ಮಧ್ಯಪ್ರದೇಶದಲ್ಲಿ 8 ವರ್ಷದ ಬಾಲಕಿ ಮೇಲೆ ಅತ್ಯಾಚಾರ
ಮಂಡಸೌರ್(ಮಧ್ಯ ಪ್ರದೇಶ), ಜೂನ್ 28: ಭಾರತ ಮಹಿಳೆಯರಿಗೆ ಅತ್ಯಂತ ಅಸುರಕ್ಷಿತ ದೇಶ ಎಂದು ಸಮೀಕ್ಷೆಯೊಂದು ಹೇಳಿ ಇನ್ನೂ ಎರಡು ದಿನವಾಗಿಲ್ಲ. ಅದಾಗಲೇ ಅಪ್ರಾಪ್ತ ಬಾಲಕಿಯೊಬ್ಬಳ ಮೇಲೆ ಕಾಮುಕನೊಬ್ಬ ಅತ್ಯಾಚಾರ ಎಸಗಿದ್ದ ಹೀನಾಯ ಘಟನೆ ಮಧ್ಯಪ್ರದೇಶದ ಮಂಡಸೌರ್ ಎಂಬಲ್ಲಿ ನಡೆದಿದೆ.
ಎಂಟು ವರ್ಷದ ಬಾಲಕಿಯನ್ನು ಅಪಹರಿಸಿ, ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅಪರಿಚಿತನೊಬ್ಬ ಅತ್ಯಾಚಾರ ಎಸಗಿದ್ದು, ಆಕೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಲಕ್ಷ್ಮಣ್ ದರ್ವಅಜಾ ಎಂಬಲ್ಲಿನ ಅರಣ್ಯದ ಬಳಿ ಪತ್ತೆಯಾಗಿದ್ದಾಳೆ.
ಆಕೆಯ ದೇಹದ ತುಂಬ ಗಾಯಗಳಾಗಿದ್ದು, ಆಕೆಯನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಈಗ ಇಂದೋರ್ ಗೆ ಕರೆದೊಯ್ಯಲಾಗಿದ್ದು, ಆಕೆಯ ಮೇಲೆ ಅತ್ಯಾಚಾರ ನಡೆದಿದೆ ಎಂಬುದು ವೈದ್ಯಕೀಯ ಪರೀಕ್ಷೆಯಿಂದ ತಿಳಿದುಬಂದಿದೆ. ಬಾಲಕಿಯ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಲಿಸಿದ್ದಾರೆ.

ಈ ಕುರಿತು ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಅಪರಾಧಿಯನ್ನು ಶೀಘ್ರವೇ ಬಂಧಿಸುವುದಾಗಿ ಪೊಲಿಸರು ಹೇಳಿದ್ದಾರೆ.
ಇತ್ತೀಚೆಗಷ್ಟೇ ಮಂಗಳೂರಿನ ಸುಳ್ಯದಲ್ಲಿ ಯುವತಿಯೊಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ನಡೆದ ಘಟನೆ ವರದಿಯಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಪೊಲಿಸರು ಬಂಧಿಸಿದ್ದು ತನಿಖೆ ನಡೆಸುತ್ತಿದ್ದಾರೆ.
ಮಹಿಳೆಯರ ವಿಷಯದಲ್ಲಿ ಭಾರತ ವಿಶ್ವದಲ್ಲೇ ಅತ್ಯಂತ ಅಸುರಕ್ಷಿತ ದೇಶ ಎಂದು ಇತ್ತೀಚೆಗೆ ಸಮೀಕ್ಷೆಯೊಂದು ಹೇಳಿದ್ದು, ಅದಕ್ಕೆ ಪೂರಕವೆನ್ನುವಂಥ ಘಟನೆಗಳು ಮತ್ತೆ ಮತ್ತೆ ನಡೆಯುತ್ತಿವೆ.












Click it and Unblock the Notifications