ಭಾರತದಲ್ಲಿ ದೇಶೀಯ ವಿಮಾನ ಪ್ರಯಾಣ ದುಬಾರಿ: ಇಲ್ಲಿದೆ ದರಗಳ ಪಟ್ಟಿ
ನವದೆಹಲಿ, ಆಗಸ್ಟ್ 13: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ನಡುವೆ ದೇಶೀಯ ವಿಮಾನಗಳ ಸಂಚಾರದ ದರ ಮತ್ತಷ್ಟು ದುಬಾರಿಯಾಗಿದೆ. ಕೆಳದರ್ಜೆ ಮತ್ತು ಮೇಲ್ದರ್ಜೆ ವಿಮಾನಗಳ ಪ್ರಯಾಣ ದರವನ್ನು ಹೆಚ್ಚಿಸಿ ನಾಗರಿಕ ವಿಮಾನಯಾನ ಸಚಿವಾಲಯ ಆದೇಶ ಹೊರಡಿಸಿದೆ. ಟಿಕೆಟ್ ದರದಲ್ಲಿ ಶೇ.9.83 ರಿಂದ 12.82ರಷ್ಟು ಏರಿಕೆ ಮಾಡಲಾಗಿದೆ.
ಕೊರೊನಾವೈರಸ್‌ನಿಂದಾಗಿ ಎರಡು ತಿಂಗಳ ಲಾಕ್‌ಡೌನ್ ನಂತರ 2020ರ ಮೇ 25ರಂದು ಸೇವೆಗಳನ್ನು ಪುನರಾರಂಭಿಸಲಾಯಿತು. ಭಾರತವು ಅಂದು ಅವಧಿ ಆಧಾರದ ಮೇಲೆ ಕೆಳದರ್ಜೆ ಮತ್ತು ಮೇಲ್ದರ್ಜೆ ವಿಮಾನಗಳ ಸಂಚಾರಕ್ಕೆ ದರ ನಿಗದಿಗೊಳಿಸುವುದಕ್ಕೆ ತೀರ್ಮಾನಿಸಲಾಯಿತು. ಕೊರೊನಾವೈರಸ್ ಸಂಬಂಧಿತ ನಿರ್ಬಂಧಗಳಿಂದಾಗಿ ಆರ್ಥಿಕವಾಗಿ ಕಷ್ಟದಲ್ಲಿರುವವರ ಪ್ರಯಾಣಕ್ಕಾಗಿ ಹಾಗೂ ವಿಮಾನಯಾನ ಸಂಸ್ಥೆಗಳಿಗೆ ನೆರವಾಗುವ ಉದ್ದೇಶದಿಂದ ಕೆಳದರ್ಜೆಯನ್ನು ಅನುಷ್ಠಾನಗೊಳಿಸಲಾಗಿದೆ. ಇದರ ಜೊತೆಗೆ ಮೇಲ್ದರ್ಜೆ ಸೀಟುಗಳನ್ನು ಸಹ ಇರಿಸಲಾಗಿದ್ದು, ಸೀಟುಗಳಿಗೆ ಬೇಡಿಕೆ ಹೆಚ್ಚಾದ ಸಂದರ್ಭದಲ್ಲಿ ಹೆಚ್ಚಿನ ಮೊತ್ತವನ್ನು ವಿಧಿಸುವ ಅನಿವಾರ್ಯತೆ ಸೃಷ್ಟಿಯಾಗದಂತೆ ನೋಡಿಕೊಳ್ಳಲಾಗುತ್ತಿದೆ.
ಪ್ರಯಾಣಿಕರ ಭದ್ರತಾ ಶುಲ್ಕ, ವಿಮಾನ ನಿಲ್ದಾಣಗಳ ಅಭಿವೃದ್ಧಿ ಶುಲ್ಕ ಹಾಗೂ ಸರಕು ಮತ್ತು ಸೇವಾ ತೆರಿಗೆಯನ್ನು ವಿಧಿಸಲಾಗುತ್ತಿದೆ. ಎಷ್ಟು ಪ್ರಮಾಣದಲ್ಲಿ ಈ ಶುಲ್ಕಗಳನ್ನು ವಿಧಿಸಲಾಗುತ್ತದೆ ಎಂಬುದನ್ನು ಪ್ರಯಾಣಿಕರು ಟಿಕೆಟ್ ಬುಕ್ಕಿಂಗ್ ಮಾಡಿದ ವೇಳೆ ಮೇಲ್ಭಾಗದಲ್ಲಿ ಉಲ್ಲೇಖಿಸಲಾಗಿರುತ್ತದೆ.

