ದೇಶದಲ್ಲಿ "ಡೆಲ್ಟಾ ಪ್ಲಸ್" ಪ್ರಕರಣಗಳ ಸಂಖ್ಯೆ ಏರಿಕೆ
ನವದೆಹಲಿ, ಜೂನ್ 25: ದೇಶದಲ್ಲಿ ಹೊಸದಾಗಿ ಪತ್ತೆಯಾಗಿರುವ "ಡೆಲ್ಟಾ ಪ್ಲಸ್" ರೂಪಾಂತರಗಳ ಸಂಖ್ಯೆ 52ಕ್ಕೆ ಏರಿಕೆಯಾಗಿದೆ. "ಭಾರತದ ಹದಿನೆಂಟು ಜಿಲ್ಲೆಗಳಲ್ಲಿ ಶುಕ್ರವಾರದ ಹೊತ್ತಿಗೆ 52 ಪ್ರಕರಣಗಳು ದಾಖಲಾಗಿವೆ" ಎಂದು ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರದ ನಿರ್ದೇಶಕ ಸುಜೀತ್ ಸಿಂಗ್ ಮಾಹಿತಿ ನೀಡಿದ್ದಾರೆ.
ದೇಶದಲ್ಲಿ ಕೊರೊನಾ ಪರಿಸ್ಥಿತಿ ಸಂಬಂಧ ಪತ್ರಿಕಾಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು. ಮಂಗಳವಾರ ಡೆಲ್ಟಾ ಪ್ಲಸ್ ರೂಪಾಂತರವನ್ನು "ಕಳವಳಕಾರಿ ರೂಪಾಂತರ" ಎಂದು ಕೇಂದ್ರ ಆರೋಗ್ಯ ಸಚಿವಾಲಯ ಘೋಷಣೆ ಮಾಡಿತ್ತು.
"ದೇಶದ 28 ಕಡೆಗಳಲ್ಲಿ INSACOG ಪ್ರಯೋಗಾಲಯಗಳಿದ್ದು, ಹೊಸ ರೂಪಾಂತರ ಸೋಂಕಿನ ಹರಡುವಿಕೆ ವೇಗ, ಶ್ವಾಸಕೋಶದ ಮೇಲೆ ಬೀರುವ ಪ್ರಭಾವ, ಮೊನೊಕ್ಲೋನಲ್ ಪ್ರತಿಕಾಯ ವ್ಯವಸ್ಥೆ ಇಳಿಮುಖಗೊಳಿಸುವಲ್ಲಿ ಹೊಸ ವೈರಸ್ ಪಾತ್ರದ ಬಗ್ಗೆ ಪರಿಶೋಧನೆ ನಡೆಸಲಾಗುತ್ತದೆ," ಎಂದು ಕೇಂದ್ರ ಆರೋಗ್ಯ ಸಚಿವಾಲಯ ಘೋಷಿಸಿದೆ.

ಆದರೆ "ಪ್ರಸ್ತುತ ಡೆಲ್ಟಾ ಪ್ಲಸ್ ರೂಪಾಂತರದ ಬಗ್ಗೆ ಜನರು ಆತಂಕಕ್ಕೆ ಒಳಗಾಗುವ ಅವಶ್ಯಕತೆಯಿಲ್ಲ. ಡೆಲ್ಟಾ ರೂಪಾಂತರ ರೋಗಾಣುವಿಗಿಂತ ಡೆಲ್ಟಾ ಪ್ಲಸ್ ರೂಪಾಂತರವೇ ಹೆಚ್ಚು ಅಪಾಯಕಾರಿ ಅಥವಾ ದೇಶದಲ್ಲಿ ಕೊರೊನಾ ವೈರಸ್ ಸೋಂಕಿನ ಮೂರನೇ ಅಲೆಗೆ ಡೆಲ್ಟಾ ಪ್ಲಸ್ ಪ್ರಮುಖ ಕಾರಣವಾಗಲಿದೆ ಎಂದು ಹೇಳುವ ಯಾವುದೇ ಸಾಕ್ಷ್ಯಗಳು ಇದುವರೆಗೂ ಪತ್ತೆಯಾಗಿಲ್ಲ," ಎಂದು ತಜ್ಞ ಡಾ. ಅನುರಾಗ್ ಅಗರ್ವಾಲ್ ಹೇಳಿದ್ದಾರೆ.
ಭಾರತದಲ್ಲಿ ಮೊದಲು ಡೆಲ್ಟಾ (B.1.617.2) ರೂಪಾಂತರ ಪತ್ತೆಯಾಗಿ, ದೇಶದಲ್ಲಿ ಕಳವಳಕಾರಿ ಪರಿಸ್ಥಿತಿಗೆ ಕಾರಣವಾಯಿತು. ಕೊರೊನಾ ಎರಡನೇ ಅಲೆಯಲ್ಲಿ ಏರಿದ ಸಾವು ನೋವಿಗೂ ಈ ರೂಪಾಂತರವೇ ಕಾರಣವಾಗಿತ್ತು. ಇದೀಗ ಇದೇ ರೂಪಾಂತರದಿಂದ ಮತ್ತೊಂದು ರೂಪಾಂತರ ಸೃಷ್ಟಿಯಾಗಿದೆ. ಅದೇ ಡೆಲ್ಟಾ ಪ್ಲಸ್ (B.1.617.2.1/(AY.1). ಈ ಸೋಂಕು ಪತ್ತೆಯಾದ ಆರಂಭಿಕ ದಿನಗಳಲ್ಲಿ ಇದು ಕಳವಳಕಾರಿ ಸೋಂಕು ಎಂದು ಪರಿಗಣಿಸಿರಲಿಲ್ಲ. ಆದರೆ ಕೆಲವೇ ದಿನಗಳ ಅಂತರದಲ್ಲಿ ದೇಶದಲ್ಲಿ 52 ಪ್ರಕರಣಗಳು ಪತ್ತೆಯಾಗಿವೆ.
ಮಹಾರಾಷ್ಟ್ರ, ಮಧ್ಯಪ್ರದೇಶ, ಕೇರಳ, ಕರ್ನಾಟಕ, ತಮಿಳುನಾಡು, ಜಮ್ಮು, ಪಂಜಾಬ್, ಆಂಧ್ರಪ್ರದೇಶದಲ್ಲಿ ಈ ಪ್ರಕರಣ ಪತ್ತೆಯಾಗಿದೆ.












Click it and Unblock the Notifications