₹38 ಸಾವಿರ ಸಂಬಳದ ಉದ್ಯೋಗ ಬಿಟ್ಟು ಟೀ ಅಂಗಡಿ ತೆರೆದ ಕಾರ್ಪೊರೇಟ್ ಉದ್ಯೋಗಿ; ಈಗ ತಿಂಗಳಿಗೆ ಲಕ್ಷಾಂತರ ರೂ. ಆದಾಯ
ಯಾರಿಗೇ ಆಗಲಿ ಕೆಲಸಕ್ಕೆ ಸೇರುವಾಗಲೇ ಸ್ಯಾಲರಿ ಚೆನ್ನಾಗಿ ಇರಬೇಕು ಎನ್ನುವುದು ಸಾಮಾನ್ಯ ಬೇಡಿಕೆಯಾಗಿರುತ್ತದೆ. ಆದರೆ ಕೆಲವೊಮ್ಮೆ, ಸಂಬಳ ಹೆಚ್ಚಾಗದೇ ಇರುವುದು, ಉದ್ಯೋಗಗಳಲ್ಲಿನ ಸೀಮಿತ ಪ್ರಗತಿಯು ಹೊಸ ಕೆಲಸ ಹುಡುಕುವಂತೆ ಮಾಡುತ್ತದೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ಈ ಕಥೆಯು ಅಂಥದ್ದೇ ಒಂದು ಉದಾಹರಣೆಯಾಗಿದೆ. ಇಲ್ಲಿ ಒಬ್ಬ ವ್ಯಕ್ತಿ ತನ್ನ ಜೀವನದ ಪ್ರಮುಖ ನಿರ್ಧಾರವನ್ನು ತೆಗೆದುಕೊಂಡಿದ್ದಾನೆ. ತಿಂಗಳಿಗೆ 38,000 ಗಳಿಸುವ ತನ್ನ ಕೆಲಸವನ್ನು ಬಿಟ್ಟು ಸಣ್ಣ ವ್ಯಾಪಾರ ಪ್ರಾರಂಭಿಸಲು ಮುಂದಾಗಿದ್ದಾನೆ.
ಇದ್ದ ಕೆಲಸ ಬಿಟ್ಟು ಬ್ಯುಸಿನೆಸ್ಗೆ ಕೈ ಹಾಕುವ ನಿರ್ಧಾರ ಆರಂಭದಲ್ಲಿ ಯಾರಿಗೂ ಇಷ್ಟವಾಗಲಿಲ್ಲ. ಆತ ತಪ್ಪು ಮಾಡುತ್ತಿದ್ದಾನೆ ಎಂದು ಬೈದವರೇ ಹೆಚ್ಚು. ಆದರೆ, ತಾನು ತೆಗೆದುಕೊಂಡ ನಿರ್ಧಾರದ ಬಗ್ಗೆ ಆ ವ್ಯಕ್ತಿಗೆ ನಂಬಿಕೆಯಿತ್ತು. ತನ್ನ ನಿರ್ಧಾರದ ಬಗ್ಗೆ ಆತ್ಮವಿಶ್ವಾಸ ಹೊಂದಿದ್ದನು. ಕ್ರಮೇಣ ತನ್ನ ಕಠಿಣ ಪರಿಶ್ರಮದಿಂದ ಯಶಸ್ಸನ್ನು ಸಾಧಿಸಿದನು. ಈ ಕಥೆಯನ್ನು ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್ನಲ್ಲಿ ಅಂಕಿತ್ ಪಾಂಡೆ ಎನ್ನುವವರು ಶೇರ್ ಮಾಡಿದ್ದಾರೆ. ತನ್ನ ಪಕ್ಕದ ಮನೆಯವರು ಹಿಂದೆ ಟೆಲಿಪರ್ಫಾರ್ಮೆನ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಆ ಕೆಲಸದಲ್ಲಿ ಅವರಿಗೆ ಬರುತ್ತಿದ್ದದ್ದು ತಿಂಗಳಿಗೆ ಸುಮಾರು 38,000 ರೂ. ಸಂಬಳ ಎಂದು ಹೇಳಿದ್ದಾರೆ.

