10 ವರ್ಷದಲ್ಲಿ ರೈಲು ಅಪಘಾತಗಳಲ್ಲಿ 2.6 ಲಕ್ಷ ಜನ ಸಾವು: ಎನ್‌ಸಿಆರ್‌ಬಿ ವರದಿ
ಒಡಿಶಾದ ಬಾಲಸೋರ್‌ನಲ್ಲಿ ಶುಕ್ರವಾರ ಸಂಭವಿಸಿದ ಭೀಕರ ರೈಲು ಅಪಘಾತದಲ್ಲಿ 288 ಪ್ರಯಾಣಿಕರು ಸಾವನ್ನಪ್ಪಿದ್ದು 900ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ. ಕಳೆದ ಮೂರು ದಶಕಗಳಲ್ಲಿ ನಡೆದ ದೊಡ್ಡ ರೈಲು ಅಪಘಾತ ಇದು ಎಂದು ಪರಿಗಣಿಸಲಾಗಿದೆ.
ರೈಲು ದುರಂತದ ನಂತರ ಭಾರತದ ರೈಲ್ವೆ ಇಲಾಖೆ ಕೈಗೊಂಡಿರುವಾ ಸುರಕ್ಷತಾ ಕ್ರಮಗಳ ಬಗ್ಗೆ ಸಾಕಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ) ದಾಖಲೆಗಳ ಪ್ರಕಾರ ಕಳೆದ 10 ವರ್ಷಗಳಲ್ಲಿ 2.6 ಲಕ್ಷ ಜನರು ರೈಲು ಅಪಘಾತಗಳಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.

ಎನ್‌ಸಿಆರ್‌ಬಿ ಭಾರತದಲ್ಲಿ ಅಪರಾಧಗಳ ಅಂಕಿ ಅಂಶಗಳನ್ನು ಕಲೆಹಾಕುವ ಮತ್ತು ವಿಶ್ಲೇಷಣೆ ಮಾಡುವ ಜವಾಬ್ದಾರಿ ಹೊಂದಿರುವ ಭಾರತದ ಸರ್ಕಾರಿ ಸಂಸ್ಥೆಯಾಗಿದೆ. ಗಮನಿಸಬೇಕಾದ ಮುಖ್ಯ ಸಂಗತಿ ಎಂದರೆ ಬಹುಪಾಲು ರೈಲ್ವೆ ಅಪಘಾತದ ಸಾವುಗಳು, ಒಡಿಶಾ ದುರಂತದಂತಹ ಘಟನೆಗಳಲ್ಲಿ ಸಂಭವಿಸಿಲ್ಲ, ಬದಲಾಗಿ ಜನ ರೈಲುಗಳಿಂದ ಕೆಳಗೆ ಬೀಳುವುದು, ಅಥವಾ ರೈಲುಗಳು ಜನರ ಮೇಲೆ ಹರಿಯುವುದರಿಂದ ಹೆಚ್ಚಿನ ಸಾವು ಸಂಭವಿಸಿದೆ ಎಂದು ದಾಖಲೆಗಳು ಹೇಳಿವೆ. 2017 ರಿಂದ 21 ರ ನಡುವಿನ ರೈಲ್ವೆ ಅಪಘಾತದ ಸಾವುಗಳಲ್ಲಿ ಶೇಕಡಾ 70 ರಷ್ಟು ಸಾವುಗಳು ಇದೇ ರೀತಿ ಸಂಭವಿಸಿದೆ ಎಂದು ಹೇಳಲಾಗಿದೆ.
ರೈಲು ಅಪಘಾತಗಳನ್ನು 5 ವಿಭಾಗಗಳಾಗಿ ವರ್ಗೀಕರಣ
ಎನ್‌ಸಿಆರ್‌ಬಿ ರೈಲ್ವೇ ಅಪಘಾತದ ಸಾವುಗಳನ್ನು ಐದು ವಿಭಾಗಗಳಲ್ಲಿ ವರ್ಗೀಕರಿಸುತ್ತದೆ. ಹಳಿತಪ್ಪುವಿಕೆಗಳು, ರೈಲುಗಳ ನಡುವೆ ಡಿಕ್ಕಿ, ಸ್ಫೋಟಗಳು/ಬೆಂಕಿ ಅವಘಡ, ರೈಲುಗಳಿಂದ ಬೀಳುವ ಜನರು ಅಥವಾ ರೈಲುಗಳು ಹಳಿಗಳ ಮೇಲೆ ಜನರಿಗೆ ಡಿಕ್ಕಿ ಹೊಡೆಯುವುದು ಮತ್ತು ಇತರ ಕಾರಣಗಳು.
ಎನ್‌ಸಿಆರ್‌ಬಿಯ ವರದಿಯ ಪ್ರಕಾರ 2011 ರಲ್ಲಿ, ಭಾರತದಲ್ಲಿ ರೈಲ್ವೆ ಅಪಘಾತಗಳಿಂದ ಸುಮಾರು 25,872 ಜನ ಪ್ರಾಣ ಕಳೆದುಕೊಂಡಿದ್ದಾರೆ. 2012 ರಲ್ಲಿ 27,000 ಮತ್ತು 2013 ರಲ್ಲಿ 27,765 ರೈಲು ಅಪಘಾತಗಳಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ, 2014 ರಲ್ಲಿ ಇದರ ಪ್ರಮಾಣ 25,000 ಜನರಿಗೆ ಕಡಿಮೆಯಾಯಿತು.
