Exit Poll Result 2024: ಎಬಿಪಿ-ಸಿವೋಟರ್ ಎಕ್ಸಿಟ್ ಪೋಲ್; ದೇಶದ 543 ಸ್ಥಾನಗಳಲ್ಲಿ ಎನ್‌ಡಿಎ, ಇಂಡಿಯಾ ಗಳಿಸಿದ್ದೆಷ್ಟು?
ನವದೆಹಲಿ, ಜೂನ್. 01: ಈ ಬಾರಿಯ ಲೋಕಸಭಾ ಚುನಾವಣೆ ಏಳು ಹಂತಗಳಲ್ಲಿ ನಡೆದಿದೆ. ದೇಶದ 543 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಈ ಬಾರಿಯೂ ಪ್ರಧಾನಿ ನರೇಂದ್ರ ಮೋದಿ ಗೆಲುವು ಕಾಣಲಿದ್ದಾರೆ ಎಂಬ ಅಲೆ ಕಾಣಿಸುತ್ತಿದೆ. ಮೂರನೇ ಬಾರಿಗೆ ಪ್ರಧಾನಿಯಾಗಲು ಸಿದ್ಧರಾಗಿದ್ದಾರೆ.
ಜೂನ್ 1ರಂದು 7ನೇ ಹಂತದ ಮತದಾನ ಮುಗಿದಿದ್ದು, ಎರಡು ತಿಂಗಳಿನಿಂದ ಕಾಯುತ್ತಿದ್ದ ಚುನಾವಣೋತ್ತರ ಸಮೀಕ್ಷೆಗಳ ಫಲಿತಾಂಶಗಳನ್ನು ಪ್ರಕಟಿಸಲು ಟಿವಿ ಚಾನೆಲ್‌ಗಳು ಕಾದು ಕುಳಿತಿವೆ. ಸದ್ಯ ಎಬಿಪಿ-ಸಿವೋಟರ್ ಎಕ್ಸಿಟ್ ಪೋಲ್ ಫಲಿತಾಂಶ ಬಿಡುಗಡೆಯಾಗಿದ್ದು, ಮತ್ತೆ ಬಿಜೆಪಿ ನೇತೃತ್ವದ ಎನ್‌ಡಿಎ ಅಧಿಕಾರದ ಗದ್ದುಗೆ ಏರುವುದು ಖಚಿತ ಎಂದಿದೆ.

ಲೋಕಸಭೆ ಚುನಾವಣೆ 2024ರ ಮೊದಲ ಹಂತದ ಮತದಾನ ಏಪ್ರಿಲ್ 19 ರಂದು ನಡೆಯಿತು. ಏಪ್ರಿಲ್ 26 ರಂದು 2ನೇ ಹಂತದ ಮತದಾನ, ಮೇ 7ರಂದು 3ನೇ ಹಂತದ ಮತದಾನ, ಮೇ 13 ರಂದು 4ನೇ ಹಂತದ ಮತದಾನ, ಮೇ 20 ರಂದು 5ನೇ ಹಂತದ ಮತದಾನ, ಮೇ 25ರಂದು 6ನೇ ಹಂತದ ಮತದಾನ ಮತ್ತು ಜೂನ್ 1ರಂದು 7ನೇ ಹಂತದ ಮತದಾನ ನಡೆದಿದೆ. ಜೂನ್ 4ಕ್ಕೆ ಮತ ಏಣಿಕೆ ನಡೆಯಲಿದೆ. ಅದಕ್ಕೂ ಮುನ್ನ ವಿವಿಧ ಸಂಸ್ಥೆಗಳು, ಮಾಧ್ಯಮ ಸಂಸ್ಥೆಗಳು ಎಕ್ಸಿಟ್ ಪೋಲ್ ಫಲಿತಾಂಶ ಪ್ರಕಟಿಸಿವೆ.
ಎಬಿಪಿ-ಸಿವೋಟರ್ ಎಕ್ಸಿಟ್ ಪೋಲ್ ಫಲಿತಾಂಶ
ಎಬಿಪಿ-ಸಿವೋಟರ್ ಲೋಕಸಭಾ ಚುನಾವಣೆಗಳ ಎಕ್ಸಿಟ್ ಪೋಲ್ ಫಲಿತಾಂಶಗಳು ರಾಷ್ಟ್ರದ ಅತ್ಯಂತ ನಿಖರವಾದ ಸಮೀಕ್ಷೆಗಳಲ್ಲಿ ಒಂದಾಗಿದೆ. ಇದು ಚುನಾವಣೆಯ ನಂತರದ ಬೆಳವಣಿಗೆಗಳನ್ನು ಟ್ರ್ಯಾಕ್ ಮಾಡಲು ಮತದಾರರಿಗೆ ಸಹಾಯ ಮಾಡುತ್ತದೆ. ಎಲ್ಲಾ 28 ರಾಜ್ಯಗಳು ಮತ್ತು 8 ಕೇಂದ್ರಾಡಳಿತ ಪ್ರದೇಶಗಳಲ್ಲಿ ಏಳು ಹಂತಗಳಲ್ಲಿ ನಡೆದ ಮತದಾನ ಬಗ್ಗೆ ಚುನಾವಣೋತ್ತರ ಫಲಿತಾಂಶವನ್ನು ಹಂಚಿಕೊಂಡಿದೆ.

