G20 Summit: ನರೇಂದ್ರ ಮೋದಿ & ಬೈಡನ್ ಎದುರು ಹಲವು ಸವಾಲು!
ಅಮೆರಿಕ ಮತ್ತು ಭಾರತದ ಸಂಬಂಧ ಹಿಂದೆ ಎಂದಿಗಿಂತಲೂ ಗಟ್ಟಿಯಾಗಿದೆ. ಹೀಗಾಗಿಯೇ ಎರಡೂ ದೇಶಗಳ ಮಧ್ಯೆ ಪ್ರಮುಖ ಒಪ್ಪಂದ ನಡೆದಿವೆ. ಈಗ ಜಿ20 ಶೃಂಗಸಭೆಯ ಹಿನ್ನೆಲೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಭಾರತಕ್ಕೆ ಬರುತ್ತಿದ್ದು, ಪ್ರಧಾನಿ ಮೋದಿ ಅವರ ಜೊತೆಗೆ ಮಾತುಕತೆ ನಡೆಸಲಿದ್ದಾರೆ. ಹಾಗೇ 6 ಪ್ರಮುಖ ಒಪ್ಪಂದಕ್ಕೆ ಅಂತಿಮ ಮುದ್ರೆ ಬೀಳಲಿದ್ದು, ಈ ಒಪ್ಪಂದಗಳು ಭಾರತದ ಭವಿಷ್ಯಕ್ಕೆ ಮತ್ತಷ್ಟು ಶಕ್ತಿ ತುಂಬಲಿವೆ.
ಸಾಮಾನ್ಯವಾಗಿ ಜಿ20 ಶೃಂಗಸಭೆ ನಡೆಯುವ ಸಂದರ್ಭದಲ್ಲಿ ದ್ವಿಪಕ್ಷೀಯ ಮಾತುಕತೆಗಳಿಗೆ ಅವಕಾಶ ಇರುವುದಿಲ್ಲ. ಆದರೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಹಾಗೂ ಸೌದಿಯ ದೊರೆ ಮೊಹಮ್ಮದ್ ಬಿನ್ ಸಲ್ಮಾನ್ ಅವರಿಗೆ ಭಾರತ ವಿಶೇಷ ವಿನಾಯಿತಿ ನೀಡಿದೆ. ಈಗ ಎರಡೂ ದೇಶಗಳ ಜೊತೆಗೆ ಮಹತ್ವದ ದ್ವಿಪಕ್ಷೀಯ ಮಾತುಕತೆ ನಡೆಯಲಿದೆ. ಅದರಲ್ಲೂ ಪ್ರಮುಖ ವಿಚಾರ ಅಂದ್ರೆ ಅಮೆರಿಕ ಜೊತೆಗಿನ ಸಭೆ. ಅಮೆರಿಕ ಅಧ್ಯಕ್ಷ ಜೋ ಬೈಡನ್ ಜೊತೆ ಪಿಎಂ ಮೋದಿ ಮುಖ್ಯವಾಗಿ 6 ವಿಚಾರಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಆ ಕುರಿತು ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.

6 ಪರಮಾಣು ರಿಯಾಕ್ಟರ್ ನಿರ್ಮಾಣ
ಅಮೆರಿಕದ ತಂತ್ರಜ್ಞಾನ ಸಹಾಯದಿಂದ ಭಾರತದಲ್ಲಿ ಒಟ್ಟು 6 ಪರಮಾಣು ರಿಯಾಕ್ಟರ್‌ಗಳ ನಿರ್ಮಾಣಕ್ಕಾಗಿ ಚಿಂತನೆ ನಡೆದಿದೆ. ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (NPCIL) ಮತ್ತು ವೆಸ್ಟಿಂಗ್‌ಹೌಸ್ ಎಲೆಕ್ಟ್ರಿಕ್ ಕಂಪನಿ (WEC) ನಡುವೆ ಈ ಕುರಿತು ಈಗ ಮಾತುಕತೆ ನಡೆಯುತ್ತಿದೆ. ಅತ್ಯಾಧುನಿಕ ರಿಯಾಕ್ಟರ್ ತಂತ್ರಜ್ಞಾನ ಅಭಿವೃದ್ಧಿಪಡಿಸಲು ಚರ್ಚೆ ಆಗುತ್ತಿದ್ದು, ಇದೀಗ ಪ್ರಧಾನಿ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಬೈಡನ್ ನಡುವೆ ಇದೀಗ ಅಂತಿಮ ಹಂತದ ಮಾತುಕತೆ ನಡೆಯುವ ಸಾಧ್ಯತೆ ಇದೆ.
