ಹುಬ್ಬಳ್ಳಿ-ಧಾರವಾಡ ನೂತನ ಪೊಲೀಸ್ ಆಯುಕ್ತರಾಗಿ ರೇಣುಕಾ ಸುಕುಮಾರ ಅಧಿಕಾರ ಸ್ವೀಕಾರ
ಹುಬ್ಬಳ್ಳಿ, ಆಗಸ್ಟ್, 10: ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರಾಗಿ ರೇಣುಕಾ ಸುಕುಮಾರ ಗುರುವಾರ (ಆಗಸ್ಟ್ 10) ಅಧಿಕಾರ ವಹಿಸಿಕೊಂಡಿದ್ದು, ರಾಜ್ಯದ ಮೊದಲ ಮಹಿಳಾ ಪೊಲೀಸ್ ಆಯುಕ್ತರು ಎನ್ನುವ ಖ್ಯಾತಿಗೆ ಪಾತ್ರರಾಗಿದ್ದಾರೆ.
ಅಧಿಕಾರ ವಹಿಸಿಕೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರೇಣುಕಾ ಸುಕುಮಾರ ಅವರು, ಹಿಂದೆ ಹುಬ್ಬಳ್ಳಿ-ಧಾರವಾಡ ಪೊಲೀಸ್ ಡಿಸಿಪಿಯಾಗಿ ಕರ್ತವ್ಯ ನಿರ್ವಹಿಸಿದ ಅನುಭವವಿದೆ. ಈಗಿರುವ ಅಧಿಕಾರಿಗಳಲ್ಲಿ ಬಹುತೇಕರು ಹಿರಿಯರು. ಹೀಗಾಗಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಮತ್ತಷ್ಟು ಅನುಕೂಲವಾಗಲಿದೆ. ಸರ್ಕಾರ ದೊಡ್ಡ ಜವಬ್ದಾರಿಯನ್ನು ನೀಡಿದ್ದು, ಅದನ್ನು ಪ್ರಾಮಾಣಿಕವಾಗಿ ನಿರ್ವಹಿಸಿಕೊಂಡು ಹೋಗುವುದಾಗಿ ತಿಳಿಸಿದರು.

ಈ ಮೊದಲು ಆಯುಕ್ತರಾಗಿದ್ದ ರಮಣ್ ಗುಪ್ತಾ ವರ್ಗಾವಣೆ ನಂತರ ಪೊಲೀಸ್ ಆಯುಕ್ತರ ಹುದ್ದೆಯನ್ನು ಪ್ರಭಾರದಲ್ಲಿ ಮುಂದೊರೆಸಲಾಗಿತ್ತು. ಸಂತೋಷ್ ಬಾಬು ಅವರು ಪ್ರಭಾರ ಆಯುಕ್ತರಾಗಿದ್ದರು. ಸರ್ಕಾರ ಎಸ್‌ಪಿ ಹಂತದ ಐಪಿಎಸ್ ಅಧಿಕಾರಿಯನ್ನು ನಿಯುಕ್ತಿಗೊಳಿಸಿ ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ರೇಣುಕಾ ಸುಕುಮಾರ ಅವರು ಅಧಿಕಾರ ವಹಿಸಿಕೊಂಡರು.
ನೂತನ ಜಿಲ್ಲಾಧಿಕಾರಿ ನೇಮಕ
ಇನ್ನು ಇತ್ತೀಚೆಗಷ್ಟೇ ಉಡುಪಿ ಜಿಲ್ಲೆಗೆ ನೂತನ ಜಿಲ್ಲಾಧಿಕಾರಿಯನ್ನು ಘೋಷಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿತ್ತು. ಈ ಹಿಂದೆ ಉಡುಪಿಯಲ್ಲಿ ಅಪರ ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸಿ ಅನುಭವವಿದ್ದ ಡಾ.ವಿದ್ಯಾ ಕುಮಾರಿ ಅವರನ್ನು ಉಡುಪಿ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು.
ನಿಕಟಪೂರ್ವ ಜಿಲ್ಲಾಧಿಕಾರಿಯಾಗಿದ್ದ ಕೂರ್ಮರಾವ್ ಅವರನ್ನು ರಾಜ್ಯ ಸರ್ಕಾರ ವರ್ಗಾವಣೆಗೊಳಿಸಿದ್ದು, ಮುಂದಿನ ಹುದ್ದೆಗೆ ನಿಯುಕ್ತಿಗೊಳಿಸಿಲ್ಲ. ಡಾ.ವಿದ್ಯಾಕುಮಾರಿ ಅವರು ಸದ್ಯ ತುಮಕೂರು ಜಿಲ್ಲಾ ಪಂಚಾಯತ್ ಸಿಇಒ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಇದೀಗ ರಾಜ್ಯ ಸರ್ಕಾರದ ಆದೇಶದ ಮೇರೆಗೆ ಉಡುಪಿ ಜಿಲ್ಲಾಧಿಕಾರಿಯಾಗಿ ನೇಮಕಗೊಂಡಿದ್ದಾರೆ.
ಡಾ.ವಿದ್ಯಾಕುಮಾರಿ ಅವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ಪಾವೂರು ಗ್ರಾಮದವರು. 2014ನೇ ಬ್ಯಾಚ್‌ನ ಐಎಎಸ್ ಅಧಿಕಾರಿ ವಿದ್ಯಾಕುಮಾರಿ ಅವರು ಆಗಿದ್ದಾರೆ. ಇನ್ನು ಈ ಹಿಂದೆ ಕೂರ್ಮರಾವ್ ಅವರು 2021ರ ಅಗಸ್ಟ್ 29ರಂದು ಉಡುಪಿ ಜಿಲ್ಲಾಧಿಕಾರಿ ಆಗಿ ಕರ್ತವ್ಯಕ್ಕೆ ಹಾಜರಾಗಿದ್ದರು.
ಉಡುಪಿ ಜಿಲ್ಲೆಯ ಉಸ್ತುವಾರಿ ಸಚಿವರು ಲಕ್ಷ್ಮೀ ಹೆಬ್ಬಾಳ್ಕರ್ ಅವರಾಗಿದ್ದು, ಇದೀಗ ಮಹಿಳಾ ಅಧಿಕಾರಿಯನ್ನೇ ಜಿಲ್ಲಾಧಿಕಾರಿಯನ್ನಾಗಿ ಸರ್ಕಾರ ನೇಮಕ ಮಾಡಿದ್ದು, ಉಡುಪಿಯಲ್ಲಿ ಆಡಳಿತ ವ್ಯವಸ್ಥೆ ಮಹಿಳಾ ಬಲ ಬಂದಂತಾಗಿದೆ.












Click it and Unblock the Notifications