4 ನಾಯಿಮರಿಗಳ ಸಜೀವ ದಹನ, ಅಸಹಾಯಕವಾಗಿ ಕಣ್ಣೀರಿಟ್ಟ ತಾಯಿ ನಾಯಿ
ಹೈದರಾಬಾದ್, ನವೆಂಬರ್ 07: ನಾಲ್ಕು ನಾಯಿಮರಿಗಳನ್ನು ಅಮಾನವೀಯ ದುಷ್ಕರ್ಮಿಗಳು ಬೆಂಕಿ ಇಟ್ಟು ಸಜೀವವಾಗಿ ಕೊಂದ ಘಟನೆ ನಡೆದಿದೆ. ಈ ದುರ್ಘಟನೆಗೆ ಪ್ರತ್ಯಕ್ಷ ಸಾಕ್ಷಿಯಾಗಿ ನಿಂತಿದ್ದ ತಾಯಿ ನಾಯಿ, ಮರಿಗಳನ್ನು ಕಾಪಾಡಿಕೊಳ್ಳುವುದಕ್ಕೂ ಸಾಧ್ಯವಾಗದೆ ಅಸಹಾಯಕವಾಗಿ ಕಣ್ಣೀರಿಡುತ್ತಿದ್ದ ದೃಶ್ಯ ಕರುಳು ಕಿವುಚುವಂತಿದೆ.
ಮರಿಗಳನ್ನು ತಾಯಿ ನಾಯಿ ರಕ್ಷಿಸುವುದಕ್ಕೆ ಪ್ರಯತ್ನಿಸಿದರೂ ಸಾಧ್ಯವಾಗದೆ, ಬೊಗಳುತ್ತ ತನ್ನ ನೋವನ್ನು ವ್ಯಕ್ತಪಡಿಸುತ್ತಿತ್ತು. ಹತ್ತಿರದಲ್ಲೇ ಇದ್ದ ಪ್ರಾಣಿ ಪ್ರಿಯರು, ಪ್ರಾಣಿ ದಯಾಸಂಘದ ಸದಸ್ಯರು ಬಂದು ಮರಿಗಳನ್ನು ರಕ್ಷಿಸುವ ಪ್ರಯತ್ನ ಮಾಡಿದರಾದರೂ ಬಹುಪಾಲು ಸುಟ್ಟು ಹೋಗಿದ್ದ ನಾಯಿಗಳು ಮೃತವಾದವು.
ಈ ಘಟನೆಯ ಚಿತ್ರಗಳು ಮತ್ತು ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ನಾಯಿ ಮರಿಗಳಿಗೆ ಬೆಂಕಿ ಇಟ್ಟ ಅಮಾನವೀಯರನ್ನು ಹಿಡಿದು ಸರಿಯಾದ ಶಿಕ್ಷೆ ನೀಡಬೇಕು ಎಂಬ ಕೂಗು ಹೆಚ್ಚಾಗಿದೆ.

ಈ ಪ್ರದೇಶದ ಸಿಸಿಟಿವಿ ಫೂಟೇಜ್ ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಈ ಕೃತ್ಯ ಎಸಗಿದವರು ಯಾರು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.
ಪ್ರಾಣಿಗಳನ್ನು ವಿನಾಕಾರಣ ಹಿಂಸಿಸುವ ಇಂಥ ಹಲವು ಘಟನೆಗಳು ಆಗಾಗ ನಡೆಯುತ್ತಲೇ ಇವೆ. 2016 ರಲ್ಲಿ ನಾಯಿಮರಿಗಳನ್ನು ಒಂದೆಡೆ ಕಟ್ಟಿ ಹಾಕಿ ಅವುಗಳ ಸುತ್ತ ಬೆಂಕಿ ಹಾಕಿ ವಿಕೃತ ಆನಂದ ಅನುಭವಿಸುತ್ತಿದ್ದ ಕೆಲ ಯುವಕರನ್ನು ಬಂಧಿಸಲಾಗಿತ್ತು.
2017 ರಲ್ಲಿ ಚೆನ್ನೈ ನ ಇಬ್ಬರು ಹುಡುಗರು ತಾವು ಟೆರೆಸ್ ನಿಂದ ನಾಯಿಯನ್ನು ಎಸೆಯುತ್ತಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿದ್ದೂ ವಿವಾದ ಸೃಷ್ಟಿಸಿತ್ತು.
ಇತ್ತೀಚೆಗಷ್ಟೇ ಮಹಾರಾಷ್ಟ್ರದ ಯಾವತ್ಮಾಳ್ ಅರಣ್ಯದಲ್ಲಿ ಅವನಿ ಎಂಬ ನರಭಕ್ಷಕ ಹೆಣ್ಣು ಹುಲಿಯನ್ನು ಕೊಂದ ಘಟನೆ ವರದಿಯಾಗಿತ್ತು. ಇದನ್ನು ವಿರೋಧಿಸಿ ಈಗಲೂ ಪ್ರತಿಭಟನೆಗಳು ನಡೆಯುತ್ತಿವೆ.












Click it and Unblock the Notifications