ಉಕ್ರೇನ್‌ನಲ್ಲಿರುವ ಭಾರತೀಯರ ನೆರವಿಗಾಗಿ 3 ಏರ್ ಇಂಡಿಯಾ ವಿಮಾನಗಳ ಹಾರಾಟ
ನವದೆಹಲಿ, ಫೆಬ್ರವರಿ 19: ಉಕ್ರೇನ್‌ನಲ್ಲಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ. ಭಾರತೀಯರ ನೆರವಿಗಾಗಿ ಮೂರು ಏರ್ ಇಂಡಿಯಾ ವಿಮಾನಗಳನ್ನು ಕಳುಹಿಸಲಾಗಿದೆ.
ರಷ್ಯಾ ಉಕ್ರೇನ್ ಗಡಿಯಲ್ಲಿ ಅಪಾರ ಪ್ರಮಾಣದಲ್ಲಿ ಸೇನೆಯನ್ನು ನಿಯೋಜಿಸಲಾಗುತ್ತಿದೆ ಎಂದು ರಷ್ಯಾ ಮತ್ತು ನ್ಯಾಟೋ ಪರಸ್ಪರ ಆರೋಪಿಸಿಕೊಳ್ಳುವುದರೊಂದಿಗೆ ಇತ್ತೀಚಿನ ತಿಂಗಳುಗಳಲ್ಲಿ ಉಕ್ರೇನ್ ನಲ್ಲಿ ಪರಿಸ್ಥಿತಿ ಬಿಗಡಾಯಿಸಿದೆ.
ರಷ್ಯಾ ಆಕ್ರಮಣ ಮಾಡಲು ಯೋಜಿಸುತ್ತಿದೆ ಎಂದು ಯುನೈಟೆಡ್ ಸ್ಟೇಟ್ಸ್ ಮತ್ತು ಉಕ್ರೇನ್ ಆರೋಪಿಸಿದೆ. ಆದರೆ ಮಾಸ್ಕೋ ಅಂತಹ ಹೇಳಿಕೆಗಳನ್ನು ನಿರಾಕರಿಸುವುದನ್ನು ಮುಂದುವರೆಸಿದೆ ಮತ್ತು ಯಾವುದೇ ದೇಶದ ಮೇಲೆ ದಾಳಿ ಮಾಡುವ ಉದ್ದೇಶವಿಲ್ಲ ಎಂದು ಹೇಳುತ್ತಿದೆ.

ಮುಂದಿನ ವಾರ ಫೆಬ್ರವರಿ 22, 24 ಮತ್ತು 26 ರಂದು ಭಾರತ- ಉಕ್ರೇನ್ ನಡುವೆ ಏರ್ ಇಂಡಿಯಾದ ಮೂರು ವಿಮಾನಗಳು ಹಾರಾಟ ನಡೆಸಲಿವೆ.
ಬೋರಿಸ್ಪಿಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿಮಾನಗಳು ಟೇಕ್ ಆಫ್ ಆಗಲಿದ್ದು, ಏರ್ ಇಂಡಿಯಾ ಬುಕಿಂಗ್ ಕಚೇರಿಗಳು, ವೆಬ್‌ಸೈಟ್, ಕಾಲ್ ಸೆಂಟರ್ ಮತ್ತು ಅಧಿಕೃತ ಟ್ರಾವೆಲ್ ಏಜೆಂಟ್‌ಗಳ ಮೂಲಕ ಬುಕಿಂಗ್ ಆರಂಭವಾಗಿದೆ ಎಂದು ಏರ್ ಇಂಡಿಯಾ ಶುಕ್ರವಾರ ಟ್ವೀಟರ್ ನಲ್ಲಿ ಮಾಹಿತಿ ನೀಡಿದೆ.
ಇದಕ್ಕೂ ಮೊದಲು, ಉಳಿಯಲು ಅನಿವಾರ್ಯವಲ್ಲದ ನಾಗರಿಕರು, ವಿಶೇಷವಾಗಿ ವಿದ್ಯಾರ್ಥಿಗಳಿಗೆ ತಾತ್ಕಾಲಿಕವಾಗಿ ಕೈವ್‌ನಿಂದ ಹೊರಹೋಗುವಂತೆ ಉಕ್ರೇನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಕೇಳಿಕೊಂಡಿತು. ತಮ್ಮ ಉಪಸ್ಥಿತಿ ಕುರಿತು ಮಾಹಿತಿ ನೀಡಿದರೆ ರಾಯಭಾರಿ ಸಿಬ್ಬಂದಿ ಅಲ್ಲಿಗೆ ತೆರಳಲು ಸಾಧ್ಯವಾಗಲಿದ್ದು, ಮಾಹಿತಿ ನೀಡುವಂತೆ ಮಂಗಳವಾರ ಸಲಹೆ ನೀಡಿತ್ತು.
ಉತ್ತರಕ್ಕೆ ಬೆಲಾರಸ್ ಮತ್ತು ದಕ್ಷಿಣಕ್ಕೆ ಕ್ರೈಮಿಯಾದಲ್ಲಿ ಪೂರ್ವದಲ್ಲಿ ಡೊನ್ಬಾಸ್ ಪ್ರದೇಶದಿಂದ ಗಡಿಯುದ್ದಕ್ಕೂ ಸುಮಾರು 150,000 ಸೈನಿಕರನ್ನು ರಷ್ಯಾ ಇತ್ತೀಚೆಗೆ ನಿಯೋಜಿಸಿದ್ದು, ಉದ್ವಿಗ್ನತೆಯನ್ನು ಹೆಚ್ಚಿಸಿದೆ.
