ಪ್ರತಾಪ್ ಸಿಂಹ ಹೆಸರಿನಲ್ಲಿ ಪಾಸ್ ಪಡೆದು, ಲೋಕಸಭಾ ಕಲಾಪಕ್ಕೆ ನುಗ್ಗಿದ ಅಪರಿಚಿತ ವ್ಯಕ್ತಿ: ಏನಿದು ಆರೋಪ?
ದೆಹಲಿ, ಡಿಸೆಂಬರ್ 13 : ದೆಹಲಿ ಸಂಸತ್ ಭವನದಲ್ಲಿ ಭಾರಿ ಭದ್ರತಾ ವೈಫಲ್ಯ ನಡೆದಿದ್ದು, ಇಬ್ಬರು ಅಪರಿಚಿತ ವ್ಯಕ್ತಿಗಳು ಸಂಸತ್ ಭವನಕ್ಕೆ ನುಗ್ಗಿದ ಘಟನೆ ಆತಂಕವನ್ನ ಹುಟ್ಟಿಸಿದೆ. ಪ್ರೇಕ್ಷಕರ ಗ್ಯಾಲರಿಯಿಂದ ನುಗ್ಗಿದ ಇಬ್ಬರು ಅಪರಿಚಿತರು ಸದನದ ಒಳಗ್ಗೆ ನುಗ್ಗಿ ಅಶ್ರುವಾಯು ಸಿಡಿಸಿದ ಘಟನೆ ನಡೆದಿದೆ.
ಹೌದು, ಇಬ್ಬರು ಅಪರಿಚಿತ ವ್ಯಕ್ತಿಗಳು ಪ್ರೇಕ್ಷಕರ ಗ್ಯಾಲರಿಯಿಂದ ಜಿಗಿದಿದ್ದು, ಈ ಯುವಕರು ಸಂಸದ ಪ್ರತಾಪ್ ಸಿಂಹ ಅವರ ಹೆಸರಿನಲ್ಲಿ ಪಾಸ್ ಪಡೆದಿದ್ದು, ನುಗ್ಗಿದ್ದಾರೆ ಎಂದು ಡ್ಯಾನಿಶ್ ಆಲಿ ಆರೋಪಿಸಿದ್ದಾರೆ. ಅನಿಲ ಹೊರಸೂಸುವಂಥಾ ಏನೋ ವಸ್ತು ಎಸೆದರು, ಅವರನ್ನು ಸಂಸದರು ಹಿಡಿದರು. ಆಮೇಲೆ ಭದ್ರತಾ ಸಿಬ್ಬಂದಿಗಳು ಹೊರಗೆ ಕರೆತಂದರು.

ಲೋಕಸಭೆಯ ಒಳಗೆ ಪ್ರವೇಶಿಸಿದ ವ್ಯಕ್ತಿಯ ಹೆಸರು ಸಾಗರ್ ಎಂದು ಬಿಎಸ್ಪಿ ಸಂಸದ ಡ್ಯಾನಿಶ್ ಅಲಿ ಮಾಹಿತಿ ನೀಡಿದ್ದಾರೆ. ಅಲ್ಲದೇ ಈ ವ್ಯಕ್ತಿ ಮೈಸೂರಿನ ಸಂಸದರ ಅತಿಥಿ ಎಂದು ಹೇಳಿ ಸಂಸತ್ ಪ್ರವೇಶಿಸಿದ್ದರು, ಪ್ರತಾಪ್ ಸಿಂಹ ಅವರ ಹೆಸರಿನಲ್ಲಿ ಪಾಸ್ ಪಡೆದು ಬಂದಿದ್ದಾರೆ ಎಂದು ಡ್ಯಾನಿಶ್ ಅಲಿ ಹೇಳಿದ್ದಾರೆ.
ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಅವರು ಭದ್ರತಾ ಉಲ್ಲಂಘನೆ ಮತ್ತು ಸದನದಲ್ಲಿ ಗದ್ದಲದ ಘಟನೆಯ ಕುರಿತು ಮಾತನಾಡಿ, ಇಬ್ಬರು ಯುವಕರು ಗ್ಯಾಲರಿಯಿಂದ ಜಿಗಿದರು ಮತ್ತು ಅವರಿಂದ ಅನಿಲ ಹೊರಸೂಸುವಿಕೆಯಾಗುವ ಏನನ್ನೋ ಎಸೆಯಲಾಯಿತು. ಅವರನ್ನು ಸಂಸದರು ಹಿಡಿದರು, ಅವರನ್ನು ಭದ್ರತಾ ಸಿಬ್ಬಂದಿಗಳು ಹೊರಗೆ ಕರೆತಂದರು. ಸದನವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಯಿತು. ಇದು ಖಂಡಿತವಾಗಿಯೂ ಭದ್ರತಾ ಲೋಪವಾಗಿದೆ ಎಂದು ಹೇಳಿದರು.
ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ಮಾತನಾಡಿ, ಇಬ್ಬರು 20 ವರ್ಷ ವಯಸ್ಸಿನ ಯುವಕರು ಇದ್ದಕ್ಕಿದ್ದಂತೆ ಸಂದರ್ಶಕರ ಗ್ಯಾಲರಿಯಿಂದ ಸದನಕ್ಕೆ ಜಿಗಿದರು ಮತ್ತು ಅವರ ಕೈಯಲ್ಲಿ ಡಬ್ಬಿಗಳನ್ನು ಹೊಂದಿದ್ದರು. ಈ ಡಬ್ಬಿಗಳು ಹಳದಿ ಹೊಗೆಯನ್ನು ಹೊರಸೂಸುತ್ತಿದ್ದವು. ಅವರಲ್ಲಿ ಒಬ್ಬರು ಸ್ಪೀಕರ್ ಕುರ್ಚಿಯತ್ತ ಓಡಲು ಪ್ರಯತ್ನಿಸುತ್ತಿದ್ದರು. ಕೆಲವು ಘೋಷಣೆಗಳನ್ನು ಕೂಗಿದರು. ಹೊಗೆಯು ವಿಷಕಾರಿಯಾಗಿರಬಹುದು. ಇದು ವಿಶೇಷವಾಗಿ ಡಿಸೆಂಬರ್ 13 ರಂದು 2001 ರಲ್ಲಿ ಸಂಸತ್ತಿನ ಮೇಲೆ ದಾಳಿಯಾದ ದಿನದಂದು ಗಂಭೀರವಾದ ಭದ್ರತಾ ಉಲ್ಲಂಘನೆಯಾಗಿದೆ ಎಂದು ಕಿಡಿಕಾರಿದರು.












Click it and Unblock the Notifications