪ್ಲೇಸ್‌ಮೆಂಟ್ ಮೂಲಕ ಅಮೆಜಾನ್‌ನಲ್ಲಿ ಅತ್ಯುತ್ತಮ ಹುದ್ದೆ ಲಭಿಸಿದರೂ, ಸೇನೆಗೆ ಸೇರುವ ಗುರಿಯನ್ನ ಅವರು ಮರೆಯಲಿಲ್ಲ. ಇದಕ್ಕಾಗಿ ಸತತವಾಗಿ 8 ಬಾರಿ ಆರ್ಮಿ ಸೆಲೆಕ್ಷನ್‌ಗೆ ಹಾಜರಾಗಿ ವಿಫಲರಾದರೂ ಎದೆಗುಂದದೆ, ಅಂತಿಮವಾಗಿ ಯಶಸ್ಸು ಸಾಧಿಸಿದ್ದಾರೆ.

ತಾಂತ್ರಿಕ ಪ್ರವೇಶ ಮಾರ್ಗದ ಮೂಲಕ ಸೇನೆಗೆ ಸೇರ್ಪಡೆಗೊಂಡಿರುವುದರಿಂದ, ಅವರು ತಮ್ಮ ಇಂಜಿನಿಯರಿಂಗ್ ತಂತ್ರಜ್ಞಾನದ ಕೌಶಲ್ಯದೊಂದಿಗೆ ಸೇನೆಯಲ್ಲಿ ಸೇವೆ ಸಲ್ಲಿಸಲಿದ್ದಾರೆ.

ಒಟಿಎ ಗಯಾದಲ್ಲಿ ಶ್ರೇಷ್ಠ ಸಾಧನೆ

ತಮ್ಮ ಈ ನಿರ್ಧಾರದ ಬಗ್ಗೆ ಮಾತನಾಡಿರುವ ಶಾರದೇಂದು, "ಸಾಹಸಮಯ ಬದುಕು ಮತ್ತು ಫೀಲ್ಡ್ ಸರ್ವೀಸ್ ಅವಕಾಶಗಳೇ ನನ್ನನ್ನು ಸಶಸ್ತ್ರ ಪಡೆಗಳತ್ತ ಹೆಚ್ಚು ಆಕರ್ಷಿಸಿದವು" ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ ಎಂದು ಟೈಮ್ಸ್‌ ಆಫ್‌ ಇಂಡಿಯಾ ವರದಿ ಮಾಡಿದೆ. ಗಯಾದ ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿಯಲ್ಲಿ ಕಠಿಣ ತರಬೇತಿಯ ಸಮಯದಲ್ಲಿ, ಅವರ ಅತ್ಯುತ್ತಮ ನಾಯಕತ್ವ ಗುಣಗಳನ್ನು ಗುರುತಿಸಿ ಅಕಾಡೆಮಿಯ ಉನ್ನತ ಕ್ಯಾಡೆಟ್ ಹುದ್ದೆಗಳಲ್ಲಿ ಒಂದಾದ 'ಸೀನಿಯರ್ ಅಂಡರ್ ಆಫೀಸರ್' ಆಗಿ ಅವರನ್ನು ನೇಮಿಸಲಾಗಿತ್ತು. ಬಿಡುವಿನ ವೇಳೆಯಲ್ಲಿ ಬಾಸ್ಕೆಟ್‌ಬಾಲ್ ಮತ್ತು ಟೇಬಲ್ ಟೆನ್ನಿಸ್ ಆಡುವುದನ್ನು ಇಷ್ಟಪಡುವ ಇವರು, ಟ್ರೆಕ್ಕಿಂಗ್‌ನಲ್ಲೂ ಆಸಕ್ತಿ ಹೊಂದಿದ್ದಾರೆ.

ತಾಂತ್ರಿಕ ಸೇರ್ಪಡೆಯ ಮಹತ್ವ

ಗಯಾದಲ್ಲಿರುವ ಒಟಿಎ ತಾಂತ್ರಿಕ ಪದವೀಧರರನ್ನ ಸೇನೆಯ ಅಧಿಕಾರಿಗಳಾಗಿ ಸಿದ್ಧಪಡಿಸುವ ಪ್ರಮುಖ ತರಬೇತಿ ಕೇಂದ್ರವಾಗಿದೆ. ಹೊಸ ಯುಗದ ಯುದ್ಧತಂತ್ರಗಳಾದ ಕೃತಕ ಬುದ್ಧಿಮತ್ತೆ , ಡ್ರೋನ್ಸ್, ಸೈಬರ್ ವ್ಯವಸ್ಥೆಗಳು ಮತ್ತು ರೊಬೊಟಿಕ್ಸ್‌ನಂತಹ ಅತ್ಯಾಧುನಿಕ ತಂತ್ರಜ್ಞಾನಗಳ ಬಳಕೆ ಕುರಿತು ಇಲ್ಲಿನ ಕ್ಯಾಡೆಟ್‌ಗಳಿಗೆ ಕಠಿಣ ತರಬೇತಿ ನೀಡಲಾಗುತ್ತದೆ.

ಇಂದು ನಡೆಯುವ 29ನೇ ಪಾಸಿಂಗ್-ಔಟ್ ಪರೇಡ್ ಶಾರದೇಂದು ಅವರ ಸುದೀರ್ಘ ಪರಿಶ್ರಮದ ಫಲಿತಾಂಶವಾಗಿದೆ. ತರಬೇತಿ ಪೂರ್ಣಗೊಳಿಸಿದ ಬಳಿಕ ಅವರು ಲೆಫ್ಟಿನೆಂಟ್ ಶ್ರೇಣಿಯನ್ನ ಪಡೆಯಲಿದ್ದು, ದೇಶದ ವಿವಿಧ ಘಟಕಗಳಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ. ಲಕ್ಷಾಂತರ ರೂಪಾಯಿಗಳ ವೇತನದ ಆಮಿಷಕ್ಕೆ ಒಳಗಾಗದೆ, ದೇಶಸೇವೆಯೆಂಬ ಉದಾತ್ತ ಧ್ಯೇಯದೊಂದಿಗೆ ಸೇನೆಗೆ ಸೇರಿದ ಈ ಯುವಕನ ಸಾಧನೆ ಎಷ್ಟೋ ಯುವಜನತೆಗೆ ದೊಡ್ಡ ಸ್ಫೂರ್ತಿಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+