8th Pay Commssion: 2025ರ ಬಜೆಟ್ ಮೇಲೆ ನೌಕರರ ಭಾರೀ ನಿರೀಕ್ಷೆ, ಕೇಂದ್ರ ಒಪ್ಪಿದರೆ ವೇತನ ಶೇ.186 ರಷ್ಟು ಏರಿಕೆ?
ನವದೆಹಲಿ, ಜನವರಿ 16: ಮುಂದಿನ ಫೆಬ್ರವರಿ ಮೊದಲ ವಾರ ಕೇಂದ್ರ ಬಜೆಟ್ 2025 ಮಂಡನೆ ಆಗಲಿದೆ. ಕೇಂದ್ರ ಸರ್ಕಾರಿ ನೌಕರರ ಸಂಘಗಳು, ಯೂನಿಯನ್ ಮಹತ್ವದ ಘೋಷಣೆಯ ನಿರೀಕ್ಷೆಯಲ್ಲಿದ್ದಾರೆ. ಸರ್ಕಾರ ವಿಳಂಬ ಮಾಡದೇ 8ನೇ ವೇತನ ಆಯೋಗ ಜಾರಿಗೆ ಮನವಿ ಮಾಡಲಾಗಿದೆ. ಸದ್ಯ ಈ ಬಗ್ಗೆ ಬಜೆಟ್‌ನಲ್ಲಿ ಘೋಷಿಸುವ ನಿರೀಕ್ಷೆಗಳು ಇವೆ. ಅಂದುಕೊಂಡಂತಾದರೆ ವೇತನವು ಶೇಕಡಾ 186ರಷ್ಟು ಹೆಚ್ಚಳವಾಗಲಿದೆ.
ಹೌದು, ಅನೇಕ ಕಾರ್ಮಿಕ ಸಂಘಗಳು ಮತ್ತು ಭಾರತೀಯ ಮಜ್ದೂರ್ ಸಂಘವು ಕೇಂದ್ರ ಸರ್ಕಾರಕ್ಕೆ ಈ ಬಗ್ಗೆ ಆಗ್ರಹಿಸಿವೆ. 8 ನೇ ವೇತನ ಆಯೋಗ ರಚನೆಗೆ ಕೋರಿವೆ. ಈಗಾಗಲೇ ಯೂನಿಯನ್‌ಗಳು ಶಿಫಾರಸು ಮಾಡಿವೆ. ಬಜೆಟ್‌ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಜೊತೆಗೆ ನಡೆದ ಬಜೆಟ್ ಪೂರ್ವ ಸಭೆಯಲ್ಲಿ ಈ ಕುರಿತು ನೌಕರರು ಕಳವಳ ವ್ಯಕ್ತಪಡಿಸಿದ್ದಾರೆ.

ನಮ್ಮ ಬೇಡಿಕೆ ಈಡೇರಿಸುವಂತೆ ಕೋರಿದ್ದು, ಹೊಸ ವೇತನ ಆಯೋಗ ಜಾರಿಗೆ ಕಾಯುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಈಗಾಗಲೇ ಕೇಂದ್ರ ಸರ್ಕಾರ 8ನೇ ವೇತನ ಆಯೋಗ ಬಗ್ಗೆ ಯಾವುದನ್ನು ಸ್ಪಷ್ಟಪಡಿಸಿಲ್ಲ. ಈ ಬಗ್ಗೆ ಯೋಚನೆ ಇಲ್ಲ ಎಂದು ಹಣಕಾಸು ಇಲಾಖೆ ಹೇಳಿದ ಮೇಲೂ ನೌಕರರ ನಿರೀಕ್ಷೆಗಳು ಬೆಟ್ಟದಷ್ಟಿವೆ.
ಕಾಯುತ್ತಿರುವ 01 ಕೋಟಿ ನೌಕರರು
ಸದ್ಯ ಕೇಂದ್ರ ಸರ್ಕಾರಿ ವ್ಯಾಪ್ತಿಯಲ್ಲಿ ಕೆಲಸ ಮಾಡುವ 1 ಕೋಟಿಗೂ ಹೆಚ್ಚು ಉದ್ಯೋಗಿಗಳು 8ನೇ ವೇತನ ಆಯೋಗದ ತುಟ್ಟಿಭತ್ಯೆ, ತುಟ್ಟಿ ಪರಿಹಾರ ಸೇರಿದಂತೆ ಇತರ ಭತ್ಯೆಗಳ ಏರಿಕೆ ಬಗ್ಗೆ ಕುತೂಹಲ ಹೊಂದಿದ್ದಾರೆ. ಮುಖ್ಯವಾಗಿ ಮೂಲ ವೇತನದಲ್ಲಿ ಆಗುವ ಗಣನೀಯ ಬದಲಾವಣೆಗಳಾಗಲಿವೆ ಎಂದು ಅಂದಾಜಿಸಿದ್ದಾರೆ.

