ಮಧ್ಯಪ್ರದೇಶದಲ್ಲಿ 230 ಸ್ಥಾನಗಳಿಗೂ ಎಎಪಿಯಿಂದ ಸ್ಪರ್ಧೆ
ಇಂದೋರ್, ಸೆಪ್ಟೆಂಬರ್ 24: ಮಧ್ಯಪ್ರದೇಶದಲ್ಲಿ ತನ್ನ ಅಸ್ತಿತ್ವ ಬೆಳೆಸಿಕೊಳ್ಳಲು ಹವಣಿಸುತ್ತಿರುವ ಆಮ್ ಆದ್ಮಿ ಪಕ್ಷ (ಎಎಪಿ)ವು ಹೊಸ ಹುರುಪಿನೊಂದಿಗೆ ವಿಧಾನಸಭೆ ಚುನಾವಣೆಗೆ ಸಜ್ಜಾಗುತ್ತಿದೆ.
ಮಧ್ಯಪ್ರದೇಶದ ಎಲ್ಲಾ 230 ಸ್ಥಾನಗಳಿಗೆ ಸ್ಪರ್ಧಿಸಲಿದ್ದು, ಶೇ 80 ಟಿಕೆಟ್ ಗಳನ್ನು ಹೊಸಬರಿಗೆ ನೀಡಲು ನಿರ್ಧರಿಸಲಾಗಿದೆ ಎಂದು ಎಎಪಿ ವಕ್ತಾರರು ಹೇಳಿದ್ದಾರೆ.
2012ರಲ್ಲಿ ಸ್ಥಾಪನೆಯಾದ ಎಎಪಿ, 2013ರ ಮಧ್ಯಪ್ರದೇಶ ಚುನಾವಣೆಯಲ್ಲಿ ಪಾಲ್ಗೊಂಡಿರಲಿಲ್ಲ. 2014ರ ಲೋಕಸಭೆ ಚುನಾವಣೆಯಲ್ಲಿ ಕಳಪೆ ಪ್ರದರ್ಶನ ನೀಡಿ, 29 ಸ್ಥಾನಗಳನ್ನು ಕಳೆದುಕೊಂಡಿತ್ತು. ಅನೇಕ ಅಭ್ಯರ್ಥಿಗಳು ಠೇವಣಿ ಕೂಡಾ ಕಳೆದುಕೊಂಡರು.

ಮಧ್ಯಪ್ರದೇಶದ ವಿಧಾನಸಭೆ ಚುನಾವಣೆಯಲ್ಲಿ ಮಾಜಿ ಯೋಧರು, ಇಂಜಿನಿಯರ್, ಮ್ಯಾನೇಜರ್, ಡಾಕ್ಟರ್, ಯುವ ವೃತ್ತಿಪರರನ್ನು ಕಣಕ್ಕಿಳಿಸಲಾಗುವುದು ಎಂದು ಎಎಪಿಯ ಮುಖ್ಯಮಂತ್ರಿ ಅಭ್ಯರ್ಥಿ, ರಾಜ್ಯಾಧ್ಯಕ್ಷ ಅಲೋಕ್ ಅಗರವಾಲ್ ಹೇಳಿದ್ದಾರೆ.
ಈಗಾಗಲೆ 119 ಸ್ಥಾನಗಳಿಗೆ ಹೆಸರುಗಳನ್ನು ಅಂತಿಮಗೊಳಿಸಲಾಗಿದೆ. ಮಧ್ಯಪ್ರದೇಶದಲ್ಲಿ ಆಡಳಿತಾರೂಢ ಬಿಜೆಪಿ ವಿರೋಧಿ ಅಲೆ ಇದೆ. ಕಾಂಗ್ರೆಸ್ ಪರ್ಯಾಯ ಶಕ್ತಿಯಾಗದೆ ಸೋತಿದೆ. ಮೂರನೇ ಶಕ್ತಿಯಾಗಿ ಎಎಪಿ ಹೊರ ಹೊಮ್ಮಲಿದೆ ಎಂದು ಹೇಳಿದರು.












Click it and Unblock the Notifications