Jammu and Kashmir: ಭಾರತ - ಪಾಕ್ ಗಡಿಯಲ್ಲಿ ಭಾರತೀಯ ವಾಯುಪಡೆ ಸಮರಾಭ್ಯಾಸ
ಮೇ 7 ಮತ್ತು 8 ರಂದು ಭಾರತ - ಪಾಕಿಸ್ತಾನ ಗಡಿಯ ದಕ್ಷಿಣ ಭಾಗದಲ್ಲಿ ವಾಯುಪಡೆ ಸಮರಾಭ್ಯಾಸ ನಡೆಸಲು ಸಜ್ಜಾಗಿದೆ. ನಿಗದಿಯಾಗಿರುವ ವಾಯು ಪಡೆ ಸಮರಾಭ್ಯಾಸಕ್ಕೆ ಸರ್ಕಾರವು ವಾಯುಪಡೆಗೆ ನೋಟಿಸ್ ಕೊಟ್ಟಿದೆ ಎಂದು ಜಿಯೋ-ಗುಪ್ತಚರ ತಜ್ಞ ಡೇಮಿಯನ್ ಸೈಮನ್ ಮಂಗಳವಾರ ತಿಳಿಸಿದ್ದಾರೆ.
ರಫೇಲ್, ಮಿರಾಜ್ 2000 ಮತ್ತು ಸುಖೋಯ್ -30 ಸೇರಿದಂತೆ ಎಲ್ಲಾ ಮುಂಚೂಣಿಯ ವಿಮಾನಗಳು ಈ ಸಮರಾಭ್ಯಾಸದಲ್ಲಿ ಭಾಗವಹಿಸಲಿವೆ. ವಾಯುಪಡೆಯ ಸಮರಾಭ್ಯಾಸವನ್ನು ಉನ್ನತ ಅಧಿಕಾರಿಗಳು ಮೇಲ್ವಿಚಾರಣೆ ಮಾಡಲಿದ್ದಾರೆ.

ಈ ಅವಧಿಯಲ್ಲಿ ಈ ಪ್ರದೇಶದಲ್ಲಿ ಸಾರ್ವಜನಿಕ ವಿಮಾನಗಳು ವಾಯುಪ್ರದೇಶವನ್ನು ಬಳಸುವುದಕ್ಕೆ ನಿಷೇಧ ಹೇರಲಾಗಿದೆ. ಇದು ಭಾರತೀಯ ವಾಯುಪಡೆಯನ್ನು ಒಳಗೊಂಡ ದೊಡ್ಡ ಪ್ರಮಾಣದ ಮಿಲಿಟರಿ ಸಮರಾಭ್ಯಾಸಕ್ಕೆ ಸಿದ್ಧತೆಗಳನ್ನು ಸೂಚಿಸುತ್ತಿದೆ. ಏಪ್ರಿಲ್ 26ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಪ್ರವಾಸಿಗರನ್ನು ಹತ್ಯೆ ಮಾಡಿದ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ಹೆಚ್ಚುತ್ತಿರುವ ನಡುವೆ ಭಾರತದ ಈ ಕ್ರಮ ಬಂದಿದೆ.
ಏಪ್ರಿಲ್ 25 ರಂದು ಭಾರತವು ತನ್ನ ಮುಂಚೂಣಿಯ ಫೈಟರ್ ಜೆಟ್‌ಗಳು ಮತ್ತು ಪ್ರಮುಖ ಪೈಲಟ್‌ಗಳನ್ನು ಒಳಗೊಂಡ ದೊಡ್ಡ ಪ್ರಮಾಣದ ಮಿಲಿಟರಿ ವ್ಯಾಯಾಮವನ್ನು ನಡೆಸಿತು. ನೌಕಾಪಡೆಯು ಈಗಾಗಲೇ ಯಾವುದೇ ಸಂದರ್ಭದಲ್ಲೂ ಯಾವುದೇ ಪರಿಸ್ಥಿತಿಯನ್ನು ಎದುರಿಸಲೂ ಸಿದ್ಧ ಎಂದು ಹೇಳಿದೆ. ಭಾರತೀಯ ವಾಯುಪಡೆಯು ತನ್ನ ಸುಧಾರಿತ ರಫೇಲ್ ಜೆಟ್‌ಗಳು ಮತ್ತು ಉನ್ನತ ಶ್ರೇಣಿಯ ಪೈಲಟ್‌ಗಳನ್ನು ವ್ಯಾಯಾಮಕ್ಕಾಗಿ ನಿಯೋಜಿಸಿದೆ.
