ಇ- ಪಾಸ್ ಆಗಿ ಆರೋಗ್ಯ ಸೇತು ಆಪ್ ಬಳಸಲು ಮೋದಿ ಕರೆ
ನವದೆಹಲಿ, ಏಪ್ರಿಲ್ 12: ಕೊರೊನಾವೈರಸ್ ವಿರುದ್ಧ ನಿರ್ಣಾಯಕ ಹೋರಾಟದಲ್ಲಿ ಸಾರ್ವಜನಿಕರ ಸಹಕಾರವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮತ್ತೊಮ್ಮೆ ಬಯಸಿವೆ. ಸೋಂಕಿತರ ಮೇಲೆ ನಿಗಾ ಇಡಲು ಕೇಂದ್ರ ಸರ್ಕಾರವು ಆರೋಗ್ಯ ಆಪ್(Aarogya App) ಹೊರ ತಂದಿದೆ. ಈ ಮೊಬೈಲ್ ಅಪ್ಲಿಕೇಷನ್ ರಿಯಲ್ ಟೈಂ ಮಾಹಿತಿ ನೀಡಲಿದ್ದು, ಇದನ್ನು ಒಂದು ಪ್ರದೇಶದಿಂದ ಮತ್ತೊಂದೆಡೆಗೆ ತೆರಳಲು ಇ ಪಾಸ್ ನಂತೆ ಬಳಸಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಮುಖ್ಯಮಂತ್ರಿಗಳ ಜೊತೆಗಿನ ಸಂವಾದ ಕಾರ್ಯಕ್ರಮದಲ್ಲಿ ಆರೋಗ್ಯ ಸೇತು ಟ್ರ್ಯಾಕಿಂಗ್ ಆಪ್ ಬಳಕೆಗೆ ಹೆಚ್ಚು ಒತ್ತು ನೀಡುವಂತೆ ಸೂಚಿಸಿದರು. ಆಪ್ ಬಳಕೆ ಮೂಲಕ ಸಮರ್ಥವಾಗಿ ಕೊರೊನಾ ವಿರುದ್ಧ ಹೋರಾಡಬಹುದು ಎಂದು ಹೇಳಿದರು.
ದಕ್ಷಿಣ ಕೊರಿಯಾ ಹಾಗೂ ಸಿಂಗಪುರ ಕೂಡಾ ಇದೇ ರೀತಿ ಟ್ರ್ಯಾಕಿಂಗ್ ಅಪ್ಲಿಕೇಷನ್ ಬಳಸಿ ಹೇಗೆ ಕೊರೊನಾ ಸೋಂಕು ಹರಡದಂತೆ ನಿಯಂತ್ರಿಸಲಾಯಿತು ಎಂಬ ಅಂಕಿ ಅಂಶದ ಆಧಾರದ ಮೇಲೆ ಆರೋಗ್ಯ ಸೇತು ಆಪ್ ರೂಪಿಸಲಾಗಿದೆ. ಇದನ್ನು ಪ್ರಮುಖ ಅಸ್ತ್ರವಾಗಿ ಬಳಸಬೇಕಿದೆ ಎಂದು ಮೋದಿ ಹೇಳಿದರು. ಇದೇ ಸಂದರ್ಭದಲ್ಲಿ ಆರೋಗ್ಯ ಸೇತು ಆಪ್ಲಿಕೇಷನ್ ಬಳಸಿ ಒಂದು ಕಡೆಯಿಂದ ಇನ್ನೊಂದೆಡೆಗೆ ತೆರಳಬಹುದು. ಇದನ್ನು ಇ ಪಾಸ್ ನಂತೆ ಪರಿಗಣಿಸುವಂತೆ ಪ್ರಧಾನಿ ಸಚಿವಾಲಯವು ಸೂಚಿಸಿದೆ.

ಸೋಂಕು ಹರಡದಂತೆ ತಡೆಗಟ್ಟಲು ಕ್ರಮ
ಕೊರೊನಾವೈರಸ್ ಸೋಂಕು, ಹೋಂ ಕ್ವಾರಂಟೈನ್ ಇರುವವರು ನಡೆದುಕೊಳ್ಳಬೇಕಾದ ರೀತಿ ನೀತಿ, ಲಾಕ್ಡೌನ್ ನಿಯಮದ ಬಗ್ಗೆ ಫೇಸ್ಬುಕ್, ವಾಟ್ಸಾಪ್, ಟೆಲಿಗ್ರಾಂ, ಇನ್ಸ್ಟಾಗ್ರಾಂ, ಟಿಕ್ ಟಾಕ್ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಈಗ ಮತ್ತೊಂದು ಆಂಡ್ರಾಯ್ಡ್ ಆಪ್ ನಿಮ್ಮ ಮುಂದಿಡಲಾಗಿದೆ. ಈ ಮೂಲಕ ಸೋಂಕಿತ ವ್ಯಕ್ತಿಗಳನ್ನು ಟ್ರ್ಯಾಕ್ ಮಾಡಿ, ಆರೊಗ್ಯವಂತರಿಗೆ ರೋಗ ಹರಡದಂತೆ ತಡೆಗಟ್ಟಲು ಕ್ರಮ ಕೈಗೊಳ್ಳಲಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಹೇಳಿದೆ.

