ಹರ್ಯಾಣದಲ್ಲಿ ಗೋಹತ್ಯೆ ಮಾಡಿದರೆ 10 ವರ್ಷ ಶಿಕ್ಷೆ
ಚಂಡೀಗಢ,ಮಾ.15: ಮಹಾರಾಷ್ಟ್ರ ನಂತರ ಹರ್ಯಾಣ ಸರ್ಕಾರ ಕೂಡಾ ಗೋಹತ್ಯೆ ನಿಷೇಧಕ್ಕೆ ಮುಂದಾಗಿದೆ. ಗೋಹತ್ಯೆ ಮಾಡಿದರೆ 10 ವರ್ಷ ಜೈಲು ಶಿಕ್ಷೆ ವಿಧಿಸುವ ನೂತನ ಕಾಯ್ದೆಯನ್ನು ಆಡಳಿತರೂಢ ಬಿಜೆಪಿ ಸರ್ಕಾರ ಜಾರಿಗೆ ತಂದಿದೆ.
ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನೆ ಮೈತ್ರಿ ಸರ್ಕಾರ ಗೋಹತ್ಯೆ ನಿಷೇಧ ಕಾಯ್ದೆಯನ್ನು ಜಾರಿ ಮಾಡಿತ್ತು. ಗೋಹತ್ಯೆ ಮಾಡಿದರೆ 5 ವರ್ಷ ಜೈಲು ಶಿಕ್ಷೆ ಹಾಗೂ 30 ಸಾವಿರ ದಂಡ ವಿಧಿಸುವ ಕಾನೂನು ಜಾರಿಗೊಳಿಸಿತ್ತು. ಈಗ ಹರ್ಯಾಣದ ಬಿಜೆಪಿ ಸರ್ಕಾರ ಇದೇ ಕಾಯ್ದೆಯನ್ನು ಜಾರಿ ಮಾಡಿದೆ.
ಬಿಜೆಪಿ ಸರ್ಕಾರದ ನೂತನ ಕಾಯ್ದೆ ಪ್ರಕಾರ ಗೋಹತ್ಯೆ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ. ಒಂದು ವೇಳೆ ಕಾನೂನು ಉಲ್ಲಂಘಿಸಿ ಗೋಹತ್ಯೆ ಮಾಡಿದರೆ 10 ವರ್ಷ ಜೈಲು ಶಿಕ್ಷೆ ವಿಧಿಸಲಾಗುವುದು. ['ಬೀಫ್ ಬ್ಯಾನ್' ನಂತರ ಮುಸ್ಲಿಂ ಕೋಟಾ ರದ್ದು]
ಹರಿಯಾಣದ ಮುಖ್ಯಮಂತ್ರಿ ಲಾಲ್ ಖಟ್ಟರ್ ಆಸಕ್ತಿ ಮೇರೆಗೆ ಈ ಕಾಯ್ದೆಯನ್ನು ಜಾರಿ ಮಾಡಲಾಗಿದೆ. ಮಹಾರಾಷ್ಟ್ರ ಮಾದರಿಯನ್ನು ಅನುರಿಸರಿಕೊಂಡು ಕಾಯ್ದೆ ಅನುಷ್ಠಾನ ಮಾಡಲಾಗಿದೆ ಎಂದು ಪಶು ಸಂಗೋಪನಾ ಖಾತೆ ಸಚಿವ ಓಪಿ ಧನ್ಕರ್ ಹೇಳಿದ್ದಾರೆ.

ಸೆಕ್ಷನ್ 302?: ಗೋಹತ್ಯೆ ಹಾಗೂ ದನದ ಮಾಂಸ ಮಾರಾಟ ಮಾಡುವವರ ವಿರುದ್ಧ ಐಪಿಸಿ ಸೆಕ್ಷನ್ 302(ಕೊಲೆ) ಹಾಕಿ ಪ್ರಕರಣ ದಾಖಲಿಸಲಾಗುತ್ತದೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ. ಇದರಲ್ಲಿ ಸತ್ಯಾಂಶವಿಲ್ಲ. ಮಹಾರಾಷ್ಟ್ರ ಸರ್ಕಾರ ಜಾರಿಗೆ ತಂದಿರುವ ಕಾನೂನಿನ ಅನ್ವಯ ಇಲ್ಲೂ ಕಾನೂನು ಜಾರಿಗೊಳ್ಳಲಿದೆ ಎಂದು ಸಚಿವ ಧನ್ಕರ್ ಹೇಳಿದ್ದಾರೆ. [ಗೋ ಹತ್ಯೆ ನಿಷೇಧ ಎಲ್ಲೆಡೆ ಜಾರಿಗೊಳ್ಳಲಿ: ಡಿವಿಎಸ್]
ಹರ್ಯಾಣದಲ್ಲಿ ಸುಮಾರು 3 ಲಕ್ಷ ಹಸುಗಳು 400ಕ್ಕೂ ಅಧಿಕ ಗೋಶಾಲಗಳಲ್ಲಿವೆ. ಸುಮಾರು 1.5 ಲಕ್ಷ ನಿರ್ಗತಿಕ ಹಸು ಹಾಗೂ 18 ಲಕ್ಷಕ್ಕೂ ಅಧಿಕ ಹಸು ಮನೆಗಳಲ್ಲಿ ಸಾಕುಪ್ರಾಣಿಗಳಾಗಿವೆ. ಹಾಲಿನ ಡೇರಿ ತೆರೆಯುವವರಿಗೆ ಸರ್ಕಾರ ಸಬ್ಸಿಡಿಯನ್ನು ಘೋಷಿಸಿದೆ.
ಪಿಟಿಐ












Click it and Unblock the Notifications