ದೆಹಲಿ ಶಾಸಕರಿಗೆ ಅಚ್ಛೇ ದಿನ ಕೊಟ್ಟ ಕೇಜ್ರಿ ಸರ್ಕಾರ
ನವದೆಹಲಿ, ಡಿಸೆಂಬರ್. 04: ಸರಳ ಆಡಳಿತದ ಜಪ ಮಾಡಿಕೊಂಡು ದೆಹಲಿ ಗದ್ದುಗೆ ಏರಿದ್ದ ಆಮ್ ಆದ್ಮಿ ಪಕ್ಷ ಇದೀಗ ತನ್ನ ಶಾಸಕರಿಗೆ ಹೊಸ ವರ್ಷದ ಗಿಫ್ಟ್ ನೀಡಿದೆ. ಮುಖ್ಯಮಂತ್ರಿ ಮತ್ತು ಸಚಿವರು ಹಾಗೂ ಶಾಸಕರ ವೇತನ ಹಾಗೂ ಇತರೆ ಭತ್ಯೆ ಹೆಚ್ಚಳಕ್ಕೆ ಸಂಬಂಧಿಸಿದ ವಿಧೇಯಕ ದೆಹಲಿ ವಿಧಾನಸಭೆ ಅಂಗೀಕರಿಸಿದ್ದು, ಇದರೊಂದಿಗೆ ಶಾಸಕರ ವೇತನ ನಾಲ್ಕು ಪಟ್ಟು ಹೆಚ್ಚಾಗಲಿದೆ.
ಇದರಿಂದಾಗಿ ಶಾಸಕರ ಒಟ್ಟಾರೆ ಮಾಸಿಕ ವೇತನ 88 ಸಾವಿರದಿಂದ 2.1 ಲಕ್ಷಕ್ಕೆ ಏರಲಿದೆ. ಈ ಮೂಲಕ ದೇಶದಲ್ಲೇ ಹೆಚ್ಚು ವೇತನ ಪಡೆವ ಶಾಸಕರು ಎಂಬ ಖ್ಯಾತಿಗೆ ದಿಲ್ಲಿ ಶಾಸಕರು ಪಾತ್ರವಾಗಲಿದ್ದಾರೆ. ಕರಡನ್ನು ಕೇಂದ್ರದ ಒಪ್ಪಿಗೆಗೆ ಕಳಿಸಲಾಗುತ್ತಿದ್ದು, ಅದರ ಅಂಗೀಕಾರದ ಬಳಿಕವೇ ಪರಿಷ್ಕೃತ ವೇತನ ಜಾರಿಯಾಗಲಿದೆ.[ಆಮ್ ಆದ್ಮಿ ಕೇಜ್ರಿವಾಲ್‌ಗೆ ಮುಖಭಂಗ, ಎಬಿವಿಪಿ ಜಯದ ನಗೆ]

ಎಷ್ಟು ಹೆಚ್ಚಳ?: ಕೇಂದ್ರದ ಅನುಮೋದನೆ ದೊರೆತರೆ ಶಾಸಕರ ಮೂಲ ವೇತನ 12,000ರೂ.ದಿಂದ 50,000 ರೂ.ಗೆ ಹೆಚ್ಚಳವಾಗುವುದು. ಶಾಸಕರ ಕ್ಷೇತ್ರ ಭತ್ಯೆ 18 ಸಾವಿರದಿಂದ 50 ಸಾವಿರ ರೂ.ಗೆ ಹೆಚ್ಚಲಿದೆ.
ಭತ್ಯೆಯೂ ಸೇರಿದಂತೆ ಒಟ್ಟಾರೆ ಮಾಸಿಕ ವೇತನ 88 ಸಾವಿರ ರೂ.ನಿಂದ 2.1 ಲಕ್ಷ ರೂ.ಗೆ ಹೆಚ್ಚುವುದು. ಇದೇ ವೇಳೆ ದೆಹಲಿ ಮಂತ್ರಿಗಳ ವೇತನ ಮೂಲ ವೇತನ 20,000ರೂ.ದಿಂದ 80,000ರೂ. ಗೆ ಹೆಚ್ಚಳವಾಗಲಿದೆ.[ವಿಧಾನಸೌಧದಲ್ಲಿ ವೈ ಫೈ ನೀಡಿ ಎಂದ ಕರ್ನಾಟಕ ಶಾಸಕರು]
ಕುಟುಂಬ ಹಾಗೂ ಕಚೇರಿ ನಿರ್ವಹಣೆ ವೇತನ ಸಾಕಾಗುತ್ತಿಲ್ಲ. ಹೀಗಾಗಿ ವೇತನ ಹೆಚ್ಚಳ ಮಾಡುವಂತೆ ದೆಹಲಿ ಶಾಸಕರು ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಶಾಸಕರ ವೇತನ ಮತ್ತು ಭತ್ಯೆ ಹೆಚ್ಚಳ ಸಂಬಂಧ ಲೋಕಸಭಾ ಮಾಜಿ ಪ್ರಧಾನ ಕಾರ್ಯದರ್ಶಿ ಪಿಡಿಟಿ ಆಚಾರ್ಯ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು. ಆಚಾರ್ಯ ನೇತೃತ್ವದ ಮೂವರು ಸದಸ್ಯರ ಈ ಸಮಿತಿ, ಶಾಸಕರ ವೇತನವನ್ನು ಮೂಲ ವೇತನದಲ್ಲಿ ಶೇ.400ರಷ್ಟು ಅಂದರೆ 12 ಸಾವಿರದಿಂದ 50 ಸಾವಿರಕ್ಕೆ ಏರಿಸುವಂತೆ ಶಿಫಾರಸು ಮಾಡಿತ್ತು.[ಯಾರಿಗೆ ಸಾಲುತ್ತೆ ಸಂಬಳ? : ಸಂಸದ ಪ್ರತಾಪ್ ಪ್ರಶ್ನೆ]
ಕರಡಿಗೆ ಕೇಂದ್ರದ ಒಪ್ಪಿಗೆ ಸಿಕ್ಕ ನಂತರ ದೆಹಲಿ ಶಾಸಕರು ಅತಿಹೆಚ್ಚು ವೇತನ ಪಡೆಯುವ ಶಾಸಕರಾಗಲಿದ್ದಾರೆ. ಸಂಸದ ಪ್ರತಾಪ್ ಸಿಂಹ ಸಹ ವೇತನ ಸಾಕಾಗುತ್ತಿಲ್ಲ ಎಂಬ ಹೇಳಿಕೆ ನೀಡಿ ಹಿಂದೊಮ್ಮೆ ವಿವಾದಕ್ಕೆ ಸಿಲುಕಿದ್ದರು.












Click it and Unblock the Notifications