ಒಟ್ಟು 543 ಸ್ಥಾನ
NDA - 353-383
I.N.D.I.A. - 152-182
ಇತರೆ - 04-12
ಎಬಿಪಿ-ಸಿವೋಟರ್ ಎಕ್ಸಿಟ್ ಪೋಲ್ ಪ್ರಕಾರ, ಬಿಜೆಪಿ ನೇತೃತ್ವದ ಎನ್‌ಡಿಎ 353 ರಿಂದ 383 ಸ್ಥಾನಗಳನ್ನು ಗಳಿಸಬಹುದು. ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟ 152 ರಿಂದ 182 ಸ್ಥಾನ ಬರಲಿದೆ ಎಂದು ಅಂದಾಜಿಸಲಾಗಿದೆ. ಇತರರು 4 ರಿಂದ 12 ಸ್ಥಾನಗಳನ್ನು ಪಡೆಯುವ ಸಾಧ್ಯತೆಯಿದೆ.
ಮತ ಹಂಚಿಕೆ ಶೇಕಡಾವಾರು ಪ್ರಕಾರ, ಎನ್‌ಡಿಎ 45% ಮತಗಳನ್ನು ಗಳಿಸಬಹುದು. I.N.D.I.A. 40% ಮತ ಹಂಚಿಕೆ ಮತ್ತು ಇತರರು ಶೇ.15ರಷ್ಟು ಮತಗಳನ್ನು ಪಡೆಯುವ ಸಾಧ್ಯತೆ ಇದೆ.
2014, 2019ರ ಲೋಕಸಭೆ ಚುನಾವಣೆ ಫಲಿತಾಂಶ ಏನಾಗಿತ್ತು?
ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ 2014 ಮತ್ತು 2019ರ ಲೋಕಸಭೆ ಚುನಾವಣೆಯಲ್ಲಿ ಜಯಗಳಿಸಿ ಎರಡು ಬಾರಿ ಅಧಿಕಾರ ನಡೆಸಿದೆ. ಈ ಬಾರಿ 400 ಕ್ಕೂ ಅಧಿಕ ಕೇತ್ರಗಳಲ್ಲಿ ಗೆಲ್ಲುವ ಮೂಲಕ 3ನೇ ಅವಧಿಗೆ ಸರ್ಕಾರ ರಚನೆ ಮಾಡುತ್ತೇವೆ ಎಂದು ಎನ್‌ಡಿಎ ಮೈತ್ರಿಕೂಟ, ಬಿಜೆಪಿ ಪಕ್ಷದ ನಾಯಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇತ್ತ, ಎನ್‌ಡಿಎ ಮೈತ್ರಿಕೂಟವನ್ನು ಎದುರಿಸಲು ಕಾಂಗ್ರೆಸ್ ನೇತೃತ್ವದಲ್ಲಿ 26 ಪಕ್ಷಗಳನ್ನು ಸೇರಿಸಿ 'ಇಂಡಿಯಾ' ಮೈತ್ರಿಕೂಟ ರಚನೆ ಮಾಡಲಾಗಿದೆ. ಕಾಂಗ್ರೆಸ್ ಸೀಟು ಹಂಚಿಕೆ ಮಾಡಿಕೊಂಡು ವಿವಿಧ ಪಕ್ಷಗಳ ಜೊತೆ ಚುನಾವಣೆ ಎದುರಿಸಿದೆ. 400 ಕ್ಷೇತ್ರಗಳಲ್ಲಿ ಸಹ ಕಾಂಗ್ರೆಸ್ ಅಭ್ಯರ್ಥಿಗಳು ಕಣಕ್ಕಿಳಿದಿಲ್ಲ. ಕಾಂಗ್ರೆಸ್ ಮತ್ತು ಬಿಜೆಪಿ ಹೊರತುಪಡಿಸಿ ಟಿಎಂಸಿ, ಎಎಪಿ, ಸಮಾಜವಾದಿ ಪಕ್ಷ, ಎಐಎಡಿಎಂಕೆ, ಡಿಎಂಕೆ, ಜೆಡಿ(ಯು), ಬಿಎಸ್‌ಪಿ, ಟಿಡಿಪಿ, ವೈಎಸ್ಆರ್ ಕಾಂಗ್ರೆಸ್, ಶಿವಸೇವೆ, ಎನ್‌ಸಿಪಿ ತಮ್ಮ ತಮ್ಮ ಪ್ರಾಬಲ್ಯದ ರಾಜ್ಯಗಳಲ್ಲಿ ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.












Click it and Unblock the Notifications