ಭಾರತದ ಯುದ್ಧ ವಿಮಾನಗಳಿಗೆ ಇಂಜಿನ್
ಅಮೆರಿಕ ಮತ್ತು ಭಾರತದ ಮಧ್ಯೆ ಮತ್ತೊಂದು ಪ್ರಮುಖ ಒಪ್ಪಂದಕ್ಕೆ ಸಹಿ ಬೀಳಬಹುದು ಎನ್ನಲಾಗಿದೆ. ಭಾರತದಲ್ಲಿ GE F-414 ಜೆಟ್ ಇಂಜಿನ್ ತಯಾರಿಸಲು ಅಮೆರಿಕದ ಮೂಲಕ ತಂತ್ರಜ್ಞಾನ ಸಿಗುವ ನಿರೀಕ್ಷೆ ಇದೆ. ಈಗಾಗಲೇ ಅಮೆರಿಕ ಕಾಂಗ್ರೆಸ್ ಕೂಡ ಇದಕ್ಕೆ ಇರುವ ಅಡ್ಡಿ ದೂರ ಮಾಡಿದ್ದು, ಜೋ ಬೈಡನ್ ಪಿಎಂ ಮೋದಿ ಅವರ ಜೊತೆ ದ್ವಿಪಕ್ಷೀಯ ಸಭೆ ನಡೆಸುವಾಗ ಈ ಒಪ್ಪಂದಕ್ಕೆ ಗ್ರೀನ್ ಸಿಗ್ನಲ್ ಸಿಗುವ ಸಾಧ್ಯತೆ ಇದೆ.

MQ-9B ಡ್ರೋನ್ ಒಪ್ಪಂದಕ್ಕೆ ಸಹಿ?
ಜನರಲ್ ಅಟಾಮಿಕ್ಸ್ MQ-9B HALE UAV ಡ್ರೋನ್‌ಗಳ ವಿಚಾರದಲ್ಲೂ ಅಮೆರಿಕ & ಭಾರತ ಮಾತುಕತೆ ನಡೆಸುತ್ತಿವೆ. ಬೈಡನ್ ಭಾರತ ಭೇಟಿಯ ಸಂದರ್ಭದಲ್ಲಿ ಈ ಒಪ್ಪಂದಕ್ಕೆ ಕೂಡ ಅಂತಿಮ ಮುದ್ರೆ ಬೀಳಬಹುದೆಂಬ ನಿರೀಕ್ಷೆ ಇದೆ. ಭಾರತಕ್ಕೆ MQ-9B HALE UAV ಡ್ರೋನ್ಸ್ ಮತ್ತಷ್ಟು ಬಲ ತುಂಬಲಿವೆ. ಹೀಗಾಗಿ ಪ್ರಧಾನಿ ಮೋದಿ ಹಾಗೂ ಜೋ ಬೈಡನ್ ನಡುವೆ ಈ ವಿಚಾರದಲ್ಲಿ ಅಂತಿಮ ಹಂತದ ಚರ್ಚೆ ನಡೆಯಬಹುದು ಎನ್ನಲಾಗಿದೆ.
ಭಾರತದ ವಿದ್ಯಾರ್ಥಿಗಳಿಗೆ ಬಂಪರ್?
