ಕೋವಿಡ್: ದೇಶದಲ್ಲಿ ಸತತ ಎರಡನೆಯ ದಿನ 100ಕ್ಕಿಂತ ಕಡಿಮೆ ಸಾವು
ನವದೆಹಲಿ, ಫೆಬ್ರವರಿ 15: ದೇಶದಲ್ಲಿ ಸತತ ಎರಡನೆಯ ದಿನ ನೂರಕ್ಕಿಂತ ಕಡಿಮೆ ಕೋವಿಡ್ ಸಂಬಂಧಿ ಸಾವುಗಳು ವರದಿಯಾಗಿವೆ. ಆದರೆ ಸಕ್ರಿಯ ಪ್ರಕರಣಗಳಲ್ಲಿ ಏರಿಕೆಯಾಗಿದೆ. ಇದಕ್ಕೆ ಕಾರಣವಾಗಿರುವುದು ಮಹಾರಾಷ್ಟ್ರದಲ್ಲಿನ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿನ ಹೆಚ್ಚಳ.
ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 11,649 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ ಎಂದು ಅರೋಗ್ಯ ಸಚಿವಾಲಯ ಸೋಮವಾರ ಮಾಹಿತಿ ನೀಡಿದೆ. ಒಟ್ಟು 90 ಮಂದಿ ಸೋಂಕಿತರು ಮೃತಪಟ್ಟಿದ್ದರೆ, 9,489 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಇದರಿಂದ ದೇಶದ ಒಟ್ಟು ಪ್ರಕರಣಗಳ ಸಂಖ್ಯೆ 1,09,16,589ಕ್ಕೆ ಏರಿಕೆಯಾಗಿದೆ. ಒಟ್ಟು ಸಾವುಗಳ ಸಂಖ್ಯೆ 1,55,732ಕ್ಕೆ ತಲುಪಿದೆ. ಇದುವರೆಗೂ ಒಟ್ಟು 1,06,21,220 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 1,39,637ಗೆ ತಲುಪಿದೆ.

ಮಹಾರಾಷ್ಟ್ರದಲ್ಲಿ ಒಂದು ದಿನದಲ್ಲಿ 4,092 ಜನರಿಗೆ ಕೋವಿಡ್ ದೃಢಪಟ್ಟಿದೆ. ಕಳೆದ 24 ಗಂಟೆಗಳಲ್ಲಿ 40 ಮಂದಿ ಜೀವ ಕಳೆದುಕೊಂಡಿದ್ದಾರೆ. ಮುಂಬೈನಲ್ಲಿ 645 ಹೊಸ ಪ್ರಕರಣ ಹಾಗೂ 4 ಸಾವು ವರದಿಯಾಗಿದೆ. 39 ದಿನಗಳ ಬಳಿಕ ಮಹಾರಾಷ್ಟ್ರದಲ್ಲಿ 4 ಸಾವಿರಕ್ಕಿಂತ ಹೆಚ್ಚು ಪ್ರಕರಣಗಳು ದಾಖಲಾಗಿವೆ.
ದೇಶದಾದ್ಯಂತ ಭಾನುವಾರ ಸಂಜೆಯವರೆಗೆ ಒಟ್ಟು 82,85,295 ಜನರಿಗೆ ಲಸಿಕೆ ನೀಡಲಾಗಿದೆ. ಕರ್ನಾಟಕ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಇಂದಿನಿಂದ ಎರಡನೆಯ ಡೋಸ್ ಲಸಿಕೆ ನೀಡುವ ಕಾರ್ಯಕ್ರಮ ಆರಂಭವಾಗಲಿದೆ.












Click it and Unblock the Notifications