AIನಿಂದ ಕೆಲಸ ಕಳೆದುಕೊಳ್ಳುವ ಆತಂಕ ಬೇಡ: ಶ್ರೀಮಂತ ದೇಶಗಳಿಗಿಂತ ಭಾರತದಲ್ಲಿ ಉದ್ಯೋಗ ಕಡಿತದ ಅಪಾಯ ತೀರಾ ಕಡಿಮೆ
ಕೃತಕ ಬುದ್ಧಿಮತ್ತೆ ಅಂದರೆ ಎಐನಂತಹ ಟೆಕ್ನಾಲಜಿಗಳಲ್ಲಿ ಆಗುತ್ತಿರುವ ಈ ವೇಗದ ಬೆಳವಣಿಗೆಯಿಂದಾಗಿ ಭಾರತ ಸೇರಿದಂತೆ ವಿಶ್ವಾದ್ಯಂತ ಲಕ್ಷಾಂತರ ಉದ್ಯೋಗಿಗಳು ತಮ್ಮ ಕೆಲಸ ಕಳೆದುಕೊಳ್ಳುತ್ತೇವೆ ಎನ್ನುವ ಆತಂಕದಲ್ಲಿದ್ದರು. ಆದರೆ ಈ ಆತಂಕಕ್ಕೆ ಈಗ ತೆರೆಬಿದ್ದಂತೆ ಕಾಣುತ್ತಿದೆ.
ಏಕೆಂದರೆ, ಎಐ ಅಳವಡಿಕೆಯಿಂದ ಜಾಗತಿಕ ಉದ್ಯೋಗ ಮಾರುಕಟ್ಟೆಯಲ್ಲಿ ಎಷ್ಟೇ ಬದಲಾವಣೆಗಳಾಗುತ್ತಿದ್ದರೂ ಕೂಡ ಭಾರತದಂತಹ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಉದ್ಯೋಗ ಕಡಿತದ ಅಪಾಯ ತೀರಾ ಕಡಿಮೆ ಇರಲಿದೆ ಎಂದು ಇತ್ತೀಚಿನ ಸಂಶೋಧನಾ ವರದಿಯೊಂದು ಸ್ಪಷ್ಟಪಡಿಸಿದೆ. ಇದರಿಂದ ಭಾರತದ ಯುವ ಪೀಳಿಗೆಯ ಕೆಲಸಗಳನ್ನ ಎಐ ಕಸಿದುಕೊಳ್ಳಲಿದೆ ಎಂಬ ಭಯದಿಂದ ಸ್ವಲ್ಪ ನಿರಾಳರಾಗಬಹುದು.

ಭಾರತದಲ್ಲಿ ಎಐ ಉದ್ಯೋಗ ಕಡಿತದ ಆತಂಕ ಕಡಿಮೆ
'ಅಭಿವೃದ್ಧಿಶೀಲ ಜಾಗತಿಕ ಉದ್ಯೋಗ ಮಾರುಕಟ್ಟೆಯಲ್ಲಿ 680 ಕೋಟಿ ಜನಸಂಖ್ಯೆಯ ಮೇಲೆ ಎಐ ಪರಿಣಾಮ' ಎಂಬ ಅಧ್ಯಯನ ಪ್ರಬಂಧವನ್ನ ಆಧರಿಸಿ ಬಿಡುಗಡೆ ಮಾಡಲಾದ ವರದಿಯಲ್ಲಿ ಹಲವು ಆಶಾದಾಯಕ ಅಂಶಗಳು ಹೊರಬಿದ್ದಿವೆ. ಈ ವರದಿಯ ಪ್ರಕಾರ, ಅಮೆರಿಕದಂತಹ ಮುಂದುವರಿದ ಹಾಗೂ ಶ್ರೀಮಂತ ರಾಷ್ಟ್ರಗಳಲ್ಲಿ ಎಐ ತಂತ್ರಜ್ಞಾನದಿಂದ ನೇರ ಉದ್ಯೋಗ ಕಡಿತದ ಪ್ರಮಾಣ ಶೇ. 14.2ರಷ್ಟು ಹೆಚ್ಚಿನ ಮಟ್ಟದಲ್ಲಿರಲಿದೆ. ಆದರೆ, ಭಾರತದಂತಹ ಅಭಿವೃದ್ಧಿ ಹೊಂದುತ್ತಿರುವ ಮತ್ತು ಹಿಂದುಳಿದ ದೇಶಗಳಲ್ಲಿ ಎಐ ಆಧಾರಿತ ಉದ್ಯೋಗ ನಷ್ಟದ ಅಪಾಯ ಕೇವಲ ಶೇ. 4.5ರಷ್ಟು ಮಾತ್ರ ಇರಲಿದೆ ಎಂದು ಅಂದಾಜಿಸಲಾಗಿದೆ.
