ರಾಜಸ್ಥಾನದಲ್ಲಿ 120 ಜನರಲ್ಲಿ ಝಿಕಾ ವೈರಸ್ ಸೋಂಕು ಪತ್ತೆ
ಜೈಪುರ, ಅಕ್ಟೋಬರ್ 23: ಮಾರಣಾಂತಿಕ ಝಿಕಾ ವೈರಸ್ ಸೋಂಕು ರಾಜಸ್ಥಾನದಲ್ಲಿ 120 ಜನರಲ್ಲಿ ಪತ್ತೆಯಾಗಿದ್ದು, ಆತಂಕ ಮೂಡಿಸಿದೆ.
120 ಜನರಲ್ಲಿ ಸೋಂಕು ಪತ್ತೆಯಾಗಿದ್ದು, ಅವರಲ್ಲಿ 105 ಜನರಿಗೆ ಈಗಾಗಲೇ ಚಿಕಿತ್ಸೆ ನೀಡಲಾಗಿದೆ ಎಂದು ರಾಜಸ್ಥಾನ ಆರೋಗ್ಯ ಸಚಿವ ಕಲಿಚರಣ್ ಸರಾಫ್ ಹೇಳಿದ್ದಾರೆ.
ಸರಿಯಾದ ಚಿಕಿತ್ಸೆ ನೀಡಿದರೆ ಒಂದೇ ವಾರದಲ್ಲಿ ಸೋಂಕು ಕಡಿಮೆಯಾಗುತ್ತದೆ. ಹೆಚ್ಚು ಹೆಚ್ಚು ನೀರನ್ನು ಕುಡಿಯುವುದರಿಂದ ಮತ್ತು ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆ ಪಡೆಯುವುದರಿಂದ ರೋಗ ಶಮನವಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಸೊಳ್ಳೆಯಿಂದ ಬರುವ ಈ ರೋಗ ಡೆಂಗ್ಯೂ, ಚಿಕೂನ್ ಗುನ್ಯಾ, ಮಲೇರಿಯಾ ರೋಗಗಳಂತೇ ಲಕ್ಷಣಗಳನ್ನು ಹೊಂದಿರುತ್ತದೆ.
ಆದರೆ ಗಾಬರಿಪಡುವ ಅಗತ್ಯವಿಲ್ಲ. ಸರಿಯಾದ ಸಮಯದಲ್ಲಿ ರೋಗಪತ್ತೆ, ಚಿಕಿತ್ಸೆಯಿಂದ ರೋಗದಿಂದ ಬಚಾವಾಗಬಹುದು. ಅದೆಲ್ಲಕ್ಕಿಂತ ಸೋಂಕೇ ತಗುಲದಂತೆ ಮುನ್ನೆಚ್ಚರಿಕೆ ವಹಿಸುದರಿಂದ ಝಿಕಾ ವೈರಸ್ ನಿಂದ ಪಾರಾಗುವುದಕ್ಕೆ ಸಾಧ್ಯ.
ಝಿಕಾ ವೈರಸ್ ಗೆ ನಿರ್ದಿಷ್ಟವಾಗಿ ಇಂಥದೇ ಲಕ್ಷಣವೆಂದಿಲ್ಲ. ಸಾಮಾನ್ಯ ಜ್ವರದಂತೆ ಆರಂಭವಾಗುತ್ತದೆ. ಮೊದಲಿಗೆ ಕೊಂಚ ಜ್ವರ, ತಲೆನೋವು, ತುರಿಕೆ, ಕೀಲುನೋವು, ಮಾಂಸಖಂಡಗಳಲ್ಲಿ ನೋವು ಉಂಟಾಗುತ್ತದೆ. ಇದೇ ಉಲ್ಬಣಕ್ಕೆ ತೆರಳುತ್ತದೆ. ಇಂಥ ಲಕ್ಷಣಗಳು ಕಂಡುಬಂದಲ್ಲಿ, ಒಂದು ವಾರದೊಳಗೆ ಕಡಿಮೆಯಾಗದಿದ್ದಲ್ಲಿ ಒಮ್ಮೆ ವೈದ್ಯರನ್ನು ಕಂಡು ರಕ್ತಪರೀಕ್ಷೆಯ ಅಗತ್ಯವಿದ್ದರೆ ಮಾಡಿಸಬೇಕು.












Click it and Unblock the Notifications