Adani Group: ಮುಂಬೈ ಮೋತಿಲಾಲ್ ನಗರ ಯೋಜನೆಗೆ 1ಲಕ್ಷ ಕೋಟಿ ರೂ ಹೂಡಿಕೆ, 17 ಲಕ್ಷ ಚಮೀ. ಮಾರಾಟ
ಮುಂಬೈ: ವಾಣಿಜ್ಯ ನಗರಿ ಮುಂಬೈನ ಉಪನಗರದಲ್ಲಿರುವ ಮೋತಿಲಾಲ್ ನಗರದ ಪುನರಾಭಿವೃದ್ಧಿ ಯೋಜನೆಗೆ ಅದಾನಿ ಗ್ರೂಪ್ ಬೃಹತ್ ಹೂಡಿಕೆ ಮಾಡಲು ಮುಂದಾಗಿದೆ. ಒಟ್ಟು ಸುಮಾರು 1 ಲಕ್ಷ ಕೋಟಿ ರೂಪಾಯಿ ಹೂಡಿಕೆ ಮಾಡಲಿದೆ. ಮೋತಿಲಾಲ್ ನಗರ ಸುಮಾರು 143 ಎಕರೆ ಪ್ರದೇಶದಲ್ಲಿ ಹರಡಿಕೊಂಡಿದ್ದು, ಸುಮಾರು 28 ಲಕ್ಷ ಚದರ ಮೀಟರ್ ನಿರ್ಮಿತ ಪ್ರದೇಶ ಮತ್ತಷ್ಟು ಸುಂದರವಾಗಿ ತಲೆ ಎತ್ತಲಿದ್ದು, ಈ ಪ್ರದೇಶದ ಪುನರ್ ಅಭಿವೃದ್ದಿ ಗುರಿ ಹಾಕಿಕೊಳ್ಳಲಾಗಿದೆ.
ಮೋತಿಲಾಲ್ ನಗರದ ಪುನರಾಭಿವೃದ್ಧಿ ಯೋಜನೆ ಮಹಾರಾಷ್ಟ್ರ ವಸತಿ ಮತ್ತು ಪ್ರದೇಶಾಭಿವೃದ್ಧಿ ಪ್ರಾಧಿಕಾರ (MHADA) ಸಹಭಾಗಿತ್ವದಲ್ಲಿ ನಡೆಯಲಿದೆ. ಅಲ್ಲಿನ ನಿವಾಸಿಗಳಿಗೆ ಆಧುನಿಕ ವಸತಿ ಒದಗಿಸುವ ಉದ್ದೇಶದಿಂದ ಯೋಜನೆ ಕೈಗೆತ್ತಿಕೊಳ್ಳಲಾಗುತ್ತಿದೆ. ಅದಾನಿ ಗ್ರೂಪ್‌ನ ಎಸ್ಟೇಟ್‌ವ್ಯೂ ಡೆವಲಪರ್ಸ್ ಕಂಪನಿಗೆ 17 ಲಕ್ಷ ಚದರ ಮೀಟರ್ (1.82 ಕೋಟಿ ಚದರ ಅಡಿ) ಮುಕ್ತ ಮಾರಾಟ ಪ್ರದೇಶ ಲಭ್ಯವಾಗಲಿದೆ.

ಕಂಪನಿ ಈ ಪ್ರದೇಶವನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಿ ಆದಾಯ ಗಳಿಸಬಹುದು. ಸದ್ಯ ಈ ಪ್ರದೇಶದಲ್ಲಿ ಒಂದು ಚದರ ಅಡಿಗೆ ಮಾರುಕಟ್ಟೆ ಬೆಲೆ ಸುಮಾರು 30,000 ರೂಪಾಯಿ ಒದೆ. ವಸತಿ ಅಭಿವೃದ್ಧಿ ಅತ್ಯಾಕರ್ಷಕ ಸ್ಥಳ ಇದಾಗಿದೆ. ಇದರ ಅಭಿವೃದ್ಧಿಗೆ ಅದಾನಿ ಗ್ರೂಪ್ ಕೈ ಜೊಡಿಸಿದೆ.