ಚಾಟ್ ಬಾಟ್ ಮಾದರಿ ನೆರವು
ವಾಟ್ಸಾಪ್ ಹಾಗೂ ಫೇಸ್ಬುಕ್ ಮೆಸೇಂಜರ್ ಆಪ್ ಮೂಲಕ ರಿಯಲ್ ಟೈಂನಲ್ಲಿ ಚಾಟ್ ಬಾಟ್ ಬಳಸಿ ಮಾಹಿತಿ ಪಡೆಯುವ ಸೌಲಭ್ಯ ಸದ್ಯ ಬಳಕೆಯಲ್ಲಿದೆ. ಆಂಡ್ರಾಯ್ಡ್ ಅಪ್ಲಿಕೇಷನ್ ನಲ್ಲಿ ಅಪೋಲೋ ಆಸ್ಪತ್ರೆಯ ಎಐ ಆಧಾರಿತ ಚಾಟ್ ಬಾಟ್ ಮಾದರಿಯಲ್ಲಿ ಕನ್ನಡ ಭಾಷೆಯಲ್ಲೇಮಾಹಿತಿ ಹಾಗೂ ನೆರವು ಪಡೆದುಕೊಳ್ಳಬಹುದು. ಈ ಮೂಲಕ ಕೊವಿಡ್19 ಸೋಂಕಿನ ಬಗ್ಗೆ ಇರುವ ಸಂದೇಹ ಪರಿ ಹರಿಸಿಕೊಳ್ಳಬಹುದು.

ರೋಗಿಗಳ ಚಲನವಲನದ ಮೇಲೆ ನಿಗಾ
ಈ ಆಪ್ ಮೂಲಕ ಕೊವಿಡ್19 ಪಾಸಿಟಿವ್ ರೋಗಿಗಳ ಚಲನವಲನಗಳನ್ನು ರಿಯಲ್ ಟೈಮಲ್ಲಿ ಟ್ರ್ಯಾಕ್ ಮಾಡಬಹುದು. ಕೊರೊನಾ ಸೋಂಕಿತರು, ಹೋಂ ಕ್ವಾರಂಟೈನ್ ಆಗಿರುವವರು ಎಲ್ಲೆಲ್ಲಿದ್ದಾರೆ ಎಂದು ಗುರುತಿಸಬಹುದು. ಒಂದು ವೇಳೆ ಸೋಂಕಿತ ವ್ಯಕ್ತಿಯೇನಾದರೂ ಆರೋಗ್ಯವಂತರ ಬಳಿಗೆ(1 ಮೀಟರ್ ಅಂತರ) ಸುಳಿದರೆ ಅಲರ್ಟ್ ನೀಡಲಿದೆ. ಗೂಗಲ್ ಪ್ಲೇಸ್ಟೋರಿನಲ್ಲಿ NIC eGov Mobile AppsTools ಅಭಿವೃದ್ಧಿಪಡಿಸಿರುವ Aarogya Setu ಆಪ್ ಮಾತ್ರ ಡೌನ್ಲೋಡ್ ಮಾಡಿಕೊಳ್ಳಿ.

ಮೈಗೋವ್ ಕೊರೊನಾ ಸಹಾಯಕೇಂದ್ರ
ಮೈಗೋವ್ ಕೊರೊನಾ ಸಹಾಯಕೇಂದ್ರ ವಾಟ್ಸಾಪ್ ಚಾಟ್‌ಬಾಟ್ ಬಿಟ್ಟು ಕೇಂದ್ರ ಸಹಾಯವಾಣಿ ಮತ್ತು ಆಯಾ ರಾಜ್ಯಗಳ ಸಹಾಯವಾಣಿ ಕೇಂದ್ರಗಳು ಕಾರ್ಯರೂಪದಲ್ಲಿದೆ ಸಹಾಯವಾಣಿ ಸಂಖ್ಯೆ + 91-11-23978046ಗೆ ಕರೆ ಮಾಡಿ ನೊವೆಲ್ ಕೊರೊನಾ ವೈರಾಣು ಕುರಿತ ಮಾಹಿತಿ, ಸಹಾಯವನ್ನು ಪಡೆದುಕೊಳ್ಳಬಹುದಾಗಿದೆ. Karnataka Health Dept - 080-46848600. ರಾಜ್ಯ ಸಹಾಯವಾಣಿ - 104 Helpline - 080-6669200 ರಾಷ್ಟ್ರೀಯ ಸಹಾಯವಾಣಿ - 1075.
ಬೆಂಗಳೂರು ನಗರದಲ್ಲಿ ಅಗತ್ಯ ವಸ್ತುಗಳನ್ನು ಮನೆ ಬಾಗಿಲಿಗೆ ತಲುಪಿಸಲು ಬಿಬಿಎಂಪಿ ಸಹಾಯವಾಣಿ ಆರಂಭಿಸಿದೆ. 1926 ಅಂಗಡಿಗಳನ್ನು ಪಟ್ಟಿ ಮಾಡಲಾಗಿದೆ. ಕರೆ, ವಾಟ್ಸಪ್ ಮೂಲಕ ಬೇಡಿಕೆ ಸಲ್ಲಿಸಬಹುದು. ಸಹಾಯವಾಣಿ ಸಂಖ್ಯೆ 080-61914960











Click it and Unblock the Notifications