ದರ ನಿಗದಿಗೆ ಪ್ರಯಾಣದ ಸಮಯವೇ ಆಧಾರ
ನಾಗರಿಕ ವಿಮಾನಯಾನ ಸಚಿವಾಲಯವು ಆಗಸ್ಟ್ 12, 2020ರಂದು ವಿಮಾನ ಪ್ರಯಾಣ ದರವನ್ನು ಹೆಚ್ಚಿಸಿ ಆದೇಶ ಹೊರಡಿಸಿದೆ. ಪ್ರಯಾಣಿಕರು ಪ್ರಯಾಣಿಸುವ ಸಮಯದ ಆಧಾರದ ಮೇಲೆ ಶೇಕಡಾವಾರು ಪ್ರಮಾಣದಲ್ಲಿ ಟಿಕೆಟ್ ದರವನ್ನು ಹೆಚ್ಚಿಸಲಾಗಿದೆ. ಕೆಳದರ್ಜೆ ಮತ್ತು ಮೇಲ್ದರ್ಜೆ ಸೀಟುಗಳ ದರದಲ್ಲಿ ಶೇ.9.83 ರಿಂದ ಶೇ.12.82ರಷ್ಟು ಏರಿಕೆ ಮಾಡಲಾಗಿದೆ. ಎಷ್ಟು ಸಮಯದ ಪ್ರಯಾಣಕ್ಕೆ ಎಷ್ಟು ದರ ಹೆಚ್ಚಿಸಲಾಗಿದೆ ಎಂಬುದನ್ನು ಮುಂದೆ ತಿಳಿಯೋಣ.

40 ನಿಮಿಷಕ್ಕಿಂತ ಕಡಿಮೆ ಅವಧಿಯ ಪ್ರಯಾಣ ದರ
ಕೆಳದರ್ಜೆ ಸೀಟುಗಳಿಗೆ ಶೇ.11.53 ಮತ್ತು ಮೇಲ್ದರ್ಜೆ ಸ್ಥಾನಗಳಿಗೆ ಶೇ.12.82ರಷ್ಟು ದರ ಹೆಚ್ಚಿಸಲಾಗಿದೆ. 40 ನಿಮಿಷಕ್ಕಿಂತ ಕಡಿಮೆ ಅವಧಿಯ ವಿಮಾನ ಪ್ರಯಾಣಕ್ಕೆ ಕೆಳದರ್ಜೆ ಸೀಟುಗಳಿಗೆ ಈ ಮೊದಲು 2600 ರೂಪಾಯಿ ಇದ್ದ ದರವನ್ನು 2900 ರೂಪಾಯಿಗೆ ಹೆಚ್ಚಿಸಲಾಗಿದೆ. ಮೇಲ್ದರ್ಜೆ ಸೀಟಿನ ದರವನ್ನು 8,800ರೂಪಾಯಿಗೆ ಏರಿಕೆ ಮಾಡಲಾಗಿದೆ.

40 ರಿಂದ 60, ಹಾಗೂ 60 ರಿಂದ 90 ನಿಮಿಷದ ಪ್ರಯಾಣ ದರ
ಈ ಮೊದಲು ಕೆಳದರ್ಜೆ ವಿಮಾನಗಳಲ್ಲಿ 40 ರಿಂದ 60 ನಿಮಿಷಗಳ ಸಂಚಾರಕ್ಕೆ 3,300 ರೂಪಾಯಿ ಪ್ರಯಾಣ ದರವನ್ನು ನಿಗದಿಗೊಳಿಸಲಾಗಿತ್ತು. ಇದೀಗ ಅದೇ ದರವನ್ನು 3,700 ರೂಪಾಯಿಗೆ ಏರಿಕೆ ಮಾಡಲಾಗಿದೆ. ಅದೇ ರೀತಿ 40 ರಿಂದ 60 ನಿಮಿಷಗಳ ಮೇಲ್ದರ್ಜೆ ಸೀಟುಗಳ ದರದಲ್ಲಿ ಶೇ.12.24ರಷ್ಟು ಏರಿಕೆ ಮಾಡಲಾಗಿದ್ದು, 11,000 ರೂಪಾಯಿಗೆ ಹೆಚ್ಚಿಸಲಾಗಿದೆ. ಅದೇ ರೀತಿ 60 ರಿಂದ 90 ನಿಮಿಷಗಳ ಸಂಚಾರಕ್ಕೆ ಕೆಳದರ್ಜೆ ಸೀಟುಗಳಿಗೆ ಶೇ.12.5ರಷ್ಟು ದರ ಏರಿಕೆಯಾಗಿದ್ದು, 4,500 ರೂಪಾಯಿ ನಿಗದಿಗೊಳಿಸಲಾಗಿದೆ. ಮೇಲ್ದರ್ಜೆ ವಿಮಾನಗಳ ಪ್ರಯಾಣಕ್ಕೆ ಶೇ.12.82ರಷ್ಟು ಏರಿಕೆಯಾಗಿದ್ದು, 13,200 ರೂಪಾಯಿಗೆ ಏರಿಕೆ ಮಾಡಲಾಗಿದೆ.
Recommended Video