ಈ ಮೇಲಿನ ಎಲ್ಲ ಕಾರಣಗಳಿಂದ ಫೆಬ್ರವರಿ 2025 ರಲ್ಲಿ ಬಜೆಟ್ ಮಂಡನೆ ವೇಳೆ ಕೇಂದ್ರ ಸರ್ಕಾರ ಈ ಬಗ್ಗೆ ಅಧಿಕೃತ ಘೋಷಣೆ ಮೂಲಕ ನಮಗೆಲ್ಲ ಸಿಹಿಸುದ್ದಿ ನೀಡಲಿದೆ ಎಂದು ಕಾಯುತ್ತಿರುವುದಾಗಿ ನೌಕರರು, ಪಿಂಚಣಿದಾರರು ತಿಳಿಸಿದ್ದಾರೆ.
ನೌಕರರ ವೇತನದಲ್ಲಿ ಶೇ.186% ಹೆಚ್ಚಳ
ಹೊಸ ವೇತನ ಆಯೋಗ ಜಾರಿಯಾದರೆ ಕನಿಷ್ಠ 2.86 ಫಿಟ್‌ಮೆಂಟ್ ಅಂಶ ಪರಿಗಣಿಸುವ ಸಾಧ್ಯತೆ ಇದೆ. ಈ ಕುರಿತು ಕೆಲವು ಊಹಾಪೋಹಗಳು ಕೇಳಿ ಬಂದಾಗ ಪ್ರತಿಕ್ರಿಯಿಸಿರುವ ನ್ಯಾಷನಲ್ ಕೌನ್ಸಿಲ್ ಆಫ್ ಜಾಯಿಂಟ್ ಕನ್ಸಲ್ಟೇಟಿವ್ ಮೆಷಿನರಿ (NC-JCM) ಸದಸ್ಯರಾದ ಶಿವ ಗೋಪಾಲ್ ಮಿಶ್ರಾ ಅವರು, ಸರ್ಕಾರಿ ನೌಕರರಿಗೆ ಶೇಕಡಾ 186 ರಷ್ಟು ವೇತನ ಹೆಚ್ಚಳವಾಗಬಹುದು ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರಿ ನೌಕರರ ಯೂನಿಯನ್‌ಗಳು ಎಂಟನೇ ವೇತನ ಜಾರಿ ವೇಳೆ ಇವೆಲ್ಲ ಅಂಶಗಳನ್ನು ಪರಿಗಣಿಸುವಂತೆ ಕೋರಿ ಶಿಫಾರಸುಗಳನ್ನು, ಬೇಡಿಕೆಗಳನ್ನು ಸಲ್ಲಿಸಿದ್ದರು. ಅವರ ಬೇಡಿಕೆಗೆ ಸ್ಪಂದನೆ ದೊರೆತರೆ ಕನಿಷ್ಠ ಮೂಲ ವೇತನವು ಕೇವಲ 18,000 ರೂಪಾಯಿಯಿಂದ 51,480 ರೂಪಾಯಿಗೆ ಹೆಚ್ಚಳವಾಗಬಹುದು.
ನೌಕರರ ತುಟ್ಟಿಭತ್ಯೆ, ಇನ್ನಿತರ ಭತ್ಯೆಗಳು ಗಣನೀಯವಾಗಿ ಏರಿಕೆ ಆಗುವ ಸಾಧ್ಯತೆ ಇದೆ. ಇದರೊಂದಿಗೆ ಪಿಂಚಣಿದಾರರಿಗೆ ಪಿಂಚಣಿಯಲ್ಲಿಯೂ ಏರಿಕೆ ಆಗಲಿದೆ. ಪಿಂಚಣಿ ರೂ.9,000 ರಿಂದ ರೂ.25,740 ಕ್ಕೆ ಏರಿಕೆ ಸಾಧ್ಯತೆ ಇದೆ. ನೌಕರರಿಗೆ ಕಾಲ ಕಾಲಕ್ಕೆ ಎದುರಾಗುವ ಹಣದುಬ್ಬರ ಸಮಸ್ಯೆಗಳನ್ನು ಈ ಭತ್ಯೆಗಳ ಹೆಚ್ಚಳು ಪರಿಹಾರ ಒದಗಿಸಲಿದೆ.
ಸದ್ಯ 07ನೇ ವೇತನ ಆಯೋಗವು ಜಾರಿಯಲ್ಲಿದೆ. ಇದು 2016ರ ಜನವರಿಗೆ ಘೋಷಣೆ ಆಗಿದೆ. ಘೋಷಣೆಗೂ ಮೊದಲು ನೌಕರರ ಶಿಫಾರಸುಗಳನ್ನು ಪರಿಗಣಿಸಲಾಗಿತ್ತು. ಒಂದೂವರೆ ವರ್ಷಕ್ಕೂ ಹೆಚ್ಚು ಕಾಲದ ಸಿದ್ಧತೆಯೊಂದಿಗೆ ಅನುಷ್ಠಾನಕ್ಕೆ ತರಲಾಗಿತ್ತು.
ಹತ್ತು ವರ್ಷಕ್ಕೊಮ್ಮೆ ವೇತನ ಆಯೋಗ ಬದಲಾಗುತ್ತದೆ. ಏಳನೇ ವೇತನ ಆಯೋಗ ಕೊನೆಗೊಳ್ಳಲು ಒಂದು ವರ್ಷ ಬಾಕಿ ಇದ್ದರೂ ಸಹಿತ ಹೊಸ ವೇತನ ಆಯೋಗ ಜಾರಿ ಬಗ್ಗೆ ಸರ್ಕಾರ ಚಿಂತನೆ ನಡೆಸಿಲ್ಲ. ಈ ಬಗ್ಗೆ ಯಾವ ಕ್ರಮ ಕೈಗೊಳ್ಳುತ್ತಿಲ್ಲ. ಅದರ ಪ್ರಸ್ತಾವ ಸರ್ಕಾರದ ಮುಂದಿಲ್ಲ ಎಂದು ಹಣಕಾಸು ಸಚಿವರು ಹೇಳಿರುವುದು ನೌಕರರ ನಿರಾಶೆಗೆ ಕಾರಣವಾಗಿದೆ.












Click it and Unblock the Notifications