ಉಕ್ರೇನಿಯನ್ ಸರ್ಕಾರದ ನಿಯಂತ್ರಿತ ಪ್ರದೇಶದಲ್ಲಿನ ಸ್ಟಾನಿಟ್ಸಿಯಾ ಲುಹಾನ್ಸ್ಕಾದ ಡಾನ್ ಬಾಸ್ ನಲ್ಲಿ ಗುರುವಾರ ರಷ್ಯಾ ನಡೆಸಿದ ಶೆಲ್ ದಾಳಿ ಶಿಶು ವಿಹಾರಕ್ಕೆ ಅಪ್ಪಳಿಸಿದ್ದು, ಇಬ್ಬರು ಶಿಕ್ಷಕರು ಗಾಯಗೊಂಡಿರುವುದಾಗಿ ಕೀವ್‌ನಲ್ಲಿರುವ ಯುಎಸ್ ರಾಯಭಾರ ಕಚೇರಿಯು ತಿಳಿಸಿದೆ.
ರಷ್ಯಾ ಮತ್ತು ಉಕ್ರೇನ್ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯನ್ನು ಕಡಿಮೆ ಮಾಡುವಲ್ಲಿ ಭಾರತ ಸೇರಿದಂತೆ ಯಾವುದೇ ದೇಶವು ಪಾತ್ರ ವಹಿಸುವ ಪ್ರಯತ್ನವನ್ನು ಯುಎಸ್ ಸ್ವಾಗತಿಸುತ್ತದೆ ಎಂದು ಶ್ವೇತಭವನದ ವಕ್ತಾರರು ಈ ಹಿಂದೆ ಹೇಳಿದ್ದರು.
ಉಕ್ರೇನ್ ಗಡಿಯಲ್ಲಿ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದ್ದು, ರಷ್ಯಾದ 1.49 ಲಕ್ಷ ಸೈನಿಕರು ಜಮಾವಣೆಯಾಗಿದ್ದಾರೆ. ಗಡಿಯಲ್ಲಿ 1.29 ಲಕ್ಷ ರಷ್ಯನ್ ತುಕಡಿಗಳ ವಿಭಾಗಗಳು ಇರುವುದನ್ನು ನಾವು ನೋಡುತ್ತಿದ್ದೇವೆ, ಆದರೆ ನೌಕಾಪಡೆ ಮತ್ತು ವಾಯುಪಡೆಯೊಂದಿಗೆ ಸುಮಾರು 1.49 ಲಕ್ಷ ಇರಬಹುದು ಎಂದು ಹೇಳಲಾಗಿದೆ.
2014ರಲ್ಲಿ ಉಕ್ರೇನ್‌ನ ಕ್ರಿಮಿಯಾ ಪ್ರಾಂತ್ಯವನ್ನು ರಷ್ಯಾ ವಶಕ್ಕೆ ತೆಗೆದುಕೊಂಡಿತ್ತು. ಅದಾದ ನಂತರ ಎರಡೂ ದೇಶಗಳ ಸಂಬಂಧ ಹಳಸಿಹೋಗಿತ್ತು. ಈ ನಡುವೆ ಅಮೆರಿಕ- ಬ್ರಿಟನ್ ನೇತೃತ್ವದ ನ್ಯಾಟೋ ಪಡೆ ಸೇರಲು ಉಕ್ರೇನ್ ಮುಂದಾಗಿತ್ತು.
ಉಕ್ರೇನ್ ಬಳಸಿಕೊಂಡು ತನ್ನ ಗಡಿಯಲ್ಲಿ ಅಮೆರಿಕ ಸೇನಾ ನೆಲೆ ತೆರೆಯಲು ಯತ್ನಿಸುತ್ತಿದೆ ಎಂದು ನಂಬಿದ ರಷ್ಯಾ, ನ್ಯಾಟೋಗೆ ಉಕ್ರೇನ್ ಸೇರದಂತೆ ಬೆದರಿಸಲು ಆ ದೇಶದ ಗಡಿಗೆ ಯೋಧರನ್ನು ಜಮಾವಣೆ ಮಾಡಿತ್ತು. ವಿವಿಧ ದೇಶಗಳ ಮಧ್ಯಪ್ರವೇಶದೊಂದಿಗೆ ಇದು ವಿಕೋಪಕ್ಕೆ ಹೋಗಿತ್ತು.
ರಷ್ಯನ್ ಸೈನಿಕರು ಉಕ್ರೇನ್ ಗಡಿ ಬಿಟ್ಟು ಮರಳುತ್ತಿರುವ ದೃಶ್ಯಗಳನ್ನು ರಷ್ಯಾದ ಅಧಿಕೃತ ಮಾಧ್ಯಮ ಬಿತ್ತರಿಸಿದ್ದು, ಯುದ್ಧ ಟ್ಯಾಂಕ್, ಕ್ಷಿಪಣಿ ವಾಹನಗಳು ಕೂಡ ಮರಳತ್ತಿರುವ ದೃಶ್ಯಗಳನ್ನು ಪ್ರಸಾರ ಮಾಡಲಾಗಿದೆ. ಉಕ್ರೇನ್ ಗಡಿಯಲ್ಲಿ ನಿಯೋಜಿಸಲಾಗಿದ್ದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಕೂಡ ರಷ್ಯಾ ಎರಡನೇ ಬಾರಿಗೆ ಹಿಂಪಡೆದಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.












Click it and Unblock the Notifications