Manmohan Singh: ಪಾಕಿಸ್ತಾನದಲ್ಲಿ ಒಂದು ಶಾಲೆಗೆ ಮನಮೋಹನ್ ಸಿಂಗ್ ಹೆಸರಿಡಲು ಕಾರಣವೇನು?
ಭಾರತದ ಮಾಜಿ ಪ್ರಧಾನಿ ಮತ್ತು ಅರ್ಥಶಾಸ್ತ್ರಜ್ಞ, ಭಾರತದ ಉದಾರೀಕರಣದ ಪಿತಾಮಹ ಮನಮೋಹನ್ ಸಿಂಗ್ ನಿನ್ನೆ( ಡಿಸೆಂಬರ್ 26)ರಂದು ವಿಧಿವಶರಾಗಿದ್ದಾರೆ. ಬಡ ಕುಟುಂಬದಲ್ಲಿ ಜನಿಸಿದ ಮನಮೋಹನ್ ಸಿಂಗ್, ದೇಶವನ್ನೇ ಆಳಿರುವುದು ಇಂದು ಇತಿಹಾಸ. ಭಾರತ ಮಾತ್ರವಲ್ಲದೇ ದೇಶ ವಿದೇಶಗಳಲ್ಲಿಯೂ ಖ್ಯಾತಿ ಪಡೆದಿರುವ ಮನಮೋಹನ್ ಸಿಂಗ್ ಅವರ ಹೆಸರಿನಲ್ಲಿ ಪಾಕಿಸ್ತಾನದಲ್ಲಿ ಒಂದು ಶಾಲೆ ಇದೆ ಎಂದರೆ ನೀವು ನಂಬಲೇಬೇಕು.
ಡಾ. ಮನಮೋಹನ್ ಸಿಂಗ್ ಅವರ ಮೂಲ ಪಾಕಿಸ್ತಾನ. 1932 ಸೆಪ್ಟೆಂಬರ್ 26ರಂದು ಡಾ.ಮನಮೋಹನ್ ಸಿಂಗ್, ಪಾಕಿಸ್ತಾನದಲ್ಲಿರುವ ಪಂಜಾಬ್ನ ಗಾವ್ ಎಂಬ ಕುಗ್ರಾಮದಲ್ಲಿ ಜನಿಸಿದರು. ಈ ಹಳ್ಳಿಯಲ್ಲಿ ಅಂದು ಯಾವ ಮೂಲಭೂತ ಸೌಕರ್ಯವೂ ಇರಲಿಲ್ಲ. ಬಾಲ್ಯದಲ್ಲಿಯೇ ತಾಯಿಯನ್ನು ಕಳೆದುಕೊಂಡ ಮನಮೋಹನ್ ಸಿಂಗ್ ಸುಮಾರು ಹನ್ನೆರಡು ವರ್ಷಗಳ ಕಾಲ ಗಾವ್ ಗ್ರಾಮದಲ್ಲಿ ತಮ್ಮ ಅಜ್ಜಿಯ ಜೊತೆಗೆ ಬಾಲ್ಯ ಕಳೆದರು. ತಮ್ಮ ಪ್ರಾಥಮಿಕ ಶಿಕ್ಷಣವನ್ನು ಪಾಕಿಸ್ತಾನದ ಗಾವ್ ಹಳ್ಳಿಯಲ್ಲಿಯೇ ಕಳೆದರು.

ಇನ್ನು ಮನಮೋಹನ್ ಸಿಂಗ್ಗೆ 13 ವರ್ಷ ತುಂಬುತ್ತಿದ್ದಂತೆಯೇ ಅವರ ಕುಟುಂಬ ಭಾರತಕ್ಕೆ ವಲಸೆ ಬಂದರು. ಅಂದರೆ ದೇಶ ವಿಭಜನೆಯ ಬಳಿಕ ಕುಟುಂಬ ಭಾರತದ ಅಮೃತಸರಕ್ಕೆ ವಲಸೆ ಬಂದರು. ಬಳಿಕ ಭಾರತದಲ್ಲಿ ಶಿಕ್ಷಣ ಮುಂದುವರಿಸಿದರು. ಇನ್ನು ಬಾಲ್ಯದಲ್ಲಿ ಶಿಕ್ಷಣ ಪಡೆಯಲು ಅನೇಕ ಕಷ್ಟಗಳನ್ನು ಕಂಡಿರುವ ಮನಮೋಹನ್ ಸಿಂಗ್ ಪಾಕಿಸ್ತಾನದ ಗಾವ್ ಹಳ್ಳಿಯಲ್ಲಿದ್ದಾಗ ವಿದ್ಯುತ್ ಸಂಪರ್ಕ ಇರದೇ ಬೀದಿ ದೀಪದಲ್ಲಿ ಅಭ್ಯಾಸ ಮಾಡುತ್ತಿದ್ದರು. ಅಲ್ಲದೇ ದೂರದ ಶಾಲೆಗೆ ನಡೆದುಕೊಂಡೇ ಹೋಗಬೇಕಿತ್ತು.
ಹೀಗೆ ಬಾಲ್ಯದಿಂದಲೇ ಬಡತನ ಹಾಗೂ ಕಷ್ಟಗಳನ್ನು ಕಂಡ ಬಾಲಕ ಮುಂದೊಂದು ದಿನ ಭಾರತದಂತಹ ದೇಶಕ್ಕೆ ಪ್ರಧಾನಿಯಾದಾಗ ಅವರು ಹೂಟ್ಟೂರಾದ ಪಾಕಿಸ್ತಾನದಲ್ಲಿರುವ ಪಂಜಾಬ್ನ ಗಾವ್ ಹಳ್ಳಿಯಲ್ಲಿ ಸಂಭ್ರಮ ಮುಗಿಲು ಮುಟ್ಟಿತ್ತು. ಅಷ್ಟೇ ಅಲ್ಲದೇ ಮನಮೋಹನ್ ಸಿಂಗ್ ಅವರು ಪ್ರಾಥಮಿಕ ಶಿಕ್ಷಣ ಮುಗಿಸಿದ ಶಾಲೆಗೆ ಅವರ ಹೆಸರನ್ನೇ ಇಡಲಾಯಿತು ಕೂಡ. ಹೀಗಾಗಿ ಇಂದಿಗೂ ಪಾಕಿಸ್ತಾನದಲ್ಲಿರುವ ಪಂಜಾಬ್ನಲ್ಲಿ ಮನಮೋಹನ್ ಸಿಂಗ್ ಅವರ ಹೆಸರಿನ ಶಾಲೆಯೊಂದಿದೆ ಎಂದು ತಿಳಿದು ಬಂದಿದೆ.
ಮನಮೋಹನ್ ಸಿಂಗ್ ಕೊನೆ ಘಳಿಗೆ
ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರಿಗೆ 92 ವರ್ಷ ವಯಸ್ಸಾಗಿದ್ದು, ವಯೋಸಹಜವಾಗಿ ಅವರ ಆರೋಗ್ಯ ಸ್ಥಿತಿ ನಿನ್ನೆ ರಾತ್ರಿ ಗಂಭೀರವಾಗಿತ್ತು. ಕೂಡಲೇ ಅವರನ್ನು ದೆಹಲಿಯ ಏಮ್ಸ್ಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆದರೆ ದುರಾದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೇ ಅವರು ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ.












Click it and Unblock the Notifications