ಮೋತಿಲಾಲ್ ನಗರ ಯೋಜನೆ ಪರಿಹಾರ ಚರ್ಚೆ ಮತ್ತು ವಿಶ್ಲೇಷಣೆ (ಸಿಡಿ ಆಂಡ್ ಎ) ಮಾದರಿಯಡಿ ಜಾರಿಗೊಳ್ಳುತ್ತಿರುವ ಮೊದಲ ಪುನರಾಭಿವೃದ್ಧಿ ಯೋಜನೆ ಇದಾಗಿದೆ. ಯೋಜನೆಗೆ ಕಳೆದ ವರ್ಷ ಕರೆದ ಟೆಂಡರ್‍ನಲ್ಲಿ ಪಾಲ್ಗೊಂಡ ಅದಾನಿ ಗ್ರೂಪ್ ವಿಜೇತ ಬಿಡ್ದಾರನಾಗಿ ಆಯ್ಕೆಯಾಗಿದೆ. ಅದರಂತೆ ಮುಂದಿನ ಪ್ರಕ್ರಿಯೆಗಳು ನಡೆಯಲಿದ್ದು, ಇದೀಗ ಒಂದು ಲಕ್ಷ ಕೊಟಿ ರೂಪಾಯಿ ಹೂಡಿಕೆ ಮಾಡುವ ಮಾಹಿತಿಯನ್ನು ಅದಾನಿ ಸಂಸ್ಥೆ ನೀಡಿದೆ.
ಎಂಎಚ್‌ಎಡಿಎ ಉಪಾಧ್ಯಕ್ಷ ಮತ್ತು ಸಿಇಒ ಸಂಜೀವ್ ಜೈಸ್ವಾಲ್ ಪ್ರಕಾರ, ಒಟ್ಟು ಹೂಡಿಕೆಯು 10 ರಿಂದ 15 ವರ್ಷಗಳ ಅವಧಿಗೆ ಇರಲಿದೆ ವಸತಿ, ವಾಣಿಜ್ಯ, ಶೈಕ್ಷಣಿಕ ಮತ್ತು ಆತಿಥ್ಯ ಘಟಕಗಳ ಬಹುಬಳಕೆಯ ಯೋಜನೆಯಾಗಿದೆ. ಆರಂಭದಲ್ಲಿ ಒಟ್ಟು ಸುಮಾರು 5,000 ಅಸ್ತಿತ್ವದಲ್ಲಿರುವ ಮನೆಗಳು, ವಸತಿ, ವಾಣಿಜ್ಯ ಮತ್ತು ಕೊಳೆಗೇರಿ ಘಟಕಗಳು 07 ವರ್ಷಗಳಲ್ಲಿ ಪುನರ್ವಸತಿಗೊಳ್ಳಲಿವೆ. ಮೂಲ ನಿವಾಸಿಗಳ ಪುನರ್ವಸತಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸ್ಥಳೀಯ ಮನೆ, ವಾಣಿಜ್ಯ ಮಾಲೀಕರಿಗೆ ಬಂಪರ್
ಮೋತಿಲಾಲ್ ನಗರದಲ್ಲಿ ಪ್ರತಿಯೊಬ್ಬ ಮನೆ ಮಾಲೀಕರು 1,600 ಚದರ ಅಡಿಯ ಮನೆ ಪಡೆಯಲಿದ್ದಾರೆ. 957 ಚದರ ಅಡಿ ವಾಣಿಜ್ಯ ಸ್ಥಳವನ್ನು ವಾಣಿಜ್ಯ ಘಟಕದ ಮಾಲೀಕರಿಗೆ ಸಿಗಲಿದೆ. ಪೂರ್ಣಗೊಂಡ ನಂತರ, ಕುಟುಂಬಗಳ ಸಂಖ್ಯೆ 5,000 ದಿಂದ ಸುಮಾರು 25,000 ಕ್ಕೆ ಹೆಚ್ಚಾಗುವ ಸಾಧ್ಯತೆ ಇದೆ. ಯೋಜನೆಯ ಭೂ ಮಾಲೀಕತ್ವ ಎಂಎಚ್‌ಎಡಿಎ ನ ಬಳಿ ಇರಲಿದೆ. ಅದಾನಿ ಗ್ರೂಪ್ ನಿರ್ಮಾಣ ಮತ್ತು ಮಾರಾಟ ಕಾರ್ಯ ನೋಡಿಕೊಳ್ಳಲಿದೆ. ಡೆವಲಪರ್‌ಗಳು ಯಾವುದೇ ಹಣಕಾಸು ಅಥವಾ ಅಭಿವೃದ್ಧಿ ಹಕ್ಕುಗಳ ವರ್ಗಾವಣೆಗೆ ಪ್ರಾಧಿಕಾರದ ಪೂರ್ವಾನುಮತಿ ಪಡೆಯಬೇಕಾಗುತ್ತದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
75,445 ಮನೆಗಳಿಗೆ ಪುನರ್ವಸತಿ
ಮುಂಬೈನಲ್ಲಿ 923 ಎಕರೆ ವಿಸ್ತೀರ್ಣದ 11 ಹೆಚ್ಚುವರಿ ಯೋಜನೆಗಳ ಪುನರಾಭಿವೃದ್ಧಿ ಉಪಕ್ರಮದ ಅಡಿಯಲ್ಲಿಯೇ ಮೋತಿಲಾಲ್ ನಗರ ಯೋಜನೆಯು ಬರುತ್ತದೆ. ಹೆಚ್ಚುವರಿ ಯೋಜನೆಗಳಲ್ಲಿ ಕಾಮಾಠಿಪುರ, ವರ್ಲಿಯ ಆದರ್ಶ ನಗರ, ಅಭ್ಯುದಯ ನಗರ ಮತ್ತು ಬಾಂದ್ರಾ ರಿಕ್ಲಮೇಷನ್‌ನಂತಹ ಪ್ರದೇಶಗಳು ಒಳಗೊಂಡಿವೆ. ಈ ಯೋಜನೆಗಳು ನಗರದ ಚಿತ್ರಣ ಬದಲಿಸಲಿವೆ. ಸಮಸ್ಯೆಗಳನ್ನು ನಿವಾರಿಸುವ ಜೊತೆಗೆ ಅದುನಿಕ ಸೌಲಭ್ಯಗಳೊಂದಿಗೆ ಜನರು ಬದುಕವಂತೆ ಮಾಡುತ್ತದೆ. ಮುಂದಿನ ದಿನಗಳಲ್ಲಿ ಯೋಜನೆಯಡಿ ಒಟ್ಟ 75,445 ಮನೆಗಳಿಗೆ ಪುನರ್ವಸತಿ ಕಲ್ಪಿಸುವ ಗುರಿ ಇದೆ.
ಪ್ರಸ್ತುತ ಕೊಳೆಗೇರಿ ಪುನರ್ವಸತಿ ಮಾದರಿಯನ್ನು ಮರು ಪರಿಶೀಲಿಸುವ, ಬಾಡಿಗೆ ವಸತಿ ಕಾರ್ಯಸಾಧ್ಯತೆಯನ್ನು ಸುಧಾರಿಸುವ ಅಗತ್ಯವಿದೆ. ಏಕೆಂದರೆ ಮುಂಬೈನಲ್ಲಿ ಬಾಡಿಗೆಯ ಲಾಭ ಸುಮಾರು ಶೇ.2ರಷ್ಟು ಕಡಿಮೆ ಇದೆ. ಧಾರಾವಿಯಂತಹ ಬೃಹತ್ ಪುನರಾಭಿವೃದ್ಧಿ ಯೋಜನೆಯ ಪ್ರಯತ್ನಗಳು ನಗರದಲ್ಲಿ ವಸತಿ ಪೂರೈಕೆ ಹೆಚ್ಚಿಸಿ ನಗರವನ್ನು ಮರುರೂಪಿಸುವ ಸಾಧ್ಯತೆಗಳು ಇವೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.













Click it and Unblock the Notifications