ಬಾಡಿಗೆ ಮರ್ಸಿಡಿಸ್ ಬೆಂಜ್ ಕಾರಿನಲ್ಲಿ ಗುಂಡಿಟ್ಟುಕೊಂಡು ಉದ್ಯಮಿ ಆತ್ಮಹತ್ಯೆ
ಹೈದರಾಬಾದ್ (ತೆಲಂಗಾಣ), ಜುಲೈ 4: ವಿಲಕ್ಷಣ ಘಟನೆಯೊಂದರಲ್ಲಿ ಉದ್ಯಮಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮರ್ಸಿಡಿಸ್ ಬೆಂಜ್ ಕಾರನ್ನು ಬಾಡಿಗೆಗೆ ಪಡೆದಿದ್ದ ಆತ, ಕಾರಿನಲ್ಲಿ ಗುಂಡಿಟ್ಟುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೈಬರಾಬಾದ್ ನ ನರ್ಸಿಂಗಿಯಲ್ಲಿನ ಹೊರ ವರ್ತುಲ ರಸ್ತೆಯಲ್ಲಿ ವರದಿ ಆಗಿದೆ.
ಲೋವರ್ ಟ್ಯಾಂಕ್ ಬಂಡ್ ನ ನಿವಾಸಿ, ಮೂವತ್ತೆರಡು ವರ್ಷದ ಫೈಜಾನ್ ಅಹ್ಮದ್ ಆತ್ಮಹತ್ಯೆ ಮಾಡಿಕೊಂಡವರು. ವಿದೇಶಿ ಕನ್ಸಲ್ಟೆನ್ಸಿ ನಡೆಸುತ್ತಿದ್ದರು. ಆರ್ಥಿಕ ಸಮಸ್ಯೆಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಆದರೂ ತನಿಖೆ ನಡೆದಿದೆ. ಪೊಲೀಸರು ನೀಡಿದ ಮಾಹಿತಿ ಪ್ರಕಾರ, ಗುರುವಾರ ಮಧ್ಯಾಹ್ನ ಮೂರು ಗಂಟೆ ಹೊತ್ತಿಗೆ ಪಹರೆ ಕಾಯುವ ವೇಳೆಯಲ್ಲಿ ಗಚ್ಚಿಬೌಳಿ ಮಾರ್ಗದಲ್ಲಿ ಕೆಂಪು ಬೆಂಜ್ ಕಾರು ನಿಂತಿರುವುದು ಕಂಡುಬಂದಿದೆ.
ಅದರ ಒಳಗೆ ರಕ್ತದ ಮಡುವಿನಲ್ಲಿ ವ್ಯಕ್ತಿಯೊಬ್ಬರು ಬಿದ್ದಿರುವುದು ಕಂಡುಬಂದಿದೆ. ಕಾರಿನ ನೋಂದಣಿ ಸಂಖ್ಯೆಯ ಆಧಾರದಲ್ಲಿ ಅದು ಬಾಡಿಗೆಗೆ ಪಡೆದದ್ದು ಎಂಬುದು ಗೊತ್ತಾಗಿದೆ. ಚಾಲಕನ ಸೀಟಿನಲ್ಲಿ ಕೂತುಕೊಂಡು ವ್ಯಕ್ತಿಗೆ ತಲೆಗೆ ಗುಂಡಿಟ್ಟುಕೊಂಡಿದ್ದರು. ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತು. ಆದರೆ ಅವರು ಸ್ಥಿತಿ ಗಂಭೀರವಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಖಾಲಿ ಕಾಟ್ರಿಜ್ ಹಾಗೂ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಫೈಜಾನ್ ಸಾವಿನ ಬಗ್ಗೆ ಕುಟುಂಬದವರಿಗೆ ಮಾಹಿತಿ ನೀಡಿರುವ ಪೊಲೀಸರು, ಆತ ಹಾಗೂ ಪಿಸ್ಟಲ್ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ.












Click it and Unblock the Notifications