8th Pay Commission: 8ನೇ ವೇತನ ಆಯೋಗ ಕೇಂದ್ರ ಸರ್ಕಾರಿ ನೌಕರರಿಗೆ ಅಪ್‌ಡೇಟ್
ನವದೆಹಲಿ, ಮಾರ್ಚ್ 18: ಕೇಂದ್ರ ಸರ್ಕಾರಿ ನೌಕರರಿಗೆ 2025-26ನೇ ಸಾಲಿನ ಬಜೆಟ್‌ಗೂ ಮೊದಲೇ ಕೇಂದ್ರ ಸರ್ಕಾರ ಸಿಹಿಸುದ್ದಿಯನ್ನು ನೀಡಿತ್ತು. ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ವೇತನ, ಭತ್ಯೆಗಳ ಪರಿಷ್ಕರಣೆ ಮಾಡಲು 8ನೇ ವೇತನ ಆಯೋಗವನ್ನು ರಚನೆ ಮಾಡುವುದಾಗಿ ಹೇಳಿತ್ತು. ಆದರೆ ಬಜೆಟ್ ಭಾಷಣದಲ್ಲಿ ಫೆಬ್ರವರಿ 1ರಂದು ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಈ ಕುರಿತು ಯಾವುದೇ ಉಲ್ಲೇಖವನ್ನು ಮಾಡಿರಲಿಲ್ಲ.
ಲೋಕಸಭೆ ಬಜೆಟ್ ಅಧಿವೇಶನ ನಡೆಯುತ್ತಿದ್ದು ಸಂಸದರಾದ ಕಂಗನಾ ರಣಾವತ್ ಮತ್ತು ಸಜ್ದಾ ಅಹ್ಮದ್ 8ನೇ ವೇತನ ಆಯೋಗ ರಚನೆ ಕುರಿತು ಲೋಕಸಭೆಯಲ್ಲಿ ಪ್ರಶ್ನೆ ಮಾಡಿದ್ದರು. ಸಚಿವೆ ನಿರ್ಮಲಾ ಸೀತಾರಾಮನ್ ಈ ಪ್ರಶ್ನೆಗೆ ಉತ್ತರವನ್ನು ನೀಡಿದ್ದಾರೆ. ಕೇಂದ್ರ ಸರ್ಕಾರಿ ನೌಕರರ ಬಹು ದಿನದ ಬೇಡಿಕೆಯಾದ 8ನೇ ವೇತನ ಆಯೋಗ ರಚನೆ ಕುರಿತು ಮಾಹಿತಿಯನ್ನು ಕೊಟ್ಟಿದ್ದಾರೆ.

8ನೇ ವೇತನ ಆಯೋಗ ರಚನೆ ಅಪ್‌ಡೇಟ್: ಲೋಕಸಭೆಗೆ ನೀಡಿದ ಉತ್ತರದಲ್ಲಿ ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್, "ಕೇಂದ್ರ ಸರ್ಕಾರ 8ನೇ ವೇತನ ಆಯೋಗ ರಚನೆ ಮಾಡಲು ನಿರ್ಧರಿಸಿದೆ. ಈ ನಿಟ್ಟಿನಲ್ಲಿ ಸೂಕ್ತ ಸಮಯದಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ" ಎಂದು ಹೇಳಿದ್ದಾರೆ.
"8ನೇ ವೇತನ ಆಯೋಗದ ಶಿಫಾರಸುಗಳನ್ನು ಪಡೆದು ಅಂಗೀಕರಿಸಿದ ಬಳಿಕವೇ ಅದರ ಪರಿಣಾಮವನ್ನು ಮೌಲ್ಯ ಮಾಪನ ಮಾಡಬಹುದು. ರಕ್ಷಣಾ ಸಚಿವಾಲಯ, ಗೃಹ ವ್ಯವಹಾರಗಳ ಸಚಿವಾಲಯ, ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಮತ್ತು ರಾಜ್ಯಗಳು ಸೇರಿದಂತೆ ಪ್ರಮುಖ ಪಾಲುದಾರರಿಂದ ನಿಯಮಗಳ ಕುರಿತು ಸಲಹೆಗಳನ್ನು ಕೋರಲಾಗಿದೆ" ಎಂದು ಉತ್ತರಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಜನವರಿಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ 8ನೇ ವೇತನ ಆಯೋಗದ ರಚನೆಗೆ ಕೇಂದ್ರ ಸರ್ಕಾರ ಅಧಿಕೃತ ಒಪ್ಪಿಗೆಯನ್ನು ನೀಡಿದೆ. ಇದು ಸುಮಾರು 50 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 65 ಲಕ್ಷ ಪಿಂಚಣಿದಾರರಿಗೆ ಸಂತಸ ತಂದಿತ್ತು. ಆದರೆ ಆಯೋಗ ಯಾವಾಗ ರಚನೆಯಾಗಲಿದೆ? ಎಂಬ ಕುರಿತು ಯಾವುದೇ ಮಾಹಿತಿ ನೀಡಿಲ್ಲ.