ಅಮೆರಿಕದಲ್ಲಿ ವಿದ್ಯಾಭ್ಯಾಸ ನಡೆಸಲು ಭಾರತ ಮೂಲದ ವಿದ್ಯಾರ್ಥಿಗಳಿಗೆ ಅನುಕೂಲವನ್ನ ಕಲ್ಪಿಸಲು ಪ್ರಯತ್ನ ಸಾಗಿವೆ. ಹೀಗೆ ಭಾರತೀಯ ವಿದ್ಯಾರ್ಥಿಗಳಿಗೆ ಅನುಗುಣವಾಗಿ ಶೈಕ್ಷಣಿಕ ಕಾರ್ಯಕ್ರಮ ಘೋಷಿಸಲು ಚರ್ಚೆ ನಡೆಯುತ್ತಿದೆ. ಈ ಮೂಲಕ ಭಾರತದ ವಿದ್ಯಾರ್ಥಿಗಳು ಅಮೆರಿಕದಲ್ಲಿ ಹೋಗಿ ವಿದ್ಯಾಭ್ಯಾಸ ಮಾಡಲು ಹಾಗೂ 3 ವರ್ಷಗಳ ತನಕ ಅಮೆರಿಕದಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಕಲ್ಪಿಸಲು ಪ್ರಯತ್ನ ಸಾಗಿದೆ. ಈ ಒಪ್ಪಂದಕ್ಕೆ ಒಪ್ಪಿಗೆ ಸಿಕ್ಕರೆ ಭಾರತ ಮೂಲದ ವಿದ್ಯಾರ್ಥಿಗಳು ಅಮೆರಿಕದಲ್ಲಿ ಸುಲಭವಾಗಿ ಕೆಲಸ ಹುಡುಕಬಹುದು.

ಉಕ್ರೇನ್ ಯುದ್ಧಕ್ಕೆ ಭಾರತದ ನೆರವು
ರಷ್ಯಾ ಮತ್ತು ಉಕ್ರೇನ್ ಮಧ್ಯೆ ನಡೆಯುತ್ತಿರುವ ಯುದ್ಧದ ಬಗ್ಗೆ ಭಾರತ ವಿಭಿನ್ನ ನಿಲುವು ತೆಗೆದುಕೊಂಡಿದೆ. ಅತ್ತ ಉಕ್ರೇನ್ ಪರ ನಿಲ್ಲದೆ, ಇತ್ತ ರಷ್ಯಾಗೆ ಬೆಂಬಲ ನೀಡದೆ ಯುದ್ಧ ಬೇಡ ಅನ್ನುತ್ತಿದೆ. ಹೀಗಾಗಿ ಕಷ್ಟದಲ್ಲಿ ಇರುವ ಉಕ್ರೇನ್‌ಗೆ ಮಾನವೀಯ ನೆರವು ನೀಡಲು ಅಮೆರಿಕ ಅಧ್ಯಕ್ಷರು ಭಾರತದ ಬಳಿ ಬೇಡಿಕೆ ಇಡಬಹುದು. ಭಾರತ ಇದುವರೆಗೆ ಸುಮಾರು 100 ಟನ್ ಮಾನವೀಯ ನೆರವು ಕಳುಹಿಸಿದೆ. ಅಗತ್ಯ ಔಷಧಗಳು, ವೈದ್ಯಕೀಯ ಉಪಕರಣ, ಆಹಾರ ಸೇರಿದಂತೆ ಉಕ್ರೇನ್ ಜನರಿಗೆ ಬೇಕಿರುವ ವಸ್ತುಗಳನ್ನು ತಲುಪಿಸಿದೆ. ಈಗ ಅಮೆರಿಕ ಮತ್ತು ಭಾರತ ಒಟ್ಟಾಗಿ ಮಾನವೀಯ ನೆರವು ಕಳಿಸುವ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ.
ಬೆಂಗಳೂರಿನಲ್ಲಿ ಅಮೆರಿಕದ ಕಚೇರಿ!
