ಹೋಯ್ತು.. ಹೋಯ್ತು.. ಕೆಲಸ ಹೋಯ್ತು.. ಲಕ್ಷ ಲಕ್ಷ ಉದ್ಯೋಗ ಕಟ್?
ಉದ್ಯೋಗ ಪುರುಷರ ಲಕ್ಷಣ ಅನ್ನೋ ಮಾತು ಇದೆ, ಆದರೆ ಆಧುನಿಕ ಕಾಲದಲ್ಲಿ ಅದ್ರಲ್ಲೂ ಬೆಂಗಳೂರು ರೀತಿ ಬೃಹತ್ ನಗರ ಪ್ರದೇಶಗಳಲ್ಲಿ ಕೆಲಸ ಮಾಡಲು ಪುರುಷರು ಮಾತ್ರವಲ್ಲ ಮಹಿಳೆಯರೂ ಸಿದ್ಧರಾಗಿ ಇರಬೇಕು. ಯಾಕಂದ್ರೆ ಗಂಡ & ಹೆಂಡತಿ ಇಬ್ಬರೂ ದುಡಿಯದಿದ್ದರೆ ಸಂಸಾರ ನಿಭಾಯಿಸುವುದು ಕಷ್ಟ. ಇನ್ನು ಕೆಲಸ ಹುಡುಕುವುದು ಕೂಡ ಕಷ್ಟದ ಕಾರ್ಯ. ಹೀಗಿದ್ದಾಗಲೇ ಲಕ್ಷ ಲಕ್ಷ ಜನರ ಉದ್ಯೋಗ ಹೋಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಲಕ್ಷ ಜನರು ಕೆಲಸ ಕಳೆದುಕೊಂಡು ಮನೆಯಲ್ಲಿ ಕೂರುವ ಪರಿಸ್ಥಿತಿ ಬರಲಿದೆಯಂತೆ!
ಅಂದಹಾಗೆ 'ಎಐ' (Artificial Intelligence) ತಂತ್ರಜ್ಞಾನ ಮತ್ತಷ್ಟು ಗಟ್ಟಿಯಾಗಿ, ದೊಡ್ಡ ಮಟ್ಟದಲ್ಲಿ ಜಾರಿಗೆ ಬರುತ್ತಿರುವ ಸಮಯದಲ್ಲಿ ಉದ್ಯೋಗ ಕಡಿತ ಕೂಡ ಹೆಚ್ಚುತ್ತಿದೆ. ಅದರಲ್ಲೂ 2024 ರಲ್ಲಿ ಉದ್ಯೋಗ ಕಡಿತದ ಪ್ರಮಾಣ ಕಡಿಮೆ ಆಗಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಆ ನಿರೀಕ್ಷೆಗಳು ಇದೀಗ ಸುಳ್ಳಾಗಿ ಹೋಗಿದ್ದು, ಟೆಕ್ ಕಂಪನಿಗಳ ಲಕ್ಷಾಂತರ ಕೆಲಸಗಾರರು ಮನೆಯಲ್ಲಿ ಕೂರುವ ಪರಿಸ್ಥಿತಿ ಬಂದಿದೆ. ಅಂತಾರಾಷ್ಟ್ರೀಯ ಸಂಸ್ಥೆಯು ಈ ಬಗ್ಗೆ ನಡೆಸಿದ ಅಧ್ಯಯನ ಪ್ರಕಾರ ಟೆಕ್ ಕಂಪನಿಗಳು 2024ರ ಆಗಸ್ಟ್ 20ರ ತನಕ ಸುಮಾರು 124,000 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಿವೆ ಎನ್ನಲಾಗಿದೆ.

ಕೆಲಸದಿಂದ ತೆಗೆಯಲು ಕಾರಣ ಏನು?
'ಕೊರೊನಾ' ಎಂಬ ಹೆಮ್ಮಾರಿ ಕಾಟ ಶುರುವಾದ ನಂತರ ಪ್ರಪಂಚದಲ್ಲಿ ದೊಡ್ಡ ಮಟ್ಟದ ಬದಲಾವಣೆ ಆಗಿದೆ. ಅದರಲ್ಲೂ ಕೋಟಿ ಕೋಟಿ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಈ ಪೈಕಿ ಟೆಕ್ಕಿಗಳ ಕೆಲಸಕ್ಕೆ ಕಂಟಕ ಎದುರಾಗಿದ್ದು, 2022 ರಿಂದ ಇಲ್ಲಿಯವರೆಗೂ ಒಟ್ಟಾರೆ 428,449ಕ್ಕೂ ಹೆಚ್ಚು ಜನರು ಕೆಲಸ ಕಳೆದುಕೊಂಡಿದ್ದಾರೆ ಎಂಬ ಮಾಹಿತಿ ಸಮೀಕ್ಷೆಯಲ್ಲಿ ಸಿಕ್ಕಿದೆ. ಉದ್ಯೋಗಿಗಳನ್ನ ದೊಡ್ಡ ದೊಡ್ಡ ಟೆಕ್ ಕಂಪನಿಗಳೇ ತೆಗೆದು ಹಾಕುತ್ತಿದ್ದು, ಇದಕ್ಕೆ ಕಾರಣ ಹಲವಾರು. ಪ್ರಮುಖವಾಗಿ 'ಎಐ' (Artificial Intelligence) ತಂತ್ರಜ್ಞಾನದ ಬೆಳವಣಿಗೆ ಹಾಗೂ ವೆಚ್ಚ ಕಡಿತ, ಜಾಗತಿಕ ಕುಸಿತ, ಸಾಂಕ್ರಾಮಿಕ ಸಮಯದಲ್ಲಿ ಅತಿ ಹೆಚ್ಚು ನೇಮಕಾತಿ ಕಾರಣ ಎನ್ನಲಾಗಿದೆ.
