8th Pay Commission: 8ನೇ ವೇತನ ಆಯೋಗ ಏಪ್ರಿಲ್‌ನಲ್ಲಿ ಮಹತ್ವದ ಸಭೆ
ಬೆಂಗಳೂರು, ಮಾರ್ಚ್ 27: ಕೇಂದ್ರ ಸರ್ಕಾರ ತನ್ನ ನೌಕರರಿಗೆ ಈಗಾಗಲೇ 8ನೇ ವೇತನ ಆಯೋಗ ರಚನೆ ಮಾಡುವುದಾಗಿ ಹೇಳುವ ಮೂಲಕ ಸಿಹಿಸುದ್ದಿಯನ್ನು ನೀಡಿದೆ. ಕೇಂದ್ರ ಸರ್ಕಾರಿ ನೌಕರರ ವೇತನ, ಪಿಂಚಣಿ ಮತ್ತು ಭತ್ಯೆಗಳ ಪರಿಷ್ಕರಣೆ ಮಾಡಲು 8ನೇ ವೇತನ ಆಯೋಗ ನೀಡುವ ಶಿಫಾರಸನ್ನು ಕೇಂದ್ರ ಸರ್ಕಾರ ಸ್ವೀಕಾರ ಮಾಡಲಿದೆ. 8ನೇ ವೇತನ ಆಯೋಗ ಯಾವಾಗ ರಚನೆಯಾಗಲಿದೆ?, ಆಯೋಗದ ಅವಧಿ ಏನು?, ಯಾವಾಗ ಸರ್ಕಾರಕ್ಕೆ ವರದಿಯನ್ನು ಸಲ್ಲಿಕೆ ಮಾಡಲಾಗುತ್ತದೆ? ಎಂಬುದು ಸದ್ಯದ ಪ್ರಶ್ನೆಯಾಗಿದೆ.
ಜನವರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಕೇಂದ್ರ ಸರ್ಕಾರದ ಎಲ್ಲ ನೌಕರರಿಗೂ 8ನೇ ವೇತನ ಆಯೋಗ ರಚನೆಗೆ ಅನುಮೋದನೆ ನೀಡಲಾಗಿತ್ತು. 1947 ರಿಂದ 7 ವೇತನ ಆಯೋಗಗಳನ್ನು ರಚಿಸಲಾಗಿದೆ, ಕೊನೆಯ ಆಯೋಗದ ವರದಿಯನ್ನು 2016ರಲ್ಲಿ ಅನುಷ್ಠಾನಕ್ಕೆ ತರಲಾಗಿತ್ತು.

ಕೇಂದ್ರ ಸರ್ಕಾರಿ ನೌಕರರು ಸದ್ಯ ಜನವರಿ 1, 2016ರಲ್ಲಿ ಜಾರಿಗೆ ಬಂದ 7ನೇ ಕೇಂದ್ರ ವೇತನ ಆಯೋಗದ ವರದಿ ಅನ್ವಯ ವೇತನ ಭತ್ಯೆಯನ್ನು ಪಡೆಯುತ್ತಿದ್ದಾರೆ. ಸಾಮಾನ್ಯವಾಗಿ ಪ್ರತಿ 10 ವರ್ಷಗಳಿಗೊಮ್ಮೆ ಹೊಸ ವೇತನ ಆಯೋಗ ರಚನೆ ಮಾಡಲಾಗುತ್ತದೆ. ಆದ್ದರಿಂದ 8ನೇ ವೇತನ ಆಯೋಗದ ಶಿಫಾರಸು ಜನವರಿ 2026 ರಿಂದ ಜಾರಿಗೆ ಬರುವ ನಿರೀಕ್ಷೆಯನ್ನು ಸರ್ಕಾರಿ ನೌಕರರು ಹೊಂದಿದ್ದಾರೆ.
ಆಯೋಗದ ಅವಧಿ ಏನು?; ಲೋಕಸಭೆಯ ಬಜೆಟ್ ಅಧಿವೇಶನದಲ್ಲಿ ಮಾತನಾಡಿದ ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್, "ಕೇಂದ್ರ ಸರ್ಕಾರ 8ನೇ ವೇತನ ಆಯೋಗ ರಚನೆ ಮಾಡಲು ನಿರ್ಧರಿಸಿದೆ. ಈ ನಿಟ್ಟಿನಲ್ಲಿ ಸೂಕ್ತ ಸಮಯದಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ" ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರದ ಸುಮಾರು 50 ಲಕ್ಷ ನೌಕರರು ಮತ್ತು 65 ಲಕ್ಷ ಪಿಂಚಣಿದಾರರು 8ನೇ ವೇತನ ಆಯೋಗದ ಅವಧಿ ಏನು? ಎಂದು ಪ್ರಶ್ನಿಸುತ್ತಿದ್ದಾರೆ. ಮಾಹಿತಿಗಳ ಪ್ರಕಾರ ಏಪ್ರಿಲ್ ಮೊದಲ ವಾರದಲ್ಲಿ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ವೇತನ ಆಯೋಗದ ಅವಧಿಯನ್ನು ತೀರ್ಮಾನ ಮಾಡಲಾಗುತ್ತದೆ. ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಪ್ರಸ್ತಾವನೆ ಮಂಡಿಸಲು ಈಗಾಗಲೇ ತಯಾರಿ ನಡೆಸಲಾಗಿದೆ.
