Breaking: 3 ವರ್ಷಗಳ ಬಳಿಕ ಪಾಕ್‌ನಲ್ಲಿ ಭಾರತೀಯ ಸಿನಿಮಾ ಬಿಡುಗಡೆ!?
ನವದೆಹಲಿ, ಆಗಸ್ಟ್ 12: ಗುರುವಾರ (ಆಗಸ್ಟ್ 11) ಬಿಡುಗಡೆಯಾಗಿ ದೇಶದೆಲ್ಲೆಡೆ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಅಮೀರ್ ಖಾನ್ ಅಭಿನಯದ ಬಾಲಿವುಡ್ ಚಲನಚಿತ್ರ 'ಲಾಲ್ ಸಿಂಗ್ ಚಡ್ಡಾ' ಪಾಕಿಸ್ತಾನದಲ್ಲಿಯೂ ಬಿಡುಗಡೆಯಾಗಲಿದೆ.
ಪಾಕಿಸ್ತಾನದ ಸಿನೆಪೆಕ್ಸ್ ಮೀಡಿಯಾ ಗ್ರೂಪ್ ದೇಶಾದ್ಯಂತ 'ಲಾಲ್ ಸಿಂಗ್ ಚಡ್ಡಾ' ಪ್ರದರ್ಶನಕ್ಕೆ ಕೋರಿ ನಿರಾಕ್ಷೇಪಣಾ ಪ್ರಮಾಣಪತ್ರವನ್ನು (NOC) ನೀಡುವಂತೆ ಮಾಹಿತಿ ಸಚಿವಾಲಯವನ್ನು ಸಂಪರ್ಕಿಸಿದೆ.
ಸಿನೆಪೆಕ್ಸ್ ಮೀಡಿಯಾ ಗ್ರೂಪ್ ನಿರಾಕ್ಷೇಪಣಾ ಪ್ರಮಾಣಪತ್ರವನ್ನು (ಎನ್‌ಒಸಿ) ಪಡೆದರೆ 2019 ರ ನಂತರ ಮೊದಲ ಬಾರಿಗೆ ಪಾಕಿಸ್ತಾನದ ಚಿತ್ರಮಂದಿರಗಳಲ್ಲಿ ಭಾರತೀಯ ಚಿತ್ರ ಬಿಡುಗಡೆಯಾಗಲಿದೆ.

2019 ರಲ್ಲಿ, ಬಿಜೆಪಿ ನೇತೃತ್ವದ ಕೇಂದ್ರ ಸರಕಾರವು ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಹಿಂತೆಗೆದುಕೊಂಡು, ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿದ ನಂತರ ಉಭಯ ದೇಶಗಳ ನಡುವೆ ಪರಿಸ್ಥಿತಿ ಉದ್ವಿಗ್ನಗೊಂಡಿತ್ತು. ಆಗಿನ ಪಾಕಿಸ್ತಾನ ಸರ್ಕಾರವು ಪಾಕಿಸ್ತಾನದಲ್ಲಿ ಭಾರತೀಯ ಸಿನಿಮಾಗಳ ಪ್ರದರ್ಶನವನ್ನು ನಿಷೇಧಿಸಿತು.
ಕೇಂದ್ರ ಸರಕಾರ 2019 ರ ಆಗಸ್ಟ್ 5 ರಂದು ಸಂವಿಧಾನದ 370 ನೇ ವಿಧಿಯನ್ನು ರದ್ದುಗೊಳಿಸಿದ ನಂತರ ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧವು ಹದಗೆಟ್ಟಿತ್ತು. ಭಾರತದ ನಿರ್ಧಾರಕ್ಕೆ ಪಾಕಿಸ್ತಾನದಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಪಾಕಿಸ್ತಾನ ರಾಜತಾಂತ್ರಿಕ ಸಂಬಂಧಗಳನ್ನು ಮೊಟಕುಗೊಳಿಸಿ, ಭಾರತೀಯ ರಾಯಭಾರಿಯನ್ನು ಹೊರಹಾಕಿತ್ತು.

ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದಾಗಿನಿಂದ, ಪಾಕಿಸ್ತಾನದಲ್ಲಿ ಯಾವುದೇ ಬಾಲಿವುಡ್ ಸಿನಿಮಾಗಳು ಬಿಡುಗಡೆಯಾಗಿಲ್ಲ. ಸದ್ಯಕ್ಕೆ ಅಲ್ಲಿನ ಸಿನಿಪ್ಲೆಕ್ಸ್‌ಗಳು ಹೆಚ್ಚಾಗಿ ಹಾಲಿವುಡ್ ಮತ್ತು ಪಾಕಿಸ್ತಾನಿ ಚಲನಚಿತ್ರಗಳ ಬಿಡುಗಡೆಯ ಮೇಲೆ ಅವಲಂಬಿಸಿವೆ.
'ಲಾಲ್ ಸಿಂಗ್ ಚಡ್ಡಾ' ಚಿತ್ರವನ್ನು ಪ್ಯಾರಾಮೌಂಟ್ ಪಿಕ್ಚರ್ಸ್ ಜಾಗತಿಕವಾಗಿ ವಿತರಿಸುತ್ತಿರುವುದರಿಂದ, ಸಿನಿಪಾಕ್ಸ್ ಮೀಡಿಯಾ ಗ್ರೂಪ್ ಪಾಕಿಸ್ತಾನಕ್ಕೆ ಸಿನಿಮಾವನ್ನು ಪ್ರದರ್ಶಿಸಲು ನಿರ್ಧರಿಸಿದೆ ಎಂದು ಮೂಲವೊಂದು ತಿಳಿಸಿದೆ. ಸಿನಿಪಾಕ್ಸ್ ಮೀಡಿಯಾ ಗ್ರೂಪ್‌ನ ಜನರಲ್ ಮ್ಯಾನೇಜರ್ ಸಾದ್ ಬೇಗ್ ಅವರು ಎನ್‌ಒಸಿ ಕೇಳಿರುವುದನ್ನು ಖಚಿತಪಡಿಸಿದ್ದಾರೆ.

"ಪಾಕಿಸ್ತಾನದಾದ್ಯಂತ ಚಿತ್ರದ ಬಿಡುಗಡೆಗೆ ನಾವು ಎನ್‌ಒಸಿ ಕೇಳಿದ್ದೇವೆ. ಸಚಿವಾಲಯದಿಂದ ನಮಗೆ ಒಳ್ಳೆಯ ಸುದ್ದಿ ಸಿಗುತ್ತದೆ ಎಂದು ನಾವು ಅಂದುಕೊಂಡಿದ್ದೇವೆ" ಎಂದು ಸಾದ್ ಬೇಗ್ ಹೇಳಿದರು.
ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ (CBFC) ಮತ್ತು ಸಿಂಧ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್‌ನ ಪ್ರತಿನಿಧಿಗಳು ಯಾವುದೇ ವಿವರಗಳನ್ನು ಹಂಚಿಕೊಂಡಿಲ್ಲ. ಆದರೆ ಮಾಹಿತಿ ಸಚಿವಾಲಯದ ಮೂಲಗಳು ಪಾಕಿಸ್ತಾನದಲ್ಲಿ ಚಲನಚಿತ್ರವನ್ನು ಬಿಡುಗಡೆ ಮಾಡಲು NOC ಮನವಿಯನ್ನು ಪರಿಗಣಿಸಲಾಗುತ್ತಿದೆ ಎಂದು ಹೇಳಿದರು.
ಅಮೀರ್ ಖಾನ್ ಮತ್ತು ಕರೀನಾ ಕಪೂರ್ ಖಾನ್ ಮುಖ್ಯ ಪಾತ್ರಗಳಲ್ಲಿ ನಟಿಸಿರುವ 'ಲಾಲ್ ಸಿಂಗ್ ಚಡ್ಡಾ', ಟಾಮ್ ಹ್ಯಾಂಕ್ಸ್ ಅವರ 1994 ರ ಹಾಲಿವುಡ್ ಚಲನಚಿತ್ರ 'ಫಾರೆಸ್ಟ್ ಗಂಪ್' ನ ರಿಮೇಕ್ ಆಗಿದೆ.












Click it and Unblock the Notifications