9ರಿಂದ 5 ಕೆಲಸ ಬಿಟ್ಟು, ಚಹಾ ಅಂಗಡಿ ತೆರೆದ ವ್ಯಕ್ತಿ
ಅಂಕಿತ್ ತಮ್ಮ ಪೋಸ್ಟ್ನಲ್ಲಿ ವಿವರಿಸಿದಂತೆ, ಆ ವ್ಯಕ್ತಿ ಕೆಲವು ತಿಂಗಳ ಹಿಂದಿನವರೆಗೂ ಕಾರ್ಪೊರೇಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಆದರೆ, ಹೆಚ್ಚುತ್ತಿರುವ ವೆಚ್ಚಗಳು ಮತ್ತು ವೃತ್ತಿಯಲ್ಲಿನ ಸೀಮಿತ ಬೆಳವಣಿಗೆಯಿಂದಾಗಿ, ಅವರು ಮೇ ತಿಂಗಳಲ್ಲಿ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದರು. ನಂತರ ಸುಮಾರು 2 ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಿ ಐಷಾರಾಮಿ ಟೀ ಸ್ಟಾಲ್ ತೆರೆದರು. ಹೆಚ್ಚಿನ ಜನಸಂದಣಿ ಇರುವ ಸ್ಥಳದಲ್ಲಿ ಅವರು ಈ ಅಂಗಡಿಯನ್ನು ತೆರೆದರು. ವಿಶೇಷವೆಂದರೆ, ಅವರು ಅಂಗಡಿಗೆ ಸಣ್ಣ ಕೆಫೆಯ ಲುಕ್ ನೀಡಲು ಪ್ರಯತ್ನಿಸಿದರು. ಚಹಾ ತಯಾರಿಸಲು ಮತ್ತು ಗ್ರಾಹಕರಿಗೆ ಸೇವೆ ಸಲ್ಲಿಸಲು ಅವರು ಇಬ್ಬರು ಮಹಿಳಾ ಉದ್ಯೋಗಿಗಳನ್ನು ಸಹ ನೇಮಿಸಿಕೊಂಡರು. ಕ್ರಮೇಣ, ಅವರ ಅಂಗಡಿಯಲ್ಲಿ ಗ್ರಾಹಕರ ಸಂಖ್ಯೆ ಹೆಚ್ಚಾಯಿತು. ಸಣ್ಣ ವ್ಯವಹಾರವು ವೇಗವನ್ನು ಪಡೆದುಕೊಳ್ಳಲು ಪ್ರಾರಂಭಿಸಿತು.
10, 20 ರೂ. ಮೌಲ್ಯದ ಚಹಾದಿಂದ ಲಕ್ಷ ಸಂಪಾದನೆ
ಈ ಚಹಾ ಅಂಗಡಿಯಲ್ಲಿ ಮೆನು ತುಂಬಾ ಸರಳವಾಗಿದೆ. ನಿಯಮಿತ ಚಹಾದ ಬೆಲೆ 10 ರೂ. ಮತ್ತು ಪ್ರೀಮಿಯಂ ಚಹಾದ ಬೆಲೆ 20. ಆದರೆ ಗ್ರಾಹಕರ ಸಕಾರಾತ್ಮಕ ಪ್ರತಿಕ್ರಿಯೆಯಿಂದಾಗಿ, ಮಾರಾಟವು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಅಂಕಿತ್ ಪ್ರಕಾರ, ಈ ಅಂಗಡಿಯಲ್ಲಿ ಈಗ ಪ್ರತಿದಿನ ಸುಮಾರು 400 ಕಪ್ ಚಹಾವನ್ನು ಮಾರಾಟ ಮಾಡಲಾಗುತ್ತದೆ. ಅಂದರೆ ದಿನಕ್ಕೆ ಸುಮಾರು 6,000 ರೂ.ಯ ವ್ಯಾಪಾರ. ಇದನ್ನು ತಿಂಗಳಿಗೆ ಲೆಕ್ಕ ಹಾಕಿದರೆ ಸುಮಾರು 1.8 ಲಕ್ಷ. ಅಂಗಡಿ ಬಾಡಿಗೆ, ಸರಬರಾಜು, ಉದ್ಯೋಗಿ ಸಂಬಳ ಮತ್ತು ಇತರ ಖರ್ಚುಗಳು ಸೇರಿದಂತೆ ಎಲ್ಲಾ ಖರ್ಚುಗಳನ್ನು ಕಡಿತಗೊಳಿಸಿದ ನಂತರ, ಆ ವ್ಯಕ್ತಿ ತಿಂಗಳಿಗೆ ಸುಮಾರು 1 ಲಕ್ಷ ರೂಪಾಯಿಯಷ್ಟು ಲಾಭವನ್ನು ಗಳಿಸುತ್ತಾನೆ.