2017ರಿಂದ ಸಾವುಗಳ ಸಂಖ್ಯೆಯಲ್ಲಿ ಇಳಿಮುಖವಾಗಿದೆ, 2017ರಲ್ಲಿ 24000 ಜನ ಸಾವನ್ನಪ್ಪಿದರೆ, 2019ರಲ್ಲಿ 24,619 ಜನ ಪ್ರಾಣ ಕಳೆದುಕೊಂಡರು. 2020ರಲ್ಲಿ ಈ ಸಂಖ್ಯೆಯಲ್ಲಿ ಭಾರಿ ಕುಸಿತ ಕಂಡು, 11,968ಕ್ಕೆ ಇಳಿಯಿತು, ಕೋವಿಡ್ ಸಾಂಕ್ರಾಮಿಕದಿಂದ ರೈಲುಗಳ ಓಡಾಟ ಸ್ಥಗಿತವಾಗಿದ್ದು ಕೂಡ ಇದಕ್ಕೆ ಮುಖ್ಯ ಕಾರಣ. 2021ರಲ್ಲಿ ಸಾವುಗಳ ಸಂಖ್ಯೆ 16,431 ಕ್ಕೆ ಹೆಚ್ಚಾಯಿತು, ಕೋವಿಡ್ ಪೂರ್ವಕ್ಕಿಂತ ಕಡಿಮೆಯಾಗಿದ್ದು ಗಮನಾರ್ಹ.
ರೈಲಿನಿಂದ ಬಿದ್ದು, ರೈಲು ಹರಿದು ಹೆಚ್ಚು ಸಾವು
ರೈಲು ಅಪಘಾತದಲ್ಲಿ ಹೆಚ್ಚು ಸಾವುಗಳು ಸಂಭವಿಸಿರುವುದು ರೈಲಿನಿಂದ ಬೀಳುವುದು ಮತ್ತು ರೈಲು ಹರಿದು ಎಂದು ಅಂಕಿ ಅಂಶಗಳು ತೋರಿಸಿವೆ. 2021ರಲ್ಲಿ ರೈಲು ಅಪಘಾತಗಳಲ್ಲಿ 16,431 ಜನ ಸಾವನ್ನಪ್ಪಿದ್ದು, ಇದರಲ್ಲಿ ರೈಲಿನಿಂದ ಬಿದ್ದು, ರೈಲು ಹರಿದು 11,036 ಮಂದಿ ಸಾವನ್ನಪ್ಪಿದ್ದರೆ, ಇತರೆ ಕಾರಣಗಳಿಂದ 5,287 ಜನ ಸಾವನ್ನಪ್ಪಿದ್ದಾರೆ. ಇತರೆ ಕಾರಣ ಯಾವುದು ಎಂದು ಎನ್‌ಸಿಆರ್ ಬಿ ಸ್ಪಷ್ಟವಾಗಿ ನಮೂದಿಸಿಲ್ಲ.
2021ರಲ್ಲಿ ರೈಲು ಡಿಕ್ಕಿಯಿಂದ 86 ಮಂದಿ ಸಾವನ್ನಪ್ಪಿದ್ದು, ರೈಲು ಹಳಿ ತಪ್ಪಿದ್ದರಿಂದ 22 ಮಂದಿ ಸಾವನ್ನಪ್ಪಿದ್ದಾರೆ. 2021ರಲ್ಲಿ ರೈಲಿನಲ್ಲಿ ಬೆಂಕಿ ಮತ್ತು ಸ್ಫೋಟಗಳಲ್ಲಿ ಯಾವ ಸಾವು ಸಂಭವಿಸಿಲ್ಲ. 2017-2021ರ ಅವಧಿಯಲ್ಲಿ 1 ಲಕ್ಷ ರೈಲ್ವೆ ಅಪಘಾತ ಸಾವುಗಳಲ್ಲಿ 71,000 ಕ್ಕೂ ಹೆಚ್ಚು ಜನರ ರೈಲಿನಿಂದ ಬಿದ್ದು ಅಥವಾ ರೈಲು ಹರಿದು ಸಾವನ್ನಪ್ಪಿದ್ದಾರೆ.
ಮಹಾರಾಷ್ಟ್ರದಲ್ಲಿ ಹೆಚ್ಚು ಸಾವು
ಈ ಅವಧಿಯಲ್ಲಿ , ಕೇವಲ 293 ಜನರು ಹಳಿ ತಪ್ಪಿ ಸಾವನ್ನಪ್ಪಿದ್ದಾರೆ ಮತ್ತು 446 ಜನರು ಡಿಕ್ಕಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಅಂಕಿಅಂಶಗಳು ತಿಳಿಸಿವೆ. ಮಹಾರಾಷ್ಟ್ರದಲ್ಲಿ ರೈಲು ಅಪಘಾತದಲ್ಲಿ ಹೆಚ್ಚಿನ ಮಂದಿ ಸಾವನ್ನಪ್ಪಿದ್ದಾರೆ. 2017-2021ರ ನಡುವೆ ಮಹಾರಾಷ್ಟ್ರದಲ್ಲಿ 17,000 ಜನ ಸಾವನ್ನಪ್ಪಿದ್ದಾರೆ. ಉತ್ತರ ಪ್ರದೇಶದಲ್ಲಿ 13,074 ಮತ್ತು ಪಶ್ಚಿಮ ಬಂಗಾಳದಲ್ಲಿ 11,967 ಜನ ಮೃತಪಟ್ಟಿದ್ದಾರೆ. ಒಡಿಶಾದಲ್ಲಿ 1,845 ಸಾವುಗಳು ಸಂಭವಿಸಿವೆ.












Click it and Unblock the Notifications