ಟೆಕ್ ಕಂಪನಿಗಳು ಹೀಗೆ ತಮ್ಮ ಸಂಸ್ಥೆಗಳಲ್ಲಿನ ತಪ್ಪು ಸರಿ ಮಾಡಿಕೊಂಡು, ಹೊಸ ಹೊಸ ಅಧ್ಯಾಯ ಆರಂಭ ಮಾಡಲು ಇದೀಗ ಲಕ್ಷ ಲಕ್ಷ ಉದ್ಯೋಗಿಗಳನ್ನು ಕೆಲಸದಿಂದ ಕಿತ್ತುಹಾಕಿ ಮನೆಗೆ ಕಳುಹಿಸಿವೆ. ಹಾಗೇ ಮುಂದಿನ ದಿನಗಳಲ್ಲಿ ಮತ್ತಷ್ಟು ಲಕ್ಷ ಉದ್ಯೋಗಿಗಳು ಕೆಲಸವನ್ನ ಕಳೆದುಕೊಂಡು ಮನೆಯಲ್ಲಿ ಕೂರುವ ಪರಿಸ್ಥಿತಿ ಬರಲಿದೆ ಎಂಬ ಮಾತು ಕೇಳಿಬಂದಿದೆ. ಈ ರೀತಿ ಯಾವ ಯಾವ ಟೆಕ್ ಕಂಪನಿಗಳು ತಮ್ಮ ತಮ್ಮ ಉದ್ಯೋಗಿಗಳನ್ನ ಕೆಲಸದಿಂದ ಈಗ ತೆಗೆದು ಹಾಕಿವೆ ಗೊತ್ತಾ? ಮುಂದೆ ಓದಿ.
ಲಕ್ಷಾಂತರ ಕೆಲಸಗಾರರ ಪರದಾಟ?
ಈಗಿನ ಮಾಹಿತಿ ಪ್ರಕಾರ, ಮೈಕ್ರೋಸಾಫ್ಟ್ ಸಂಸ್ಥೆ ತನ್ನ ಗೇಮಿಂಗ್ ವಿಭಾಗದಲ್ಲಿ ಸುಮಾರು 2,000 ಉದ್ಯೋಗಿಗಳನ್ನ ಜನವರಿ ತಿಂಗಳಲ್ಲೇ ತೆಗೆದು ಹಾಕಿತ್ತು. ಆ ನಂತರ ಮತ್ತೆ ಜೂನ್ ತಿಂಗಳಲ್ಲಿ ಸುಮಾರು 1,000 ಉದ್ಯೋಗಿಗಳನ್ನ ತೆಗೆದು ಹಾಕಿದ್ದು ಇದರ ಜೊತೆಗೆ ಆಪಲ್, ಅಮೆಜಾನ್, ಟೆಸ್ಲಾ ಸಂಸ್ಥೆ ಸೇರಿದಂತೆ, ಡೆಲ್, ಇಂಟೆಲ್, ಐಬಿಎಂ, ಸಿಸ್ಕೋ, ಎಸ್‌ಎಪಿ ಹೀಗೆ ದೊಡ್ಡ ದೊಡ್ಡ ಟೆಕ್ ಕಂಪನಿಗಳೇ ಸಾವಿರಾರು ಉದ್ಯೋಗಿಗಳನ್ನ ಮನೆಗೆ ಕಳುಹಿಸಿವೆ. ಈ ಪಟ್ಟಿಯಲ್ಲಿ ಮಧ್ಯಮ ಗಾತ್ರದ ಕಂಪನಿಗಳು ಹಿಂದೆ ಬಿದ್ದಿಲ್ಲ, ಯಾಕಂದ್ರೆ ಈ ಕಂಪನಿಗಳಿಂದ ಕೂಡ ಸಾಕಷ್ಟು ಉದ್ಯೋಗಿಗಳನ್ನ ಕೆಲಸದಿಂದ ತೆಗೆದು ಹಾಕಲಾಗಿದೆ.












Click it and Unblock the Notifications