ಚಹಾದ ವ್ಯಾಪಾರದಲ್ಲಿ ಯಶಸ್ಸನ್ನು ಸಾಧಿಸಿದ ನಂತರ, ಈ ವ್ಯಕ್ತಿ ತನ್ನ ವ್ಯವಹಾರವನ್ನು ವಿಸ್ತರಿಸಲು ನಿರ್ಧರಿಸಿದನು. ಅಲ್ಲದೆ ಇತ್ತೀಚೆಗೆ ತನ್ನ ಅಂಗಡಿಯಲ್ಲಿ ವಡಾ ಪಾವ್, ಸಮೋಸಾ ಮತ್ತು ಜಿಲೇಬಿಗಳನ್ನು ಮಾರಾಟ ಮಾಡುವ ಕೌಂಟರ್ ಕೂಡಾ ತೆರೆದಿದ್ದಾರೆ. ಆ ವ್ಯಕ್ತಿ ತನ್ನ ಹಳೆಯ ಕೆಲಸದಲ್ಲಿಯೇ ಇದ್ದಿದ್ದರೆ, ಬಹುಶಃ ತಿಂಗಳಿಗೆ 38,000 ರೂಪಾಯಿಯಷ್ಟೇ ಸಂಪಾದಿಸುತ್ತಿದ್ದ. ಯಾವಾಗ ಸ್ಯಾಲರಿ ಹೈಕ್ ಆಗುವುದೋ ಎಂದು ಕಾಯುತ್ತಾ ಇರಬೇಕಾಗಿತ್ತು. ಆದರೆ ತಾನು ಮಾಡಿದ ಧೈರ್ಯ ಮತ್ತು ತನ್ನ ಮೇಲಿನ ವಿಶ್ವಾಸದಿಂದ ತೆಗೆದುಕೊಂಡ ನಿರ್ಧಾರ ಅವರನ್ನು ಇಂದು ಯಶಸಿನತ್ತ ಕೊಂಡೊಯ್ದಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಜನರಿಂದ ಪ್ರಶಂಸೆ
ಈ ಕಥೆ ವೈರಲ್ ಆಗುತ್ತಿದ್ದಂತೆಯೇ ಸಾಮಾಜಿಕ ಮಾಧ್ಯಮದಲ್ಲಿ ಜನರು ಆ ವ್ಯಕ್ತಿಯ ನಿರ್ಧಾರ ಮತ್ತು ಕಠಿಣ ಪರಿಶ್ರಮವನ್ನು ಶ್ಲಾಘಿಸುತ್ತಿದ್ದಾರೆ. ಅನೇಕ ಬಳಕೆದಾರರು ಆರಾಮದಾಯಕವಾದ ಕೆಲಸವನ್ನು ಬಿಟ್ಟು ವ್ಯವಹಾರವನ್ನು ಪ್ರಾರಂಭಿಸುವುದು ಸುಲಭದ ನಿರ್ಧಾರವಲ್ಲ ಎಂದು ಹೇಳಿದ್ದಾರೆ. ಒಬ್ಬ ಬಳಕೆದಾರರು ಪ್ರತಿಯೊಂದು ಚಹಾ ಅಂಗಡಿಯೂ ಯಶಸ್ವಿಯಾಗುವುದಿಲ್ಲ ಎಂದು ಬರೆದಿದ್ದಾರೆ.ಇಲ್ಲಿ ಕಠಿಣ ಪರಿಶ್ರಮ ಮತ್ತು ಸರಿಯಾದ ತಂತ್ರ ಎರಡೂ ಯಶಸ್ಸಿಗೆ ಅತ್ಯಗತ್ಯ. ಯಶಸ್ಸಿನತ್ತ ಸಾಗಬೇಕಾದರೆ ಅಪಾಯಗಳನ್ನು ತೆಗೆದುಕೊಳ್ಳುವ ಧೈರ್ಯವೂ ಬೇಕು ಎಂದು ಮತ್ತೊಬ್ಬ ಬಳಕೆದಾರರು ಹೇಳಿದ್ದಾರೆ.
ಕಠಿಣ ಪರಿಶ್ರಮ ಮತ್ತು ನಂಬಿಕೆಯ ಕಥೆ
ಈ ವೈರಲ್ ಕಥೆಯ ದೊಡ್ಡ ಸಂದೇಶವೆಂದರೆ ಯಶಸ್ಸು ಕೇವಲ ಕೆಲಸ ಮತ್ತು ಸಂಬಳವಲ್ಲ. ಒಬ್ಬ ವ್ಯಕ್ತಿಗೆ ಸರಿಯಾದ ಮನಸ್ಥಿತಿ, ಕಷ್ಟಪಟ್ಟು ಕೆಲಸ ಮಾಡುವ ಉತ್ಸಾಹ ಮತ್ತು ಹೊಸದನ್ನು ಪ್ರಯತ್ನಿಸುವ ಧೈರ್ಯವಿದ್ದರೆ, ತಮ್ಮದೇ ಆದ ಹಾದಿಯನ್ನು ರೂಪಿಸಿಕೊಳ್ಳಬಹುದು. ಆದರೂ ವ್ಯವಹಾರವನ್ನು ಪ್ರಾರಂಭಿಸುವುದು ಅಂದುಕೊಂಡಷ್ಟು ಸುಲಭವಲ್ಲ. ಆದರೆ ಈ ವ್ಯಕ್ತಿಯ ಕಥೆಯು ಜೀವನದಲ್ಲಿ ದೊಡ್ಡ ಬದಲಾವಣೆಯನ್ನು ತರಲು ದೊಡ್ಡ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ ಎನ್ನುವುದನ್ನು ತೋರಿಸುತ್ತದೆ.


Click it and Unblock the Notifications