ಸದ್ಯ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು 7ನೇ ಕೇಂದ್ರ ವೇತನ ಆಯೋಗದ ಶಿಫಾರಸಿನ ಅನ್ವಯ ವೇತನ, ಭತ್ಯೆ, ಪಿಂಚಣಿ ಪಡೆಯುತ್ತಿದ್ದಾರೆ. ಜನವರಿ 1, 2026 ರಿಂದ 8ನೇ ವೇತನ ಆಯೋಗದ ಶಿಫಾರಸು ಜಾರಿಯಾಗಲಿದೆ ಎಂದು ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಕೇಂದ್ರ ಸರ್ಕಾರಿ ನೌಕರರ ವೇತನ ಹೆಚ್ಚಳ ಮಾಡಲು ಸಾಮಾನ್ಯವಾಗಿ ಪ್ರತಿ 10 ವರ್ಷಗಳಿಗೊಮ್ಮೆ ಹೊಸ ವೇತನ ಆಯೋಗವನ್ನು ರಚನೆ ಮಾಡಿ, ಅದರ ಶಿಫಾರಸು ಪಡೆದು ಮುಂದಿನ ಕ್ರಮವನ್ನು ಕೇಂದ್ರ ಸರ್ಕಾರ ಕೈಗೊಳ್ಳುತ್ತದೆ. 7ನೇ ಕೇಂದ್ರ ವೇತನ ಆಯೋಗವು ಜನವರಿ 1, 2016 ರಿಂದ ಜಾರಿಗೆ ಬಂದಿದೆ.
8ನೇ ವೇತನ ಆಯೋಗ ಜನವರಿ 2026 ರಿಂದ ಜಾರಿಗೆ ಬರುವ ನಿರೀಕ್ಷೆಯಿದೆ. ಆದರೆ ಇನ್ನೂ ಸಹ ವೇತನ ಆಯೋಗ ರಚನೆ ಆಗಿಲ್ಲ. ಈ ವೇತನ ಆಯೋಗ ಮಾಡುವ ಶಿಫಾರಸುಗಳು ಪ್ರಮುಖವಾಗಿರುತ್ತದೆ. ಮೂಲ ವೇತನವನ್ನು ಆಯೋಗ ಶಿಫಾರಸು ಮಾಡುವ ಫಿಟ್ಮೆಂಟ್ ಆಧಾರದ ಮೇಲೆ ತೀರ್ಮಾನ ಮಾಡಲಾಗುತ್ತದೆ.
ಕೇಂದ್ರ ಸರ್ಕಾರ 2024-25ನೇ ಸಾಲಿನ ಪೂರ್ಣ ಪ್ರಮಾಣದ ಬಜೆಟ್‌ನಲ್ಲಿಯೇ 8ನೇ ವೇತನ ಆಯೋಗ ರಚನೆ ಘೋಷಣೆ ಮಾಡಬಹುದು ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ ಸರ್ಕಾರ 2025ರ ಜನವರಿಯಲ್ಲಿ 8ನೇ ವೇತನ ಆಯೋಗ ರಚನೆಗೆ ಅನುಮೋದನೆಯನ್ನು ನೀಡಿತು. 1947ರಿಂದ, 7 ವೇತನ ಆಯೋಗಗಳನ್ನು ರಚಿಸಲಾಗಿದೆ.












Click it and Unblock the Notifications