ತಂತ್ರಾಂಶದಲ್ಲಿ ದೋಷ, ಏರ್ ಇಂಡಿಯಾ ವಿಮಾನ ವಿಳಂಬ
ನವದೆಹಲಿ, ಏಪ್ರಿಲ್ 28: ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾದ ವಿಮಾನಯಾನ ವ್ಯವಸ್ಥೆಯಲ್ಲಿ ಶನಿವಾರದಂದು ಐದು ಗಂಟೆಗಳಿಗೂ ಅಧಿಕ ಕಾಲ ವಿಳಂಬವಾಗಿತ್ತು. ಚೆಕ್ ಇನ್ ತಂತ್ರಾಂಶದ ದೋಷದಿಂದಾಗಿ ಅವ್ಯವಸ್ಥೆ ಉಂಟಾಗಿತ್ತು. ಇದರ ಪರಿಣಾಮ ಭಾನುವಾರದಂದು ಮುಂದುವರೆದಿದೆ.
ಇಂದು 137 ವಿಮಾನಗಳ ಹಾರಾಟ ತಡವಾಗಲಿದೆ.ಈ ವಿಮಾನಗಳು 197 ನಿಮಿಷ ತಡವಾಗಿ ಹಾರಾಟ ನಡೆಸಲಿವೆ ಎಂದು ಏರ್ಲೈನ್ಸ್ ಸಂಸ್ಥೆಯ ವಕ್ತಾರ ತಿಳಿಸಿದ್ದಾರೆ.
ಶನಿವಾರದಂದು ಎಲ್ಲೆಡೆ ಪ್ರಯಾಣಿಕರು ವಿಮಾನ ನಿಲ್ದಾಣದಲ್ಲಿ ಪರದಾಡುವಂತಾಗಿತ್ತು. ಪ್ರಯಾಣಿಕರ ಸರಕು ಮತ್ತು ರಿಸರ್ವೇಷನ್ ಅನ್ನು ತಪಾಸಣೆ ಮಾಡುವ ಪ್ಯಾಸೆಂಜರ್ ಸರ್ವಿಸ್ ಸಿಸ್ಟಂ (ಪಿಎಸ್ಎಸ್) ಸಾಫ್ಟ್ವೇರ್ನಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದ್ದು ಇದಕ್ಕೆಲ್ಲ ಕಾರಣವಾಗಿತ್ತು.

ಶನಿವಾರದಂದು ಪಿಎಸ್ಎಸ್ ಬೆಳಗ್ಗೆ 3.30 ರಿಂದ 8.30 ರ ಅವಧಿಯಲ್ಲಿ ಕಾರ್ಯ ನಿರ್ವಹಿಸದ ಕಾರಣ, ಸುಮಾರು 149 ವಿಮಾನಗಳು ನಿಗದಿತ ಸಮಯದಲ್ಲಿ ಹಾರಾಟ ನಡೆಸಲು ಸಾಧ್ಯವಾಗಿರಲಿಲ್ಲ.
ದೆಹಲಿ-ಮುಂಬೈ ಸೆಕ್ಟರ್ ಇನ್ನೊಂದು ಕಡೆ ಮುಂಬೈ-ಬೆಂಗಳೂರು ಸೆಕ್ಟರ್, ಬೆಂಗಳೂರು -ಚೆನ್ನೈ ಸೆಕ್ಟರ್ ಹೀಗೆ ಒಂದು ಸೆಕ್ಟರ್ ನಲ್ಲಿ ವಿಮಾನ ವಿಳಂಬವಾದೆ, ಉಳಿದ ಸೆಕ್ಟರ್ ಗಳಿಗೂ ತೊಂದರೆಯಾಗಲಿದೆ. ಏರ್ ಇಂಡಿಯಾ, ಅಲೈಯನ್ಸ್ ಏರ್, ಏರ್ ಇಂಡಿಯಾ ಎಕ್ಸ್ ಪ್ರೆಸ್ ಪ್ರತಿ ದಿನದ ಸರಾಸರಿ ವಿಮಾನಯಾನ ಸಂಖ್ಯೆ 674 ದಾಟುತ್ತದೆ.(ಪಿಟಿಐ)












Click it and Unblock the Notifications