8ನೇ ವೇತನ ಆಯೋಗದ ರಚನೆಯೇ ಆಗಿಲ್ಲ. ಆಯೋಗ ಮಾಡುವ ಶಿಫಾರಸುಗಳ ಆಧಾರದ ಮೇಲೆ ಕೇಂದ್ರ ಸರ್ಕಾರಿ ನೌಕರರ ವೇತನ ಹೆಚ್ಚಳ ತೀರ್ಮಾನವಾಗುತ್ತದೆ. ಅದರಲ್ಲೂ ಮೂಲ ವೇತನವನ್ನು ಆಯೋಗ ಶಿಫಾರಸು ಮಾಡುವ ಫಿಟ್ಮೆಂಟ್ ಆಧಾರದ ಮೇಲೆ ತೀರ್ಮಾನ ಮಾಡಲಾಗುತ್ತದೆ. ಆದ್ದರಿಂದ ಆಯೋಗದ ಅವಧಿ ಅತ್ಯಂತ ಪ್ರಮುಖವಾಗಿದೆ. ಯಾವಾಗ ಆಯೋಗ ಸರ್ಕಾರಕ್ಕೆ ವರದಿ ನೀಡಬೇಕು? ಎಂದು ಸಂಪುಟ ಸಭೆಯಲ್ಲಿ ಅಂತಿಮ ತೀರ್ಮಾನ ಮಾಡಲಾಗುತ್ತದೆ.
ಕೇಂದ್ರ ಹಣಕಾಸು ಸಚಿವಾಲಯ 8ನೇ ವೇತನ ಆಯೋಗವು ಯಾವ ವಿಷಯಗಳಲ್ಲಿ ಶಿಫಾರಸು ಮಾಡಬೇಕು?, ಆಯೋಗದ ಅವಧಿ ಏನಾಗಿರಬೇಕು? ಎಂಬ ಕುರಿತು ರಕ್ಷಣಾ ಸಚಿವಾಲಯ, ಗೃಹ ವ್ಯವಹಾರಗಳ ಸಚಿವಾಲಯ ಮತ್ತು ಸಿಬ್ಬಂದಿ ಮತ್ತು ತರಬೇತಿ ಇಲಾಖೆಯಿಂದ ಸಲಹೆಗಳನ್ನು ಕೇಳಿತ್ತು. ಈ ಸಲಹೆಗಳ ಆಧಾರದ ಮೇಲೆ ಸಚಿವ ಸಂಪುಟ ಸಭೆಗೆ ಪ್ರಸ್ತಾವನೆ ತಯಾರು ಮಾಡಲಾಗಿದೆ. ಏಪ್ರಿಲ್ ಮೊದಲ ವಾರ ನಡೆಯುವ ಸಂಪುಟ ಸಭೆಯಲ್ಲಿ ಪ್ರಸ್ತಾವನೆ ಮಂಡಿಸುವ ನಿರೀಕ್ಷೆ ಇದೆ.
ಮಾಹಿತಿಗಳ ಪ್ರಕಾರ ಮಾರ್ಚ್ 20025ರ ಅಂತ್ಯಕ್ಕೆ ಅನ್ವಯವಾಗುವಂತೆ 8ನೇ ಕೇಂದ್ರ ವೇತನ ಆಯೋಗ ರಚನೆ ಆಗಲಿದೆ ಮತ್ತು 2026ರ ಮಾರ್ಚ್ ಅಂತ್ಯಕ್ಕೆ ವರದಿ ನೀಡುವಂತೆ ಕೇಂದ್ರ ಸರ್ಕಾರ ಆಯೋಗದ ಅವಧಿಯನ್ನು ನಿಗದಿ ಮಾಡಲಿದೆ. 2026-27ನೇ ಬಜೆಟ್‌ನಲ್ಲಿ 8ನೇ ವೇತನ ಆಯೋಗದ ವರದಿ ಅನುಷ್ಠಾನಕ್ಕೆ ಅನುದಾನ ಮೀಸಲಿಟ್ಟು, 2026ರ ಏಪ್ರಿಲ್ ಬಳಿಕ ಅದನ್ನು ಜಾರಿಗೊಳಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.
8ನೇ ವೇತನ ಆಯೋಗದ ವರದಿಯನ್ನು ಪಡೆದು, ಶಿಫಾರಸುಗಳನ್ನು ಪರಿಶೀಲನೆ ನಡೆಸಿದ ಬಳಿಕವೇ ಅದರ ಆರ್ಥಿಕ ಪರಿಣಾಮವನ್ನು ಮೌಲ್ಯ ಮಾಪನ ಮಾಡಬಹುದು. ಆದ್ದರಿಂದ 8ನೇ ವೇತನ ಆಯೋಗದ ವರದಿಯ ಅನ್ವಯ ಎಷ್ಟು ವೇತನ ಹೆಚ್ಚಳವಾಗಲಿದೆ? ಎಂದು ಈಗಲೇ ನಿರ್ಧರಿಸುವುದು ಕಷ್ಟ ಎಂದು ಅಧಿಕಾರಿಗಳು ಹೇಳಿದ್ದಾರೆ.












Click it and Unblock the Notifications