Maharashtra Election 2024: ಮಹಾರಾಷ್ಟ್ರ ಚುನಾವಣೆ ಮತದಾನ, ಅಂಕಿ-ಅಂಶಗಳು
ಮುಂಬೈ, ನವೆಂಬರ್ 19: ಮಹಾರಾಷ್ಟ್ರ ರಾಜ್ಯದ 288 ಸದಸ್ಯ ಬಲದ ವಿಧಾನಸಭೆಗೆ ನವೆಂಬರ್ 20ರ ಬುಧವಾರ ಒಂದೇ ಹಂತದಲ್ಲಿ ಮತದಾನ ನಡೆಯುತ್ತಿದೆ. ಮತದಾನಕ್ಕಾಗಿ ನಿಯೋಜನೆಗೊಂಡ ಅಧಿಕಾರಿ/ ಸಿಬ್ಬಂದಿಗಳು ಮಸ್ಟರಿಂಗ್ ಕಾರ್ಯ ಪೂರ್ಣಗೊಳಿಸಿ ಮತಗಟ್ಟೆಗಳತ್ತ ಹೊರಟಿದ್ದಾರೆ. ಬುಧವಾರ ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯ ತನಕ ಮತದಾನ ಮಾಡಲು ಅವಕಾಶವಿದೆ. ಚುನಾವಣಾ ಫಲಿತಾಂಶ ನವೆಂಬರ್ 23ರ ಶನಿವಾರ ಪ್ರಕಟವಾಗಲಿದೆ.
ರಾಜ್ಯದ 288 ಕ್ಷೇತ್ರಗಳ ಮತದಾನಕ್ಕೆ ಚುನಾವಣಾ ಆಯೋಗ 1,00,186 ಮತಗಟ್ಟೆಗಳನ್ನು ಸ್ಥಾಪನೆ ಮಾಡಿದೆ. ಇವುಗಳಲ್ಲಿ ಗ್ರಾಮೀಣ ಪ್ರದೇಶದಲ್ಲಿ 57,582 ಮತ್ತು ನಗರ ಪ್ರದೇಶದಲ್ಲಿ 42,604 ಮತಗಟ್ಟೆಗಳಿವೆ. ಒಟ್ಟು ಮಾದರಿ ಮತಗಟ್ಟೆಗಳು 633.

ಬುಧವಾರ ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಲಿದೆ. ಮಹಿಳಾ ಸಿಬ್ಬಂದಿಗಳು 406 ಮತಗಟ್ಟೆಗಳನ್ನು ನಿರ್ವಹಣೆ ಮಾಡಲಿದ್ದಾರೆ. ವಿಕಲಚೇತನರು 274 ಮತಗಟ್ಟೆಗಳನ್ನು ನಿರ್ವಹಣೆ ಮಾಡಲಿದ್ದಾರೆ. 67,557 ಮತಗಟ್ಟೆಗಳ ವೆಬ್ ಕಾಸ್ಟಿಂಗ್‌ಗೆ ಮಾಡಲಾಗುತ್ತದೆ ಎಂದು ಆಯೋಗ ಹೇಳಿದೆ.
ಒಟ್ಟು 9.70 ಕೋಟಿ ಮತದಾರರು ಮಹಾರಾಷ್ಟ್ರ ವಿಧಾನಸಭೆ ಚುನಾವಣೆ 2024ರಲ್ಲಿ ಮತದಾನ ಮಾಡುವ ಹಕ್ಕು ಹೊಂದಿದ್ದಾರೆ. ಇವರಲ್ಲಿ ಪುರುಷ ಮತದಾರರು 5 ಕೋಟಿ, ಮಹಿಳಾ ಮತದಾರರು 4.69 ಕೋಟಿ, ಲಿಂಗತ್ವ ಅಲ್ಪ ಸಂಖ್ಯಾತರು 6101. 18-19 ವರ್ಷದ 22.2 ಲಕ್ಷ ಮತದಾರರು ಮೊದಲ ಬಾರಿಗೆ ಮತದಾನ ಮಾಡುತ್ತಿದ್ದಾರೆ. ಅಂಗವಿಕಲ ಮತದಾರರು 6.41 ಲಕ್ಷ, 100 ವರ್ಷ ಮೀರಿದ 47,392 ಮತದಾರರು ಇದ್ದಾರೆ.