ಶ್ರೀಮಂತ ಹಾಗೂ ಅಭಿವೃದ್ಧಿಶೀಲ ದೇಶಗಳ ನಡುವಿನ ವ್ಯತ್ಯಾಸ
ಅಭಿವೃದ್ಧಿ ಹೊಂದಿದ ಶ್ರೀಮಂತ ದೇಶಗಳ ಆರ್ಥಿಕತೆಯು ಹೆಚ್ಚಾಗಿ ಕಚೇರಿ ಆಧಾರಿತ ಹಾಗೂ ಆಟೋಮೇಷನ್ಗೆ ಸುಲಭವಾಗಿ ಒಳಪಡುವ ಉದ್ಯೋಗಗಳ ಮೇಲೆ ಅವಲಂಬಿತವಾಗಿದೆ. ಹೀಗಾಗಿ ಅಲ್ಲಿ ಎಐಯಿಂದಾಗಿ ನೇರವಾಗಿ ಉದ್ಯೋಗಿಗಳನ್ನ ಬದಲಿಸುವ ಸಾಧ್ಯತೆ ಹೆಚ್ಚಿರುತ್ತದೆ. ಆದರೆ ಭಾರತ ಸೇರಿದಂತೆ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ವೈವಿಧ್ಯಮಯ ಕೆಲಸದ ಸ್ವರೂಪಗಳಿದ್ದು, ಎಐ ತಂತ್ರಜ್ಞಾನವು ಮನುಷ್ಯರನ್ನಾ ಸಂಪೂರ್ಣವಾಗಿ ಬದಲಿಸುವ ಬದಲು ಅವರ ಕೆಲಸಕ್ಕೆ ಸಹಕಾರಿಯಾಗಿ ಕಾರ್ಯನಿರ್ವಹಿಸಲಿದೆ. ಚೀನಾ ಮತ್ತು ಭಾರತದಂತಹ ದೇಶಗಳಲ್ಲಿ ಎಐನಿಂದ ನಕಾರಾತ್ಮಕ ಪರಿಣಾಮಕ್ಕಿಂತ ಸಕಾರಾತ್ಮಕ ಅವಕಾಶಗಳೇ ಹೆಚ್ಚಿವೆ.
ಉತ್ಪಾದಕತೆ ಹೆಚ್ಚಳ
ಎಐ ಬಳಕೆಯಿಂದ ಕೇವಲ ಉದ್ಯೋಗ ನಷ್ಟವಾಗುತ್ತದೆ ಎಂಬುದು ಏಕಮುಖಿ ಆಲೋಚನೆ. ವಾಸ್ತವವಾಗಿ, ಎಐ ತಂತ್ರಜ್ಞಾನವು ಹೊಸ ಉದ್ಯೋಗಗಳ ಸೃಷ್ಟಿಗೆ ಹಾಗೂ ಈಗ ಇರುವ ಉದ್ಯೋಗಗಳ ಉತ್ಪಾದಕತೆಯನ್ನ ಹೆಚ್ಚಿಸಲು ಹೆಚ್ಚಿನ ಅವಕಾಶಗಳನ್ನ ತೆರೆಯಲಿದೆ.ಈ ವರದಿಯಲ್ಲಿ ತಿಳಿಸಿರುವಂತೆ, ಭಾರತ ಮತ್ತು ಇತರೆ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಎಐ ಬಳಕೆಯಿಂದ ಉದ್ಯೋಗಗಳ ಉತ್ಪಾದಕತೆಯು ಶೇ. 16.2ರಷ್ಟು ಹೆಚ್ಚಾಗಲಿದ್ದು, ಶ್ರೀಮಂತ ರಾಷ್ಟ್ರಗಳಲ್ಲಿ ಇದು ಶೇ. 18.7ರಷ್ಟು ಇರಲಿದೆ. ಎಐ ನೆರವಿನಿಂದ ನೌಕರರು ಮತ್ತಷ್ಟು ಸೃಜನಶೀಲತೆಯಿಂದ ಹಾಗೂ ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ.
100 ವರ್ಷಗಳ ಅಭಿವೃದ್ಧಿಯನ್ನ 10 ವರ್ಷಗಳಲ್ಲಿ ಕಾಣುಲು ಸಾಧ್ಯ
ಎಐ ತಂತ್ರಜ್ಞಾನವನ್ನ ಕೇವಲ ಐಟಿ ಕ್ಷೇತ್ರಕ್ಕೆ ಸೀಮಿತಗೊಳಿಸದೆ ಇಂಧನ, ಸಾರಿಗೆ, ಕೃಷಿ, ಆರೋಗ್ಯ ಮತ್ತು ಕೌಶಲ್ಯಾಭಿವೃದ್ಧಿ ಕ್ಷೇತ್ರಗಳಲ್ಲಿ ಸಮರ್ಪಕವಾಗಿ ಬಳಸಿಕೊಂಡರೆ ಅದ್ಭುತ ಪ್ರಗತಿ ಸಾಧಿಸಲು ಸಾಧ್ಯ. ಶ್ರೀಮಂತ ಹಾಗೂ ಅಭಿವೃದ್ಧಿಶೀಲ ದೇಶಗಳು ತಮ್ಮ ಮೂಲಸೌಕರ್ಯಗಳ ಅಭಿವೃದ್ಧಿಗೆ ಎಐ ಅನ್ನು ಪ್ರಬಲ ಅಸ್ತ್ರವಾಗಿ ಬಳಸಿಕೊಂಡರೆ, ಕಳೆದ 100 ವರ್ಷಗಳಲ್ಲಿ ಕಾಣಲು ಸಾಧ್ಯವಾಗದಂತಹ ಅಭಿವೃದ್ಧಿಯನ್ನ ಮುಂದಿನ ಕೇವಲ 10 ವರ್ಷಗಳಲ್ಲಿಯೇ ಕಾಣಬಹುದು ಎಂದು ವರದಿ ತಿಳಿಸಿದೆ.


Click it and Unblock the Notifications