ಇದನ್ನು ಆಕ್ರಮನ್ (ದಾಳಿ) ಎಂದು ಹೆಸರಿಸಲಾಗಿದೆ. ಪೈಲಟ್‌ಗಳು Su-30MKI ಸ್ಕ್ವಾಡ್ರನ್‌ಗಳ ಸಕ್ರಿಯ ಭಾಗವಹಿಸುವಿಕೆ ಜೊತೆ ಸಮರಾಭ್ಯಾಸ ನಡೆಸಿವೆ. ಈ ಸಮರಾಭ್ಯಾಸವು ಹಿರಿಯ ಐಎಎಫ್ ನಾಯಕತ್ವದ ನಿಕಟ ಮೇಲ್ವಿಚಾರಣೆಯಲ್ಲಿ ಕಾರ್ಯಾಚರಣೆ ನಡೆಸಿದ್ದು, ದೂರದ ಗುರಿಗಳ ಮೇಲೆ ದಾಳಿ ಮಾಡುವ ಅಭ್ಯಾಸ ಕೂಡ ನಡೆಸಿವೆ.
1971 ರ ಪಾಕಿಸ್ತಾನದೊಂದಿಗಿನ ಯುದ್ಧದ ನಂತರ ಸರ್ಕಾರವು ಮೊದಲ ಬಾರಿಗೆ ರಾಷ್ಟ್ರವ್ಯಾಪಿ ನಾಗರಿಕ ರಕ್ಷಣಾ ಕವಾಯತುಗಳನ್ನು ನಡೆಸಲು ಸಿದ್ಧತೆ ನಡೆಸುತ್ತಿದೆ. ಸಂಭಾವ್ಯ ಸಂಘರ್ಷದ ಸನ್ನಿವೇಶಗಳಿಗೆ ನಾಗರಿಕರನ್ನು ಸಜ್ಜುಗೊಳಿಸುವ ಗುರಿಯನ್ನು ಹೊಂದಿರುವ ಈ ದೊಡ್ಡ ಪ್ರಮಾಣದ ವ್ಯಾಯಾಮವು 33 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 259 ತಾಣಗಳಲ್ಲಿ ನಡೆಯಲಿದೆ.
ಈಗಾಗಲೇ ಭಾರತ ಪಾಕಿಸ್ತಾನದ ವಿರುದ್ಧ ಹಲವು ಕಠಿಣ ಕ್ರಮಗಳನ್ನು ತೆಗೆದುಕೊಂಡಿದೆ. ಪಾಕಿಸ್ತಾನಿಯರ ವೀಸಾವನ್ನು ರದ್ದುಗೊಳಿಸಿದ್ದು ಈಗಾಗಲೇ ವಾಪಸ್ ಕಳಿಸಿದೆ. ಪಾಕಿಸ್ತಾನದ ವಿಮಾನಗಳಿಗೆ ಭಾರತದ ವಾಯುಯಾನ ಪ್ರದೇಶವನ್ನು ಮುಚ್ಚಿದ್ದು ಎಲ್ಲಾ ರೀತಿಯ ವ್ಯಾಪಾರಗಳನ್ನು ಸ್ಥಗಿತಗೊಳಿಸಿದೆ.












Click it and Unblock the Notifications