ಇದೆಲ್ಲಕ್ಕಿಂತ ಮುಖ್ಯವಾಗಿ ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ನೂತನವಾಗಿ ಆರಂಭ ಆಗುತ್ತಿರುವ ಅಮೆರಿಕದ ರಾಯಭಾರ ಕಚೇರಿ ವಿಚಾರ ಚರ್ಚೆಗೆ ಬರಲಿದೆ. ಬೆಂಗಳೂರು & ಅಹಮದಾಬಾದ್‌ನಲ್ಲಿ ನೂತನವಾಗಿ ಅಮೆರಿಕದ ರಾಯಭಾರ ಕಚೇರಿ ಆರಂಭಿಸಲು ಸಿದ್ಧತೆ ನಡೆಯುತ್ತಿದೆ. ಹಾಗೇ ಭಾರತ ಕೂಡ ಅಮೆರಿಕದ ಸಿಯಾಟಲ್ ಸೇರಿ ಒಟ್ಟು 2 ಕಡೆ ಹೊಸ ರಾಯಭಾರ ಕಚೇರಿ ಶುರು ಮಾಡಲು ಸಿದ್ಧತೆ ನಡೆಸಿದೆ.
ಹೀಗೆ ಭಾರತ ಮತ್ತು ಅಮೆರಿಕ ನಡುವೆ ಮಹತ್ವದ ದ್ವಿಪಕ್ಷೀ ಸಭೆಯಲ್ಲಿ ಪ್ರಮುಖವಾಗಿ ಈ 6 ವಿಚಾರಗಳು ಚರ್ಚೆಗೆ ಬರಲಿವೆ. ಹಾಗೇ ಭಾರತ ಮತ್ತು ಅಮೆರಿಕ ಸಂಬಂಧ ವೃದ್ಧಿಗಾಗಿ ಹಾಗೂ ಭಾರತ ಭವಿಷ್ಯದ ದೃಷ್ಟಿಯಿಂದ ಈ ಒಪ್ಪಂದಗಳು ಸಾಕಷ್ಟು ಮಹತ್ವ ಪಡೆದಿವೆ. ಹೀಗಾಗಿ ಜೋ ಬೈಡನ್ ಅವರ ಭೇಟಿ ಇಡೀ ಜಗತ್ತಿನ ಗಮನ ಸೆಳೆದಿದೆ. ಆದರೆ ಇದೇ ವೇಳೆ ಜೋ ಬೈಡನ್ ಅವರ ಪತ್ನಿಗೆ ಕೊರೊನಾ ಕನ್ಫರ್ಮ್ ಆಗಿದ್ದು, ಚಿಂತೆ ತರಿಸಿದೆ.

ಜೋ ಬೈಡನ್ ಭಾರತಕ್ಕೆ ಬರಲ್ವಾ?
ಹೌದು, ಭಾರತ ಮತ್ತು ಅಮೆರಿಕ ಸಂಬಂಧ ಮತ್ತಷ್ಟು ಗಟ್ಟಿಗೊಳಿಸಲು ಜಿ-20 ಶೃಂಗಸಭೆ ದೊಡ್ಡ ವೇದಿಕೆ ಒದಗಿಸಿತ್ತು. ಈಗಾಗಲೇ ರಷ್ಯಾ & ಚೀನಾ ಅಧ್ಯಕ್ಷರು ಜಿ-20 ಶೃಂಗಸಭೆಗೆ ಬರುವುದಿಲ್ಲ ಎಂದಿದ್ದಾರೆ. ಹೀಗಿದ್ದಾಗ ಅಮೆರಿಕ ಮತ್ತು ಭಾರತದ ಬಾಂಧವ್ಯ ಸಾರಲು ಈ ಜಿ-20 ಶೃಂಗಸಭೆ ವೇದಿಕೆ ಒದಗಿಸಿತ್ತು. ಈಗ ನೋಡಿದರೆ, ಮಹಾಮಾರಿ ಡೆಡ್ಲಿ ಕೊರೊನಾ ಬೈಡನ್ ಅವರ ಭೇಟಿಗೆ ಅಡ್ಡಿಯಾಗಿದೆ.
