8th Pay Commission: 8ನೇ ವೇತನ ಆಯೋಗದ ಅಪ್‌ಡೇಟ್, ರಾಜ್ಯಸಭೆಯಲ್ಲಿ ಸಚಿವರ ಮಾಹಿತಿ
ನವದೆಹಲಿ, ಡಿಸೆಂಬರ್ 05: ಲೋಕಸಭೆ ಚುನಾವಣೆ 2024 ಮುಗಿದು ಎನ್‌ಡಿಎ 3.0 ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಕೇಂದ್ರ ಸರ್ಕಾರಿ ನೌಕರರು ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದರು. ಹೊಸ ಸರ್ಕಾರ ತನ್ನ ಪೂರ್ಣ ಪ್ರಮಾಣದ ಬಜೆಟ್‌ನಲ್ಲಿ 8ನೇ ವೇತನ ಆಯೋಗ ರಚನೆ ಕುರಿತು ಘೋಷಣೆ ಮಾಡಬಹುದು ಎಂಬ ಭರವಸೆ ಹುಸಿಯಾಗಿದೆ. ಯಾವಾಗ ಸರ್ಕಾರ ವೇತನ ಆಯೋಗ ರಚನೆ ಮಾಡಲಿದೆ? ಎಂಬುದು ಇನ್ನೂ ಸಹ ನಿಗೂಢವಾಗಿದೆ.
ಲೋಕಸಭೆ ಚಳಿಗಾಲದ ಅಧಿವೇಶನ ನಡೆಯುತ್ತಿದೆ ಕೇಂದ್ರ ಸರ್ಕಾರಿ ನೌಕರರ ಪ್ರಮುಖ ಬೇಡಿಕೆಯಾದ 8ನೇ ವೇತನ ಆಯೋಗ ರಚನೆ ಕುರಿತು ರಾಜ್ಯಸಭೆಯಲ್ಲಿ ಚರ್ಚೆ ನಡೆದಿದೆ. ಈ ಚರ್ಚೆಗೆ ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಉತ್ತರವನ್ನು ನೀಡಿದ್ದಾರೆ.

ಕೇಂದ್ರ ಸರ್ಕಾರ ಫೆಬ್ರವರಿ 2014ರಲ್ಲಿ 7ನೇ ವೇತನ ಆಯೋಗವನ್ನು ರಚನೆ ಮಾಡಿತ್ತು. ಜನವರಿ 1, 2016ರಂದು ಆಯೋಗದ ವರದಿ ಜಾರಿಗೆ ಬಂದಿತ್ತು. ಕೇಂದ್ರ ಸರ್ಕಾರಿ ನೌಕರರ ವೇತನ, ಭತ್ಯೆಗಳು ಮತ್ತು ನಿವೃತ್ತ ನೌಕರರ ಪಿಂಚಣಿಗಳಲ್ಲಿ ಬದಲಾವಣೆ ಆಗಿತ್ತು. 10 ವರ್ಷಕ್ಕೊಮ್ಮೆ ಸರ್ಕಾರ ವೇತನ ಆಯೋಗ ರಚನೆ ಮಾಡಬೇಕಿದೆ.
2026ರಲ್ಲಿ 8ನೇ ವೇತನ ಆಯೋಗದ ವರದಿ ಜಾರಿಗೆ ಬರಬೇಕು ಅಂದರೆ ಕೇಂದ್ರ ಸರ್ಕಾರ ಈಗ ಅಥವ 2025ರ ಮೊದಲ ಅವಧಿಯಲ್ಲಿಯೇ 8ನೇ ವೇತನ ಆಯೋಗ ರಚನೆಯನ್ನು ಮಾಡಬೇಕು. ಆಯೋಗ ವರದಿ ನೀಡಲು ಸುಮಾರು 8 ತಿಂಗಳು ಬೇಕು ಎಂದು ನಿರೀಕ್ಷೆ ಮಾಡಲಾಗಿದೆ. ಆದ್ದರಿಂದ ಸರ್ಕಾರಿ ನೌಕರರು ಯಾವಾಗ ಆಯೋಗ ರಚನೆಯ ಘೋಷಣೆ ಆಗಲಿದೆ? ಎಂದು ಕಾದು ಕುಳಿತಿದ್ದಾರೆ.
ಸಚಿವರು ಹೇಳಿದ್ದೇನು?; ರಾಜ್ಯಸಭೆ ಕಲಾಪದಲ್ಲಿ ಕೆಲವು ಸದಸ್ಯರು 8ನೇ ವೇತನ ಆಯೋಗ ರಚನೆ ಕುರಿತು ಚರ್ಚಿಸಿದರು. 2025-26ನೇ ಸಾಲಿನ ಬಜೆಟ್‌ನಲ್ಲಿ ವೇತನ ಆಯೋಗ ರಚನೆಯ ಪ್ರಸ್ತಾಪ ಇರಲಿದೆಯೇ? ಎಂದು ಪ್ರಶ್ನಿಸಿದ್ದರು.
