ಸರ್ಕಾರಿ ನೌಕರರ ತುಟ್ಟಿಭತ್ಯೆ ಹೆಚ್ಚಳ ಕುರಿತಂತೆ ಸಿಹಿ ಸುದ್ದಿ
ಕೇಂದ್ರ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗದ ಶಿಫಾರಸ್ಸಿನಂತೆ ತುಟ್ಟಿಭತ್ಯೆ ಹೆಚ್ಚಳ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. ಸರ್ಕಾರಿ ನೌಕರರಿಗೆ ಶೇ 4ರಷ್ಟು ಡಿಎ ಹೆಚ್ಚಳಕ್ಕೆ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಹೆಚ್ಚಿನ ದರದಂತೆ ಡಿಎ ಪರಿಷ್ಕರಣೆಯಾಗಲಿದ್ದು, ಜುಲೈ 1, 2021ರಿಂದ ಮುಂದಿನ ಕಂತು ಲಭಿಸಲಿದೆ ಎಂದು ವಿತ್ತ ಸಚಿವಾಲಯದಿಂದ ಮಾಹಿತಿ ಹೊರ ಬಂದಿದೆ.
ಜನವರಿ 1, 2020 ಅನ್ವಯ ಸಂಬಳ ಏರಿಕೆ ಎಂಬ ಸುದ್ದಿಯನ್ನು ಅಲ್ಲಗೆಳೆಯಲಾಗಿದೆ. ರಾಜ್ಯಸಭೆಯಲ್ಲಿಂದು ಈ ಬಗ್ಗೆ ವಿತ್ತ ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್ ಮಾತನಾಡಿ, ಲಿಖಿತ ಉತ್ತರ ನೀಡಿದರು.
ಜನವರಿ 1, 2020, ಜನವರಿ 1, 2021 ಹಾಗೂ ಜುಲೈ 1, 2021ರ ಅನ್ವಯ ಡಿಎ ಪರಿಷ್ಕೃತ ಕಂತು ಜುಲೈ 1, 2021ಕ್ಕೆ ಕೈ ಸೇರಲಿದೆ. ಡಿಎ, ಡಿಆರ್ ತಡೆದಿದ್ದರಿಂದ ಸರ್ಕಾರಕ್ಕೆ ಒಟ್ಟಾರೆ, 37,530.08 ಕೋಟಿ ರು ಉಳಿತಾಯವಾಗಲಿದೆ ಎಂದು ಹೇಳಿದರು.

ಸದ್ಯದ ಮಾಹಿತಿಯಂತೆ ಡಿಎ ಶೇ 17ರಿಂದ ಶೇ 28ಕ್ಕೇರಿಕೆಯಾಗಿದೆ. ಜನವರಿ 1 (4%), ಜುಲೈ 1 2020(3%) ಹಾಗೂ ಜನವರಿ 1, 2021 (4%) ಗೆ ಮೂರು ಬಾರಿ ಏರಿಕೆಯಾಗಿ ಶೇ 25ಕ್ಕೇರಿದೆ. ಜುಲೈ 1, 2021ಕ್ಕೆ ಪರಿಷ್ಕರಣೆಗೊಳ್ಳಲಿದೆ. ಆದರೆ, 18 ತಿಂಗಳ ಬಾಕಿ ಮೊತ್ತ ಸಿಗುವುದಿಲ್ಲ.
ಒಂದುವೇಳೆ ಡಿಎ ಹೆಚ್ಚಳ ಘೋಷಣೆ ಮಾಡಿದರೆ, ಕೇಂದ್ರ ಬೊಕ್ಕಸಕ್ಕೆ 12,150 ಕೋಟಿ ರು ಹೆಚ್ಚುವರಿ ಹೊರೆ ಬೀಳಲಿದೆ, ಕಳೆದ ಆರ್ಥಿಕ ವರ್ಷ 2020-21ರಲ್ಲಿ 14,595 ಕೋಟಿ ರು ನಷ್ಟಿತ್ತು. ಡಿಎ ಹೆಚ್ಚಳದಿಂದಾಗಿ 48.34 ಲಕ್ಷ ಕೇಂದ್ರ ಸರ್ಕಾರಿ ನೌಕರರು ಹಾಗೂ 65.26 ಲಕ್ಷ ಪಿಂಚಣಿದಾರರಿಗೆ ನೆರವು ಲಭಿಸಲಿದೆ.











Click it and Unblock the Notifications