ಹುಬ್ಬಳ್ಳಿ ದರ್ಗಾದ ಕಟ್ಟಡ ತೆರವು: ಉದ್ವಿಗ್ನ ವಾತಾವರಣ, ಬಿಗಿ ಭದ್ರತೆ, ಸೆಕ್ಷನ್ 144 ಜಾರಿ
ಹುಬ್ಬಳ್ಳಿ, ಡಿ. 21: ನಗರದ ಬೈರಿದೇವರಕೊಪ್ಪದಲ್ಲಿರುವ ಹಜರತ್ ಸೈಯದ್ ಮಹಮೂದ್ ಶಾ ಖಾದ್ರಿ ದರ್ಗಾದ ಒಂದು ಭಾಗವನ್ನು ಕೆಡವಲಾಗುತ್ತಿದ್ದು ನಗರದಲ್ಲಿ ಬುಧವಾರ ಉದ್ವಿಗ್ನ ವಾತಾವರಣ ಉಂಟಾಗಿದೆ.
ದರ್ಗಾ ಹಾಗೂ ಕೆಲವು ವಾಣಿಜ್ಯ ಮಳಿಗೆಗಳ ಕಟ್ಟಡಗಳ ತೆರವು ಕಾರ್ಯಾಚರಣೆ ಬೆಳ್ಳಂಬೆಳಿಗ್ಗೆ ಆರಂಭವಾಗಿದೆ. ರಸ್ತೆ ಅಗಲೀಕರಣ ಹಿನ್ನೆಲೆ ಹಜರತ್ ಸೈಯದ್ ಮಹಮೂದ್ ಶಾ ಖಾದ್ರಿ ದರ್ಗಾದ ಒಂದು ಭಾಗವನ್ನು ತೆರವುಗೊಳಿಸಲಾಗುತ್ತಿದೆ.
ಅಭಿವೃದ್ಧಿ ಕಾಮಗಾರಿಗಾಗಿ ದರ್ಗಾದ ಒಂದು ಭಾಗವನ್ನು ಕೆಡವಲು ಸ್ಥಳೀಯ ಮಹಾನಗರ ಪಾಲಿಕೆ ನಿರ್ಧರಿಸಿದ್ದು, ಹುಬ್ಬಳ್ಳಿಯಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಹುಬ್ಬಳ್ಳಿ ಮತ್ತು ಧಾರವಾಡ ನಗರಗಳಲ್ಲಿ ಸೆಕ್ಷನ್ 144 ರ ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಹುಬ್ಬಳ್ಳಿ - ಧಾರವಾಡ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯ ಪಕ್ಕದಲ್ಲೇ ಹಜರತ್ ಸೈಯದ್ ಮೆಹಮೂದ್ ಶಾ ಖಾದ್ರಿ ದರ್ಗಾ ಇದೆ. ದರ್ಗಾದ ಒಂದು ಭಾಗವನ್ನು ಕೆಡವಲು ಸ್ಥಳೀಯ ಮುಸ್ಲಿಮರ ಗುಂಪು ಆಕ್ಷೇಪಿಸಿದ ನಂತರ ಉದ್ವಿಗ್ನತೆ ಉಂಟಾಗಿದೆ.

ಅಭಿವೃದ್ಧಿ ಯೋಜನೆಗಾಗಿ ದರ್ಗಾದ ಒಂದು ಭಾಗವನ್ನು ಕೆಡವಲು ಕರ್ನಾಟಕ ಹೈಕೋರ್ಟ್ ಇತ್ತೀಚೆಗೆ ಅನುಮತಿ ನೀಡಿದೆ ಎಂದು ಮೇಯರ್ ಈರೇಶ್ ಅಂಚಟಗೇರಿ ಹೇಳಿದ್ದಾರೆ ಎಂದು ವರದಿಯಾಗಿದೆ. ದರ್ಗಾ ಉಸ್ತುವಾರಿಗಳು ಮೇಲ್ಮನವಿ ಸಲ್ಲಿಸುವುದಾಗಿ ಹೇಳಿದ್ದಾರೆ.












Click it and Unblock the Notifications