ಅಮೆರಿಕ ಅಧ್ಯಕ್ಷ ಬೈಡನ್ ಜೊತೆ ಜಿಲ್ ಬೈಡನ್ ಕೂಡ ಜಿ20 ಶೃಂಗಸಭೆಯಲ್ಲಿ ಭಾಗವಹಿಸಲು ಭಾರತಕ್ಕೆ ಆಗಮಿಸಬೇಕಿತ್ತು. ಆದರೆ ಇದೀಗ ಸಿಗುತ್ತಿರುವ ಮಾಹಿತಿ ಪ್ರಕಾರ ಜಿಲ್ ಬೈಡನ್‌ಗೆ ಕೊರೊನಾ ಬಂದಿದ್ದರು ಅವರ ಪತಿ ಬೈಡನ್‌ಗೆ ಬಂದಿಲ್ಲ. ಇದೇ ಕಾರಣಕ್ಕೆ ಜೋ ಬೈಡನ್ ಭಾರತಕ್ಕೆ ಬಂದರೂ ಜಿಲ್ ಬೈಡನ್ ಬರಲ್ಲ ಎನ್ನಲಾಗಿದೆ. ಬೈಡನ್ ಅವರಿಗೆ ಈಗಾಗಲೇ ಒಂದು ಬಾರಿ ಕೊರೊನಾ ಪರೀಕ್ಷೆ ಮಾಡಲಾಗಿದೆ. ಪರೀಕ್ಷೆಯಲ್ಲಿ ಜೋ ಬೈಡನ್ ಅವರಿಗೆ ಕೊರೊನಾ ದೃಢವಾಗಿಲ್ಲ. ಈ ಹಿನ್ನೆಲೆಯಲ್ಲಿ ಬೈಡನ್ ಬರುವುದು ಬಹುತೇಕ ಪಕ್ಕಾ.
ಪ್ರಧಾನಿ ಮೋದಿ ಜೊತೆ ಮಾತುಕತೆ
ಈ ಬಾರಿಯ ಜಿ20 ಶೃಂಗಸಭೆ ನೇತೃತ್ವ ಭಾರತ ವಹಿಸಿದೆ. ಜಿ20 ಶೃಂಗಸಭೆ ಸೆಪ್ಟೆಂಬರ್ 9, 10 ರಂದು ನವದೆಹಲಿಯಲ್ಲಿ ನಡೆಯುತ್ತೆ. ಹೀಗಾಗಿ ಭಾರತ ಜಿ20 ನಾಯಕತ್ವ ವಹಿಸಿರುವುದಕ್ಕಾಗಿ ಅಮೆರಿಕ ಅಧ್ಯಕ್ಷ ಬೈಡನ್, ಪ್ರಧಾನಿ ಮೋದಿ ಅವರನ್ನು ಅಭಿನಂದಿಸಲಿದ್ದಾರೆ. ಅಲ್ಲದೆ ಜಿ20 ಶೃಂಗಸಭೆಗೂ 2 ದಿನ ಮೊದಲು ಅಂದ್ರೆ ಸೆಪ್ಟೆಂಬರ್ 7 ಕ್ಕೆ ಬೈಡನ್ ನವದೆಹಲಿಗೆ ಬರಲಿದ್ದಾರೆ. ಸೆಪ್ಟೆಂಬರ್ 8 ರಂದು ಪಿಎಂ ಮೋದಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಇದು ಭಾರತ & ಅಮೆರಿಕದ ನಡುವೆ ಬಾಂಧವ್ಯ ಮತ್ತಷ್ಟು ಗಟ್ಟಿಗೊಳಿಸಲಿದೆ.












Click it and Unblock the Notifications