ಅಭ್ಯರ್ಥಿಗಳ ವಿವರ: ಮಹಾರಾಷ್ಟ್ರ ವಿಧಾನಸಭೆ ಚುನಾವಣಾ ಕಣದಲ್ಲಿ 4,136 ಅಭ್ಯರ್ಥಿಗಳಿದ್ದಾರೆ. ಇವರಲ್ಲಿ 3771 ಪುರುಷ ಅಭ್ಯರ್ಥಿಗಳು, ಮಹಿಳಾ ಅಭ್ಯರ್ಥಿಗಳು 363, ಇತರ ಅಭ್ಯರ್ಥಿಗಳು 2. 2019ರ ಚುನಾವಣೆಗೆ ಹೋಲಿಕೆ ಮಾಡಿದರೆ ಈ ಬಾರಿ ಅಭ್ಯರ್ಥಿಗಳ ಸಂಖ್ಯೆ ಶೇ 27.7ರಷ್ಟು ಹೆಚ್ಚಾಗಿದೆ.
ಚುನಾವಣೆಯಲ್ಲಿ ಬಿಜೆಪಿ, ಶಿವಸೇನೆ (ಏಕನಾಥ್ ಶಿಂಧೆ ಬಣ), ಎನ್‌ಸಿಪಿ (ಅಜಿತ್ ಪವಾರ್ ಬಣ) ಸೇರಿರುವ 'ಮಹಾಯುತಿ' ಮೈತ್ರಿಕೂಟ ಮತ್ತು ಕಾಂಗ್ರೆಸ್, ಶಿವಸೇನೆ (ಉದ್ಧವ್ ಠಾಕ್ರೆ ಬಣ), ಎನ್‌ಸಿಪಿ (ಶರದ್ ಪವಾರ್) ನೇತೃತ್ವದ ಪಕ್ಷಗಳ ಮಹಾವಿಕಾಸ್ ಅಘಾಡಿ (ಎಂವಿಎ) ಮೈತ್ರಿಕೂಟದ ನಡುವೆ ಪೈಪೋಟಿ ಇದೆ.
ಚುನಾವಣೆಗೆ ಮಹಾಯತಿ ಮೈತ್ರಿಕೂಟದಲ್ಲಿ ಬಿಜೆಪಿ 149, ಶಿವಸೇನೆ (ಏಕನಾಥ್ ಶಿಂಧೆ ಬಣ) 81,, ಎನ್‌ಸಿಪಿ (ಅಜಿತ್ ಪವಾರ್ ಬಣ) 59 ಕ್ಷೇತ್ರದಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಈ ಮೈತ್ರಿಕೂಟದಲ್ಲಿ ಬಿಜೆಪಿ ಅಭ್ಯರ್ಥಿಗಳು ಅತಿ ಹೆಚ್ಚು ಕ್ಷೇತ್ರದಲ್ಲಿ ಕಣದಲ್ಲಿದ್ದಾರೆ. ಹಾಲಿ ಶಿವಸೇನೆಯ ಏಕನಾಥ್ ಶಿಂಧೆ ರಾಜ್ಯದ ಮುಖ್ಯಮಂತ್ರಿ.
ಎಂವಿಎ ಮೈತ್ರಿಕೂಟದಲ್ಲಿ ಕಾಂಗ್ರೆಸ್ 101, ಶಿವಸೇನೆ (ಉದ್ಧವ್ ಠಾಕ್ರೆ ಬಣ) 95, ಎನ್‌ಸಿಪಿ (ಶರದ್ ಪವಾರ್) 86 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಸೀಟುಗಳನ್ನು ಈ ಮೈತ್ರಿಕೂಟದಲ್ಲಿ ನೀಡಲಾಗಿದೆ.
ಉಳಿದಂತೆ ಬಿಎಸ್‌ಪಿಯ 237, ಎಐಎಂಐಎಂ 17 ಸೀಟುಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ಚುನಾವಣಾ ಕಣದಲ್ಲಿ 2086 ಪಕ್ಷೇತರ ಅಭ್ಯರ್ಥಿಗಳಿದ್ದಾರೆ. ರಾಜ್ಯದಲ್ಲಿ ಸರ್ಕಾರ ರಚನೆ ಮಾಡಲು ಬೇಕಾದ ಮ್ಯಾಜಿಕ್ ನಂಬರ್ 146. ಮಹಾರಾಷ್ಟ್ರ ಚುನಾವಣೆ ಬಹಿರಂಗ ಪ್ರಚಾರಕ್ಕೆ ಸೋಮವಾರ ಸಂಜೆ ತೆರೆ ಬಿದ್ದಿದೆ. ಚುನಾವಣಾ ಸಿಬ್ಬಂದಿಗಳು ಪೊಲೀಸರ ಜೊತೆ ಮತಗಟ್ಟೆಗೆ ತೆರಳುತ್ತಿದ್ದಾರೆ.












Click it and Unblock the Notifications