ದೇಶಿಯ ವಿಮಾನದಲ್ಲಿ ಬಂದರೆ ಕ್ವಾರಂಟೈನ್ ಇಲ್ಲ
ಹೈದರಾಬಾದ್, ಮೇ 25 : ದೇಶಿಯ ವಿಮಾನದಲ್ಲಿ ಹೈದರಾಬಾದ್ ನಗರಕ್ಕೆ ಆಗಮಿಸುವ ಪ್ರಯಾಣಿಕರಿಗೆ ಕ್ವಾರಂಟೈನ್ ಇರುವುದಿಲ್ಲ ಎಂದು ತೆಲಂಗಾಣ ಸರ್ಕಾರ ಘೋಷಣೆ ಮಾಡಿದೆ. ಸೋಮವಾರದಿಂದ ದೇಶಿಯ ವಿಮಾನ ಸೇವೆಗಳು ದೇಶದಲ್ಲಿ ಆರಂಭವಾಗಿವೆ.
Recommended Video
ವಿಮಾನ ನಿಲ್ದಾಣಕ್ಕೆ ಆಗಮಿಸುವ ಪ್ರಯಾಣಿಕರನ್ನು ಪರೀಕ್ಷೆ ಮಾಡಲಾಗುತ್ತದೆ. ಅವರಿಗೆ ಕೋವಿಡ್ - 19ನ ಯಾವುದೇ ಲಕ್ಷಣಗಳು ಇಲ್ಲವಾದಲ್ಲಿ ಕ್ವಾರಂಟೈನ್ ಅಗತ್ಯವಿಲ್ಲ. ಮನೆಗೆ ಹೋಗಲು ಅವಕಾಶ ನೀಡಲಾಗುತ್ತದೆ ಎಂದು ಸರ್ಕಾರ ಹೇಳಿದೆ.
ದೇಶಿಯ ವಿಮಾನದಲ್ಲಿ ಆಗಮಿಸಿ ಮನೆಗೆ ಹೋದವರು ಕೆಲವೊಂದು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಒಂದು ವೇಳೆ ಸೋಂಕಿನ ಲಕ್ಷಣ ಕಂಡು ಬಂದರೆ ಕ್ವಾರಂಟೈನ್ ಅಥವ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕಳಿಸಲಾಗುತ್ತದೆ ಎಂದು ಸರ್ಕಾರ ತನ್ನ ಮಾರ್ಗಸೂಚಿಯಲ್ಲಿ ಸ್ಪಷ್ಟಪಡಿಸಿದೆ.

ಕೇಂದ್ರ ಸರ್ಕಾರ ನೀಡಿರುವ ಕ್ವಾರಂಟೈನ್ ಮಾರ್ಗಸೂಚಿಯನ್ನು ರಾಜ್ಯ ಸರ್ಕಾರ ಪಾಲನೆ ಮಾಡಲಿದೆ. ವಿದೇಶದಿಂದ ವಿಮಾನದಲ್ಲಿ ಬರುವ ಎಲ್ಲರಿಗೂ 7 ದಿನಗಳ ಕ್ವಾರಂಟೈನ್ ಕಡ್ಡಾಯವಾಗಿದೆ ಎಂದು ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ.
ಗರ್ಭಿಣಿ ಮಹಿಳೆ, ವೃದ್ಧರು, ಕ್ಯಾನ್ಸರ್, ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳನ್ನು ಮನೆಗೆ ಕಳಿಸಲಾಗುತ್ತದೆ. ಅವರಿಗೆ ಕ್ವಾರಂಟೈನ್‌ನಿಂದ ವಿನಾಯಿತಿ ಇದೆ ಎಂದು ರಾಜ್ಯ ಸರ್ಕಾರ ಹೇಳಿದೆ.
ನಗರಕ್ಕೆ ಆಗಮಿಸುವ ಜನರಿಗೆ ಆರೋಗ್ಯ ಇಲಾಖೆಯ ಅಪ್ಲಿಕೇಶನ್ ಇನ್ ಸ್ಟಾಲ್ ಮಾಡಿಕೊಳ್ಳಲು ಸೂಚನೆ ನೀಡಲಾಗುತ್ತದೆ. ಮನೆಗೆ ಕಳಿಸಿದ ಪ್ರಯಾಣಿಕರನ್ನು ಈ ಅಪ್ಲಿಕೇಶನ್ ಮೂಲಕ ಸಂಪರ್ಕ ಮಾಡಲಾಗುತ್ತದೆ. ಅವರಿಗೆ ಕೋವಿಡ್ - 19 ಸೋಂಕು ಕಾಣಿಸಿಕೊಂಡರೆ ಆಸ್ಪತ್ರೆಗೆ ದಾಖಲು ಮಾಡಲಾಗುತ್ತದೆ ಎಂದು ಸರ್ಕಾರ ತಿಳಿಸಿದೆ.
ತೆಲಂಗಾಣ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1854, ಇದುವರೆಗೂ 53 ಜನರು ಮೃತಪಟ್ಟಿದ್ದಾರೆ. ಹೈದರಾಬಾದ್‌ನಲ್ಲಿ ಸೋಂಕಿತರ ಸಂಖ್ಯೆ 1147.












Click it and Unblock the Notifications