90 ನಿಮಿಷಕ್ಕಿಂತ ಹೆಚ್ಚು ಅವಧಿಯ ಪ್ರಯಾಣ ದರ ಎಷ್ಟಿದೆ?
ದೇಶದಲ್ಲಿ 90 ನಿಮಿಷಕ್ಕಿಂತ ಹೆಚ್ಚು ಅವಧಿಯ ವಿಮಾನ ಪ್ರಯಾಣಕ್ಕೆ ಮೊದಲಿದ್ದ ಟಿಕೆಟ್ ದರಕ್ಕಿಂತ ಈಗಿನ ದರ ತುಸುದುಬಾರಿ ಎನಿಸುತ್ತದೆ. ಇಲ್ಲಿಯವರೆಗೂ 90 ರಿಂದ 120 ನಿಮಿಷಗಳ ಅವಧಿಯ ವಿಮಾನ ಪ್ರಯಾಣ ದರವನ್ನು 4,500 ರಿಂದ 5,300 ರೂ.ಗೆ ಏರಿಕೆ ಮಾಡಲಾಗಿದೆ. 120 ರಿಂದ 150 ನಿಮಿಷಗಳ ಪ್ರಯಾಣಕ್ಕೆ 6,100 ರೂ. ಬದಲಿಗೆ 6,700 ರೂಪಾಯಿ ನಿಗದಿಗೊಳಿಸಲಾಗಿದೆ. 150 ರಿಂದ 180 ನಿಮಿಷಗಳ ಪ್ರಯಾಣಕ್ಕೆ 7,400 ರೂ. ಬದಲಿಗೆ 8,300 ರೂಪಾಯಿ ಪಾವತಿಸಬೇಕಾಗುತ್ತದೆ. 180 ರಿಂದ 210 ನಿಮಿಷಗಳ ಕಾಲ ವಿಮಾನ ಪ್ರಯಾಣಕ್ಕೆ ಈ ಮೊದಲು 8,700 ರೂಪಾಯಿ ತಗಲುತ್ತಿದ್ದು, ಇದೀಗ ಅದರ ಬೆಲೆ 9,800 ರೂಪಾಯಿಗೆ ಏರಿಕೆಯಾಗಿದೆ.
ಶೇಕಡಾವಾರು ಏರಿಕೆ ಪ್ರಮಾಣ:
120 ರಿಂದ 150 ನಿಮಿಷಕ್ಕಿಂತ ಹೆಚ್ಚಿನ ಅವಧಿಯ ಪ್ರಯಾಣಕ್ಕಾಗಿ ಕೆಳದರ್ಜೆ ವಿಮಾನಗಳ ದರದಲ್ಲಿ ಶೇ.9.83ರಷ್ಟು ಏರಿಕೆ ಮಾಡಲಾಗಿದೆ. ಅದೇ ರೀತಿ ಮೇಲ್ದರ್ಜೆ ವಿಮಾನಗಳ ಟಿಕೆಟ್ ದರವನ್ನು ಸಮಯದ ಆಧಾರದಲ್ಲಿ ಹೆಚ್ಚಿಸಲಾಗಿದೆ. 90 ರಿಂದ 120 ನಿಮಿಷಗಳ ಟಿಕೆಟ್ ದರದಲ್ಲಿ ಶೇ.12.13ರಷ್ಟು ಏರಿಕೆಯಾಗಿದೆ. 120 ರಿಂದ 150 ನಿಮಿಷಗಳ ಅವಧಿಗೆ ಶೇ.12.42ರಷ್ಟು ಟಿಕೆಟ್ ದರ ಹೆಚ್ಚಿಸಲಾಗಿದೆ. 150 ರಿಂದ 180ರ ಅವಧಿ ಟಿಕೆಟ್ ದರದಲ್ಲಿ ಶೇ.12.74ರಷ್ಟು ಏರಿಕೆ ಮಾಡಲಾಗಿದೆ. ಅದೇ ರೀತಿ 180 ರಿಂದ 210 ನಿಮಿಷಗಳ ವಿಮಾನ ಪ್ರಯಾಣಕ್ಕೆ ಶೇ.12.39ರಷ್ಟು ಟಿಕೆಟ್ ದರವನ್ನು ಏರಿಕೆ ಮಾಡಲಾಗಿದೆ.












Click it and Unblock the Notifications