ಈ ಚರ್ಚೆಗೆ ಉತ್ತರ ನೀಡಿದ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ, "8ನೇ ವೇತನ ಆಯೋಗದ ರಚನೆಯ ಕುರಿತು ಪ್ರಸ್ತುತ ಯಾವುದೇ ಪ್ರಸ್ತಾವನೆ ಪರಿಗಣನೆಯಲ್ಲಿ ಇಲ್ಲ" ಎಂದು ಸ್ಪಷ್ಟಪಡಿಸಿದರು. ಇದರಿಂದಾಗಿ ಆಯೋಗ ರಚನೆ ಇನ್ನಷ್ಟು ವಿಳಂಬವಾಗಲಿದೆ ಎಂಬುದು ಖಾತ್ರಿಯಾಗಿದೆ.
1 ಕೋಟಿಗೂ ಅಧಿಕ ಸರ್ಕಾರಿ ನೌಕರರು, ನಿವೃತ್ತ ಪಿಂಚಣಿದಾರರು ಸರ್ಕಾರ 8ನೇ ವೇತನ ಆಯೋಗ ರಚನೆ ಮಾಡಲಿದೆ ಎಂದು ಕಾದಿದ್ದಾರೆ. ಹಲವಾರು ವರದಿಗಳಲ್ಲಿ ಆಯೋಗ ರಚನೆ ಆದರೆ ಕೇಂದ್ರ ಸರ್ಕಾರಿ ನೌಕರರ ಮೂಲ ವೇತನ ಎಷ್ಟು ಏರಿಕೆಯಾಗಲಿದೆ? ಎಂಬ ಅಂಶಗಳನ್ನು ಉಲ್ಲೇಖಿಸಲಾಗುತ್ತಿದೆ. ಆದರೆ ಆಯೋಗ ರಚನೆ ಕುರಿತು ಇನ್ನೂ ಸರ್ಕಾರ ತೀರ್ಮಾನವನ್ನು ಕೈಗೊಂಡಿಲ್ಲ.
ಕೇಂದ್ರ ಸರ್ಕಾರ ಸಂಪ್ರದಾಯದಂತೆ ಸರ್ಕಾರಿ ನೌಕರರ ವೇತನ ರಚನೆ, ಭತ್ಯೆ, ಪಿಂಚಣಿಯನ್ನು ಪರಿಶೀಲಿಸಲು ಮತ್ತು ನವೀಕರಣಗೊಳಿಸಲು ಪ್ರತಿ 10 ವರ್ಷಗಳಿಗೊಮ್ಮೆ ವೇತನ ಆಯೋಗವನ್ನು ರಚನೆ ಮಾಡುತ್ತದೆ. ಸದ್ಯ ಕೇಂದ್ರ ಸರ್ಕಾರಿ ನೌಕರರು 7ನೇ ವೇತನ ಆಯೋಗದ ವರದಿ ಅನ್ವಯ ವೇತನವನ್ನು ಪಡೆಯುತ್ತಿದ್ದಾರೆ. ಆಯೋಗದ ವರದಿ ಜಾರಿಗೆ ಬಂದ ಬಳಿಕ ಕೇಂದ್ರ ಸರ್ಕಾರಿ ನೌಕರರ ಮೂಲ ವೇತನ 18,000 ರೂ.ಗಳಿಗೆ ಏರಿಕೆಯಾಗಿತ್ತು.
ಮೂಲ ವೇತನದ ಆಧಾರದ ಮೇಲೆ ಡಿಎ, ಪಿಂಚಣಿಯನ್ನು ಲೆಕ್ಕಾಚಾರ ಹಾಕಲಾಗುತ್ತದೆ. 2025ರ ಏಪ್ರಿಲ್‌ನಿಂದ ಕೇಂದ್ರ ಸರ್ಕಾರ ಏಕೀಕೃತ ಪಿಂಚಣಿ ಯೋಜನೆ (ಯುಪಿಎಸ್) ಪರಿಚಯಿಸಲಾಗುತ್ತದೆ ಎಂದು ಘೋಷಣೆ ಮಾಡಿದೆ. ಆದ್ದರಿಂದ 8ನೇ ವೇತನ ಆಯೋಗದ ವರದಿ ಪ್ರಕಾರ ಮೂಲ ವೇತನ ಎಷ್ಟಾಗಲಿದೆ? ಎಂದು ನೌಕರರು ಕಾದು ಕುಳಿತಿದ್ದಾರೆ.
2025-26ನೇ ಸಾಲಿನ ಬಜೆಟ್ ಅನ್ನು ಕೇಂದ್ರ ಸರ್ಕಾರ ಫೆಬ್ರವರಿಯಲ್ಲಿ ಮಂಡಿಸಲಿದೆ. ವರ್ಷದ ಪ್ರಾರಂಭದಲ್ಲಿ 8ನೇ ವೇತನ ಆಯೋಗ ರಚನೆ ಘೋಷಣೆ ಮಾಡದಿದ್ದರೆ ಕೇಂದ್ರ ಸರ್ಕಾರಿ ನೌಕರರ ಸಂಘಟನೆಗಳು ಬಜೆಟ್ ಪೂರ್ವಭಾವಿ ಸಭೆಯಲ್ಲಿ ವೇತನ ಆಯೋಗ ರಚನೆಯ ಬೇಡಿಕೆಯನ್ನು ಮತ್ತೆ ಮಂಡಿಸುವ ನಿರೀಕ್ಷೆ ಇದೆ.












Click it and Unblock the Notifications